ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನ ಚಾಕೊಲೇಟ್ ಹೀರೋ ಆಗಿ ನೋಡುವ ಕಾಲ ಮುಗಿದಿದೆ. ಇದರ ನಡುವೆ ಶಿವಣ್ಣ ವಯಸ್ಸಿಗೆ ತಕ್ಕಂತೆ ಕ್ಯಾರೆಕ್ಟರ್ ಆಯ್ಕೆ ಮಾಡಿಕೊಳ್ತಿದ್ದಾರೆ. ಇತ್ತೀಚೆಗೆ ವೇದ ಚಿತ್ರದಲ್ಲಿ ಮಧ್ಯವಯಸ್ಕನ ಪಾತ್ರದಲ್ಲಿ ಹುಚ್ಚು ಹಿಡಿಸಿದ್ದ ಶಿವಣ್ಣ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ಧಾರೆ. ಇನ್ನೂ ಸ್ವಲ್ಪ ವಯಸ್ಸಾದಂತೆ ಕಾಣ್ತಿದ್ದಾರೆ. ಭೈರವನ ಲುಕ್ʻನಲ್ಲಿ ಶಿವಣ್ಣ ಸಖತ್ ಆಗಿ ಕಾಣ್ತಿದ್ದಾರೆ. ವಯಸ್ಸಾದಂತೆ ಕಾಣುವ ಬಿಳಿ ಗಡ್ಡ, ಬೆನ್ನಿಗೆ ಬಾಣಗಳಿರುವ ಬತ್ತಳಿಕೆ, ಕುದುರೆ, ಬಾಣಗಳ ದಾಳಿ.. ಪೋಸ್ಟರ್ ಅಂತೂ ಸಖತ್ತಾಗಿದೆ. ಹೇಮಂತ್ ರಾವ್ ಅವರ ಭೈರವನ ಕೊನೆ ಪಾಠ ಚಿತ್ರದ ಫಸ್ಟ್ ಲುಕ್ ಇದು. ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದ್ದು, ಸಿನಿಮಾ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ.
ಭೈರವನ ಕೊನೆ ಪಾಠ’ ಚಿತ್ರವನ್ನು ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅಭಿನಯದ ಈ ಸಿನಿಮಾ ಭೈರತಿ ರಣಗಲ್, ಉತ್ತರಕಾಂಡ, 45 ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ಒಂದು ಹಂತಕ್ಕೆ ಬಂದ ಮೇಲೆ ಸೆಟ್ಟೇರಲಿದೆ.
ಆದರೆ ಒಂದಂತೂ ಸತ್ಯ. ಈ ಬಾರಿಯೂ ಹೇಮಂತ್ ರಾವ್ ಹೊಸ ಕಥೆ ಹೇಳೋಖೆ ಹೊರಟಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಗಳ ಬಳಿಕ ಹೇಮಂತ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಇದು.
ಪಾತ್ರ ಯಾವುದೇ ಇರಲಿ, ಪಾತ್ರಕ್ಕೆ ತಕ್ಕಂತೆ ಮೌಲ್ಡ್ ಆಗುವುದು ಶಿವಣ್ಣಗೆ ಸಿದ್ಧಿಸಿದೆ. ಇದುವರೆಗೆ ಶಿವಣ್ಣ ಹಲವಾರು ವೇಷ ತೊಟ್ಟಿದ್ದಾರೆ. ಅಭಿಮಾನಿಗಳಿಗೆ ಆ ಎಲ್ಲ ವೇಷಗಳಲ್ಲಿ ಇಷ್ಟವಾಗದೆ ಇರುವ ಎರಡು ಗೆಟಪ್ʻಗಳೆಂದರೆ.. ಸತ್ಯ ಈಸ್ ಇನ್ ಲವ್ ಚಿತ್ರದ ಲುಕ್ಕು ಹಾಗೂ ಪರಮೇಶಿ ಪಾನ್‌ವಾಲಾ ಚಿತ್ರದ ಲುಕ್ಕು. ಅವೆರಡನ್ನು ಹೊರತು ಪಡಿಸಿದ್ರೆ ಶಿವಣ್ಣ ಅವರ ಇನ್ಯಾವುದೇ ಲುಕ್ ಕೆಟ್ಟದಾಗಿಲ್ಲ. ಈಗ ಭೈರವನ ಲುಕ್ಕು. ಒಂದ್ ಲೆವೆಲ್ ಮೇಲೇನೇ ಇದ್ಧ ಹಂಗಿದೆ.



