ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕಳೆದ ಭಾನುವಾರ ನಡೆದಿದ್ದ ಯುವ ಬ್ರಿಗೇಡ್ ಸಂಘಟನೆ ಸಂಚಾಲಕ ವೇಣುಗೋಪಾಲ ನಾಯಕ (31) ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ ನಾಯಕ್ (Venu Gopal) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಣಿಕಂಠ, ಸಂದೇಶ, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್ ಬಂಧಿತ ಆರೋಪಿಗಳು. ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಘಟನೆ ಈಗ ಸಂಪೂರ್ಣ ರಾಜಕೀಯ ತಿರುವು ಪಡೆದುಕೊಂಡಿದೆ. ವಿಧಾನಸಭೆಯಲ್ಲೂ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇದು ರಾಜಕೀಯ ಹತ್ಯೆ ಎಂದು ಬಿಜೆಪಿ ಆರೋಪಿಸಿದರೆ, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ ಎನ್ನುತ್ತಿದೆ ಕಾಂಗ್ರೆಸ್ ಸರ್ಕಾರ.
ಬಿಜೆಪಿಯ ಸಿಟಿ ರವಿ (C T Ravi), ಕೊಲೆಯಾದ ಗೋಪಾಲ್ ಮನೆಗೆ ಭೇಟಿ ನೀಡಿ, ಪತ್ನಿ ಪೂರ್ಣಿಮಾ ಅವರಿಗೆ ಸಾಂತ್ವನ ಹೇಳಿದ್ದಾರೆ. ಬಿಜೆಪಿ ವತಿಯಿಂದ 5 ಲಕ್ಷ ಚೆಕ್ ಕೊಟ್ಟಿದ್ದಾರೆ. ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯವರೂ (chakravarthi suleibele) ಪೂರ್ಣಿಮಾ ಅವರಿಗೆ ಸಾಂತ್ವನ ಹೇಳಿದ್ದಾರೆ. ಆರೋಪಿಯಲ್ಲಿ ಒಬ್ಬ ಸುನಿಲ್ ಬೋಸ್ (Sunil bose) ಅವರ ಜೊತೆ ಇರುವ ಫೋಟೋ ತೋರಿಸಿ ಕೊಲೆಯಾದ ಗೋಪಾಲ್, ಹಿಂದೂ ಸಂಘಟನೆ ಮುಖಂಡನಾಗಿದ್ದ. ದಲಿತನಾಗಿದ್ದ. ಎಚ್.ಸಿ.ಮಹದೇವಪ್ಪನವರ ವಿರುದ್ಧ ಹೋರಾಟದಲ್ಲಿ ಗುರುತಿಸಿಕೊಂಡಿದ್ದ. ಹೀಗಾಗಿಯೇ ಮೆರವಣಿಗೆ ನೆಪ ಮಾಡಿಕೊಂಡು ನಡೆದಿರುವ ಹತ್ಯೆಯ ಹಿಂದೆ ಇವರ ಕೈವಾಡ ಇರಬಹುದು. ತನಿಖೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಅತ್ತ ಸುನಿಲ್ ಬೋಸ್ ಕೂಡಾ ಪೂರ್ಣಿಮಾ ಅವರಿಗೆ 50 ಸಾವಿರ ಹಣ ನೀಡಿದ್ದಾರೆ. ಕೊಲೆಯಾದ ಗೋಪಾಲ್ ದಲಿತನಲ್ಲ. ನಾಯಕರ ಹುಡುಗ. ಕೊಲೆ ಮಾಡುವುದು ನಮ್ಮ ಸಂಸ್ಕøತಿ ಅಲ್ಲ. ವೈಯಕ್ತಿಕ ದ್ವೇಷದ ಕೊಲೆಯನ್ನು ರಾಜಕೀಯಕ್ಕೆ ತಿರುಗಿಸಬೇಡಿ. ಕೊಳಕು ರಾಜಕೀಯ ಮಾಡಬೇಡಿ. ಕೊಲೆ ಆರೋಪಿಗಳಲ್ಲಿ ಎ-6 ಬಿಜೆಪಿ ಕಾರ್ಪೊರೇಟರ್ ಎಂದು ಎತ್ತಿ ತೋರಿಸಿದ್ದಾರೆ.
ಇದು ವೈಯಕ್ತಿಕ ದ್ವೇಷ ಅಲ್ಲ ಎನ್ನುವ ಸಿಟಿ ರವಿ, ಇದು ಪೂರ್ವ ನಿಯೋಜಿತ ಹತ್ಯೆ, ಸಂಚು ಮಾಡಿಯೇ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ. ದೇಹದ ಸುಮಾರು 30 ಕಡೆ ಇರಿದಿದ್ದಾರೆ, ಶಸ್ತ್ರಾಸ್ತ್ರ ಬಳಸಿ ಕೊಲೆ ಮಾಡಲಾಗಿದೆ ಎಂದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಪ್ರಿಯಾಂಕ್ ಖರ್ಗೆ ದಲಿತರೆಂದರೆ ನಿಮಗೇಕಿಷ್ಟು ಅಸಹನೆ.. ಕೊಲೆಯಾಗುವವರೆಲ್ಲ ದಲಿತರು. . ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ. ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು ಎಂದು ಉತ್ತರ ಕೊಟ್ಟಿದ್ದಾರೆ.
ಕೊಲೆಯಾದ ಗೋಪಾಲ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ಎಚ್.ಸಿ.ಮಹದೇವಪ್ಪ (H C Mahadevappa)ಸೋತಿದ್ದರು. ಈ ಬಾರಿ ಗೆದ್ದಿದ್ದಾರೆ. ಸಚಿವರೂ ಆಗಿದ್ದಾರೆ. ಮಹದೇವಪ್ಪ ಆಪ್ತರು ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಆರೋಪಿಗಳಲ್ಲಿ ಬಿಜೆಪಿ ಕಾರ್ಯಕರ್ತನೂ ಇದ್ದಾನೆ, ನೋಡಿ ಎನ್ನುತ್ತಿದೆ ಕಾಂಗ್ರೆಸ್.



