ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ. 2016ರಲ್ಲಿ ನಡೆದಿದ್ದ ಆ ಘಟನೆ ಸೃಷ್ಟಿಸಿದ್ದ ಸಂಚಲನ ಇದೆಯಲ್ಲ.. ಅದು ವಿಶೇಷ. ಯಾಕೆಂದರೆ.. ಆ ಘಟನೆ ಖಂಡಿಸಿ ದೇಶಾದ್ಯಂತ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಬೀದಿಗಿಳಿದಿದ್ದವು. ನೂರಾರು ಸಾಹಿತಿಗಳು ತಮಗೆ ಬಂದ ಪ್ರಶಸ್ತಿಗಳನ್ನು ವಾಪಸ್ ಮಾಡಿ ಪ್ರತಿಭಟಿಸಿದ್ದರು. ವಿದೇಶಗಳಲ್ಲಿಯೂ ವೇಮುಲ ಆತ್ಮಹತ್ಯೆ ಪ್ರಕರಣ ದೊಡ್ಡದಾಗಿಯೇ ಬಿಂಬಿಸಲ್ಪಟ್ಟು, ಜಗತ್ತಿನೆಲ್ಲೆಡೆ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಕೆಲವೊಂದು ದೇಶಗಳೂ ಅನಗತ್ಯವಾಗಿ ಈ ಘಟನೆಗೆ ಮೂಗು ತೂರಿಸಿದ್ದವು. ಈಗ ಫೈನಲ್ ರಿಪೋರ್ಟ್ ಬಂದಿದೆ.
ಮುಖವಾಗಿ ರೋಹಿತ್ ವೇಮುಲಾ ದಲಿತನೇ ಅಲ್ಲ. ನಕಲಿ ಜಾತಿ ಪ್ರಮಾಣದ ವಿಷಯ ಬಹಿರಂಗವಾದರೆ ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ವಿಷಯ ಪೊಲೀಸರ ಪೈನಲ್ ವರದಿಯಲ್ಲಿದೆ.
ಘಟನೆಯ ವಿವರ : ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಗುಂಟೂರಿನ ರೋಹಿತ್ ಸೆಂಟ್ರಲ್ ಯುನಿವರ್ಸಿಟಿಯ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿವಿಯಲ್ಲಿ ಅನುಚಿತ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪದಲ್ಲಿ ಐವರು ವಿದ್ಯಾರ್ಥಿಗಳು ಅಮಾನತಾಗಿದ್ದರು. ಐವರಲ್ಲಿ ವೇಮುಲ ಕೂಡಾ ಒಬ್ಬರಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಆರು ತಿಂಗಳಿಂದ ವಿದ್ಯಾರ್ಥಿ ವೇತನವೂ ಸಿಕ್ಕಿಲ್ಲ ಎಂದು ಬರೆದಿಟ್ಟು, ಮನುಷ್ಯನನ್ನು ಮತವಾಗಿ, ವಸ್ತುವಾಗಿ, ಸಂಖ್ಯೆಯಾಗಿ ಪರಿಗಣಿಸಿ ಆತನ ಮೌಲ್ಯವನ್ನೇ ಕುಗ್ಗಿಸಲಾಗುತ್ತಿದೆ. ಆತನಿಗೂ ಒಂದು ಮನಸ್ಸಿದೆ ಎಂದು ಯಾವತ್ತೂ ಪರಿಗಣಿಸಿಲ್ಲ ಎಂದು ಹೇಳಿ ನೇಣಿಗೆ ಕೊರಳೊಡ್ಡಿದ್ದರು.
ಆತ್ಮಹತ್ಯೆ ಮಾಡಿಕೊಂಡಿದ್ದು ವಿವಿಯ ಹಾಸ್ಟೆಲ್ʻನಲ್ಲಿ. ಆತ ದಲಿತ. ಮೇಲಾಗಿ ಆತನ ವಿರುದ್ಧ ಕ್ರಮಕ್ಕೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸೂಚನೆ ನೀಡಿದ್ದರು. ಸಚಿವ ಬಂಡಾರು ಪತ್ರ ಬರೆದಿದ್ದರು. ಜೊತೆಗೆ ಸ್ಥಳೀಯ ಬಿಜೆಪಿ ಎಂಎಲ್‌ಸಿ ಎನ್. ರಾಮಚಂದರ್ ರಾವ್, ಎಬಿವಿಪಿ ಮುಖಂಡರಾದ ಸುಶೀಲ್ ಕುಮಾರ್, ಕೃಷ್ಣ ಚೈತನ್ಯ ವಿರುದ್ಧವೂ ಆರೋಪಗಳಿದ್ದವು ಎಂಬ ಕಾರಣಕ್ಕೆ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಅಂತಿಮ ವರದಿಯಲ್ಲೇನಿದೆ..?
ರೋಹಿತ್ ವೇಮುಲ ದಲಿತ ಜಾತಿಗೆ ಸೇರಿದವನಲ್ಲ. ರೋಹಿತ್ ತಾಯಿ ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದರು. ಇದು ರೋಹಿತ್ ವೇಮುಲಾಗೆ ತಿಳಿದಿದ್ದು. ತನ್ನ ಅಸಲಿ ಜಾತಿ ಎಲ್ಲಿ ಬಹಿರಂಗವಾಗುತ್ತದೆ ಅನ್ನೋ ಭಯದಿಂದ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಜಾತಿ ನಕಲಿ ಮಾಡಿರುವುದು ಇತರರಿಗೆ ಗೊತ್ತಾದರೆ ಗೌರವ ಹಾಳಾಗುತ್ತದೆ. ಇದೇ ಜಾತಿ ಮುಂದಿಟ್ಟುಕೊಂಡು ಕೆಲ ರಾಜಕೀಯ ಮಾಡಿರುವುದಾಗಿ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.
ತನ್ನ ಜಾತಿ ಬಹಿರಂಗವಾದರೆ ತಾನು ಅನುಭವಿಸುತ್ತಿರುವ ಸವಲತ್ತು, ಶೈಕ್ಷಣಿಕ ಪದವಿಯನ್ನು ಕಳೆದುಕೊಳ್ಳಬೇಕಾಗುತ್ತೆ ಅನ್ನೋ ಭಯ ರೋಹಿತ್‌ಗೆ ಕಾಡಿತ್ತು. ವಿದ್ಯಾಭ್ಯಾಸದಲ್ಲೂ ರೋಹಿತ್ ಹಿಂದಿದ್ದ. ಒಂದು ಪಿಹೆಚ್‌ಡಿ ಅರ್ಧಕ್ಕೆ ನಿಲ್ಲಿಸಿ ಮತ್ತೊಂದು ವಿಷಯ ಆಯ್ಕೆ ಮಾಡಿಕೊಂಡಿದ್ದ. ಶೈಕ್ಷಣಿಕ ವಿಷಯಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದ. ಈ ರೀತಿಯ ಕೆಲ ಕಾರಣಗಳು ರೋಹಿತ್ ವೇಮುಲಾ ಆತ್ಮಹತ್ಯೆ ಕಾರಣವಾಗಿದೆ ಎಂದು ತೆಲಂಗಾಣ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.



