ಧರ್ಮಸ್ಥಳದ ಬುರುಡೆ ಪುರಾಣದಲ್ಲಿ ಸಂಚಲನ ಮೂಡಿಸಿದ್ದು ಚಿನ್ನಯ್ಯ ಅಂದ್ರೆ ಮಾಸ್ಕ್ ಮ್ಯಾನ್. ಆತನ ಮಾತುಕಥೆ, ವರ್ತನೆ ಹೇಗಿತ್ತೆಂದರೆ ಧರ್ಮಸ್ಥಳ ಹಾಗೂ ಹೆಗ್ಗಡೆಯವರನ್ನು ನಂಬುವ ಭಕ್ತರೇ ಅನುಮಾನ ಪಡುವಂತಿದ್ದವು. ಈಗ ಆತನನ್ನು ವೀರೇಂದ್ರ ಹೆಗ್ಗಡೆಯವರೇ ರಕ್ಷಣೆ ಮಾಡ್ಬೇಕಂತೆ. ಹೀಗಂತ ಹೇಳಿರೋದು ಸ್ವತಃ ಚಿನ್ನಯ್ಯನ ಪತ್ನಿ. ‘ದಮ್ಮಯ್ಯ ಹೆಗ್ಗಡೆಜೀ ಅವರೇ ಚಿನ್ನಯ್ಯನ್ನು ರಕ್ಷಿಸಿ ನನ್ನ ಹತ್ತಿರ ಸೇರಿಸಿ…’ ಎಂದು ಕಣ್ಣೀರಿಟ್ಟಿದ್ದಾರೆ ಚಿನ್ನಯ್ಯನ ಪತ್ನಿ ಮಲ್ಲಿಕಾ. ಅಂದಹಾಗೆ ಈ ಮಲ್ಲಿಕಾ, ಚಿನ್ನಯ್ಯನ ಎರಡನೇ ಪತ್ನಿ. ಮೊದಲನೇ ಪತ್ನಿ ಮಂಡ್ಯದವರು.
ರಿಪಬ್ಲಿಕ್ ಟಿವಿ ಕನ್ನಡಕ್ಕೆ ಸಂದರ್ಶನ ನೀಡಿರುವ ಮಲ್ಲಿಕಾ ʻʻ ಧರ್ಮಸ್ಥಳ ಕಾಡಿನಲ್ಲಿ ಹೆಣಗಳನ್ನು ಯಜಮಾನರು ಹೂತಿಲ್ಲ, ಬದಲು ಶವಗಳನ್ನು ಹೂತ ಬಗ್ಗೆ ತಿಮರೋಡಿ, ಮಟ್ಟೆಣ್ಣೆವರ್, ವಿಠಲ ಗೌಡ ಅವರೇ ಗುರುತು ಹಾಕುವಂತೆ ಹೇಳುತ್ತಿದ್ದರು. ಆದರೆ ಉತ್ಖನನ ವೇಳೆ ಚಿನ್ನಯ್ಯ ತೋರಿಸಿದ ಸ್ಥಳಗಳಲ್ಲಿ ತಲೆಬುರುಡೆ ಇರುತ್ತಿರಲಿಲ್ಲ. ಅದೇ ವಿಠಲಗೌಡ ತೋರಿಸಿದ ಜಾಗದಲ್ಲಿ ತಲೆಬುರುಡೆ ಕಂಡುಬರುತ್ತಿತ್ತು. ಅದನ್ನು ಅವರೇ ಮುಂಚಿತವಾಗಿ ತಂದು ಇರಿಸುತ್ತಿದ್ದರು ಎಂದು ತಿಳಿಯಬಹುದುʼʼ ಎಂದಿದ್ದಾರೆ ಮಲ್ಲಿಕಾ.
ಮಟ್ಟಣ್ಣವರ್, ತಿಮ್ಮರೋಡಿ ಹೇಳಿದಂತೆ ಚಿನ್ನಯ್ಯ ಕೇಳಬೇಕಿತ್ತು. ಚಿನ್ನಯ್ಯನ ಬಗ್ಗೆ ಅವರಿಗೆ ಸ್ವಲ್ಪವೂ ಕರುಣೆ ಇರಲಿಲ್ಲ. ಅದು ಹೋದರೆ ಹೋಗಲಿ ಎಂದು ಚಿನ್ನಯ್ಯನ ಬಗ್ಗೆ ತಿಮರೋಡಿ ಹೇಳುತ್ತಿದ್ದರು ಎಂದಿರುವ ಮಲ್ಲಿಕಾ, ಈ ವೇಳೆ ಚಿನ್ನಯ್ಯ ಸತ್ತರೂ ತಮಗೆ ಲಾಭ ಎಂಬ ಅರ್ಥದಲ್ಲಿ ಮಾತಾಡ್ತಿದ್ದರಂತೆ. ಚಿನ್ನಯ್ಯ ಸತ್ತು ಹೋದರೆ ದೇವಸ್ಥಾನದವರ ಮೇಲೆ ಹೇಳುತ್ತಾರೆ ಎಂದಿರುವ ಮಲ್ಲಿಕಾ ‘ಅಯ್ಯೋ ವೀರೇಂದ್ರ ಹೆಗ್ಗಡೆಜೀ ಅವರೇ, ನೀವು ಎಂದರೆ ನಮಗೆ ತುಂಬಾ ಇಷ್ಟ. ಮಂಜುನಾಥ ಸ್ವಾಮಿಯಷ್ಟು ಇಷ್ಟ… ನಮ್ಮ ಯಜಮಾನರು ಚಿನ್ನಯ್ಯನನ್ನು ಕರೆತಂದು ನಮ್ಮತ್ರ ಸೇರಿಸಬೇಕು. ನಿಮ್ಮ ಕಾಲಿಗೆ ಬೀಳ್ತೀನಿ..’ ಎಂದು ಸ್ಟುಡಿಯೋದಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.
ವೀರೇಂದ್ರ ಹೆಗ್ಗಡೆ ಏನು ಹೇಳಿದ್ರು..?
ಇತ್ತೀಚೆಗೆ ನಡೆದ ಆಘಾತಗಳಿಂದ ನಾನು ಕೂಡ ಜರ್ಜರಿತಗೊಂಡಿದ್ದೇನೆ. ಅನಾವಶ್ಯಕವಾಗಿ ಷಡ್ಯಂತ್ರ ನಡೆಯುತ್ತಿದೆ. ಷಡ್ಯಂತ್ರ ಎಂದು ಕೋರ್ಟ್‍ನಲ್ಲೇ ಗೊತ್ತಾಗಿದೆ. ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ, ಆದು ಜಾರಿ ಕೆಳಗೆ ಬರಲೇ ಬೇಕು. ಅದೇ ರೀತಿ ಮುಂದಕ್ಕೆ ಎಲ್ಲಾ ಕಷ್ಟಗಳು ಹೋಗುತ್ತವೆ. ಇದು ವೀರೇಂದ್ರ ಹೆಗ್ಗಡೆಯವರ ಮಾತು.
ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ ಎಸ್.ಡಿ.ಎಂ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಜೊತೆ ಮಾತನಾಡಿರುವ ಹೆಗ್ಗಡೆ ಈ ವಿಚಾರದ ಬಗ್ಗೆ ಈಗ ಹೆಚ್ಚು ಮಾತನಾಡೋದಿಲ್ಲ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಚಿನ್ನಯ್ಯನ ಕಥೆ ಏನು..?
ಈ ವೇಳೆ ಚಿನ್ನಯ್ಯನ ಅಕೌಂಟಿಗೆ ಹಲವರು ಲಕ್ಷ ಲಕ್ಷ ಹಣ ಹಾಕಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಂ ಮೂಲಕ ಸುಮಾರು ಜನ ಹಣ ಟ್ರಾನ್ಸ್‌ಫರ್ ಮಾಡಿದ್ದಾರಂತೆ. ಹಾಗೆ ಹಣ ಕೊಟ್ಟಿರುವ ಒಬ್ಬೊಬ್ಬರಿಗೂ ನೋಟಿಸ್ ಹೋಗಲಿದ್ದು, ಎಲ್ಲರೂ ಬಂದು ಎಸ್‌ಐಟಿ ಎದುರು ಮಾಹಿತಿ ನೀಡಬೇಕು. ಹಣ ಯಾಕೆ ಕೊಟ್ಟೆ ಎಂದು ವಿವರ ಕೊಡಲೇಬೇಕು.



