ವೀರಶೈವರು ಬೇರೆಯಲ್ಲ. ಲಿಂಗಾಯತರು ಬೇರೆಯಲ್ಲ ಎಂಬ ವಾದಗಳು ನಡೆಯುತ್ತಿರುವಾಗಲೇ.. ನಾವೇ ಬೇರೆ.. ನೀವೇ ಬೇರೆ ಎಂಬ ಸಂದೇಶ ರವಾನಿಸಿದ್ದಾರೆ ಮಠಾಧೀಶರು. ಅದಕ್ಕೆ ಕಾರಣವಾಗಿರುವುದು ಜಾತಿ ಸಮೀಕ್ಷೆ ಎನ್ನುವುದೂ ನಿಜ. ಇದೀಗ ಜಾತಿ ಸಮೀಕ್ಷೆಯ ಕಾಲಂನಲ್ಲಿ ಲಿಂಗಾಯತರು ವೀರಶೈವರು ʻವೀರಶೈವ ಲಿಂಗಾಯತʼ ಎಂದು ಬರೆಸಬೇಕು. ಹಾಗು ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಬೇಕು ಎಂದು ಇತ್ತೀಚೆಗೆ ʻಅಖಿಲ ಭಾರತ ವೀರಶೈವ ಮಹಾಸಭಾʼ ಮನವಿ ಮಾಡಿಕೊಂಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭೆ, ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಮಠಾಧೀಶರ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ.
ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಮಾದಾರ್ ಅವರ ವಾದ ಇದು. ಲಿಂಗಾಯತ ಧರ್ಮದಲ್ಲಿ 101 ಜಾತಿಗಳಿದ್ದು ಅದರಲ್ಲಿ ವೀರಶೈವವೂ ಒಂದು ಜಾತಿ. ಲಿಂಗಾಯತದಲ್ಲಿ ವೀರಶೈವ ಇದೆ, ವೀರಶೈವದಲ್ಲಿ ಲಿಂಗಾಯತ ಇಲ್ಲ. ಧರ್ಮವು ಜಾತಿಗಿಂತ ದೊಡ್ಡದು. ಅದಕ್ಕಾಗಿ ʻವೀರಶೈವ ಲಿಂಗಾಯತʼ ಎಂಬುದನ್ನು ಒಪ್ಪುವುದಿಲ್ಲ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವುದು ಬೇಡ ಎಂಬ ವಾದ ಸರಿ. ಧರ್ಮದ ಕಾಲಂನಲ್ಲಿ ಎಲ್ಲ ಲಿಂಗಾಯತರೂ ʻಲಿಂಗಾಯತʼ ಎಂದೇ ಬರೆಸಬೇಕು.
ವೀರಶೈವ ಲಿಂಗಾಯತ ಧರ್ಮಕ್ಕೆ ವಿರೋಧ ಏಕೆ..?
2002ರಲ್ಲಿ ಎಲ್ಲ ಲಿಂಗಾಯತರು ಮತ್ತು ವೀರಶೈವರನ್ನು ವೀರಶೈವ ಲಿಂಗಾಯತ ಎಂದು ಪರಿಗಣಿಸಲು ರಾಜ್ಯ ಸರಕಾರದ ಆದೇಶವಾಗಿದ್ದು, ಇದು ಸಂಪೂರ್ಣ ತಪ್ಪಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆ. ಆದೇಶ ಪುನರ್ ಪರಿಶೀಲನೆ ನಡೆಸಲು ಹೈಕೋರ್ಟ್ ಆದೇಶಿಸಿದ್ದರೂ ಸರಕಾರ ತಪ್ಪನ್ನು ಸರಿಪಡಿಸಿಲ್ಲ. ಈ ನಿರ್ಲಕ್ಷ್ಯ ಪ್ರಶ್ನಿಸಿ ಹಲವು ಲಿಂಗಾಯತರು ರಿಟ್ ಪಿಟಿಷನ್ ಸಲ್ಲಿಸಿದ್ದು ಒಂದೆರಡು ತಿಂಗಳಲ್ಲಿ ಸ್ಪಷ್ಟ ಸೂಚನೆ ಬರುವ ನಿರೀಕ್ಷೆ ಎನ್ನುವುದು ಈ ಸಂಘಟನೆಯವರ ವಾದ.
ತಪ್ಪು ಎಲ್ಲಿ ಆಯ್ತು..?
2002ರಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಹಾಗೂ ದಿ.ಎಂಪಿ ಪ್ರಕಾಶ್ ಅವರು ಮಾಡಿದ ತಪ್ಪುಗಳಿಂದ ಈ ವಿವಾದ ಸೃಷ್ಟಿಯಾಯ್ತು. ಇವತ್ತಿಗೂ ರಂಭಾಪುರಿ ಶ್ರೀಗಳ ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ ಎಂದೇ ಇದೆ ಎನ್ನುವ ಒಕ್ಕೂಟದ ಸದಸ್ಯರು, ವೀರಶೈವರು, ಲಿಂಗಾಯತ ಧರ್ಮದಲ್ಲಿನ ಒಂದು ಉಪಪಂಗಡ ಅಷ್ಟೇ ಎಂದು ವಾದಿಸುತ್ತಾರೆ.1952ರಲ್ಲಿ ಹಿಂದೂ ಸಂಹಿತೆ ಮೇಲಿನ ಚರ್ಚೆಯ ವೇಳೆ ಮಸೂದೆಯಲ್ಲಿದ್ದ ಲಿಂಗಾಯತ ಪದವನ್ನೇ ತೆಗೆದು ಹಾಕಬೇಕು ಎಂಬ ಒತ್ತಾಯ ಬಂದಿತ್ತಂತೆ. ಅದು ವಿಫಲವಾಗಿ ವೀರಶೈವ ಮತ್ತು ಲಿಂಗಾಯತ ಎರಡೂ ಉಳಿಯಿತತಂತೆ. ಆದರೆ ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎಂದು ಕಾನೂನಿನ ಮೂಲಕ ಗೊತ್ತಾಯಿತಂತೆ. ಇದು ಜಾಮದಾರ್ ವಾದ.
ಒಟ್ಟಿನಲ್ಲಿ ಜಾಮದಾರ್ ಅವರ ಪ್ರಕಾರ ವೀರಶೈವರೇ ಬೇರೆ. ಲಿಂಗಾಯತರೇ ಬೇರೆ. ಲಿಂಗಾಯತರದ್ದೇ ಪ್ರತ್ಯೇಕ ಧರ್ಮ. ಅವರು ವೀರಶೈವರೂ ಅಲ್ಲ. ಹಿಂದೂಗಳೂ ಅಲ್ಲ.



