ವೀರಶೈವ ಲಿಂಗಾಯತರಲ್ಲಿ ಜಂಗಮ ಎಂಬ ಉಪಜಾತಿ ಇದೆ. ವೀರಶೈವರಲ್ಲಿ ಜಂಗಮರಿಗೆ ವಿಶೇಷ ಗೌರವವೂ ಇದೆ. ಜಂಗಮ ಎಂದರೆ ನಿರಂತರವಾದ ಚೈತನ್ಯ. ಚೈತನ್ಯರೂಪಿ ಅರಿವು ಎಂಬ ಅರ್ಥವೂ ಇದೆ. ಸಾಮಾನ್ಯವಾಗಿ ವೀರಶೈವ ಜಂಗಮರು ಲಿಂಗ, ವಿಭೂತಿ, ಜೋಳಿಗೆ, ಬೆತ್ತ, ಜಂಗು ಹಿಡಿದು ಕಂತೆ ಭಿಕ್ಷೆ ಮಾಡುತ್ತಾರೆ. ಪೌರೋಹಿತ್ಯವೇ ಇವರ ವೃತ್ತಿ. ಇವರು ಸನ್ಯಾಸಿಯಲ್ಲ. ಆದರೆ ಸಮಾಜದಲ್ಲಿ ಗುರುವಿನ ಸ್ಥಾನ ಇರುತ್ತದೆ.
ಇವರನ್ನು ಕರ್ನಾಟಕದ ವಿವಿಧೆಡೆ ಸಾರುವ ಜಂಗಮ, ಅಯ್ಯನವರು, ಕಂತಿ ಜಂಗಮ, ಸ್ವಾಮಿಗಳು, ಅಯ್ನೋರು, ಆರಾಧ್ಯರು, ಹಿರೇಮಠದವರು.. ಎಂದೆಲ್ಲ ಕರೆಯುತ್ತಾರೆ. ಇವರು ವೀರಶೈವ ಜಂಗಮರು.
ಆದರೆ.. ಇನ್ನೂ ಒಂದು ಪಂಗಡ ಇದೆ. ಅದಕ್ಕೆ ಬೇಡ ಜಂಗಮ ಅಥವಾ ಬುಡುಗು ಜಂಗಮ ಎಂದೂ ಕರೆಯುತ್ತಾರೆ. ಅವರು ಶೋಷಿತರು.
ಇತ್ತೀಚೆಗೆ ವೀರಶೈವ ಜಂಗಮರೂ ಕೂಡಾ ತಾವು ಬೇಡು/ಬೇಡುವ/ಬುಡುಗ ಜಂಗಮ ಎಂದು ಹಕ್ಕು ಮಂಡಿಸುತಿದ್ದಾರೆ ಎಂಬ ಅರ್ಜಿಯ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೀತು. ಈ ವೇಳೆ ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ ಎಂದು ಕಲಬುರಗಿ ಪೀಠ ಹೇಳಿದೆ. ಕಲಬುರಗಿ ಪೀಠದಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ಕಲಬುರಗಿಯ ನ್ಯಾಯಪೀಠ ವಿಚಾರಣೆ ನಡೆಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಿಂಗಾಯತರಲ್ಲಿನ ಜಂಗಮರು ತಾವು ಬೇಡ ಅಥವಾ ಬುಡ್ಗ ಜಂಗಮರೆಂದು ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವೀರಶೈವರಲ್ಲಿನ ಜಂಗಮರು ಪೂಜಿಸುವ ವರ್ಗದವರು ಮತ್ತು ಅವರು ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದಲ್ಲಿ ತಳವರ್ಗದ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಲಿಂಗಾಯತರಲ್ಲಿನ ಜಂಗಮರು ತಾವು ಬೇಡ ಜಂಗಮರೆಂದು ಹಕ್ಕು ಮಂಡಿಸುತ್ತಿರುವುದರ ಕುರಿತು ಸೂಕ್ಷ್ಮ ಅವಲೋಕನ ನಡೆಸಲಾಗಿದೆ. ಜಂಗಮ ಲಿಂಗಾಯತರನ್ನು ಬೇಡ ಜಂಗಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜಾತಿ ಹೆಸರಿಗೆ ಒಂದೇ ಸಮಾನ ಹೆಸರಿದೆ ಎನ್ನುವ ಕಾರಣಕ್ಕೆ ಆ ಜಾತಿಗಳಿಗೆ ಪರಿಶಿಷ್ಟ ಜಾತಿಗಳ ಸ್ಥಾನಮಾನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಪ್ರಭುದೇವ ಮಲ್ಲಿಕಾರ್ಜುನಯ್ಯ ವರ್ಸಸ್ ರಾಮಚಂದ್ರ ವೀರಪ್ಪ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ಅದರಂತೆ ಕೋರ್ಟ್ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಯ ವರ್ಗೀಕರಣದಲ್ಲಿ ವ್ಯಾಖ್ಯಾನ ಮಾಡಲು, ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವುದಿಲ್ಲ. ಬೇಡ ಜಂಗಮ ಅಥವಾ ಬುಡ್ಗ ಜಂಗಮರಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಜಂಗಮರನ್ನು ಸೇರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವೀರಶೈವ ಲಿಂಗಾಯತರಲ್ಲಿನ ಜಂಗಮರು OBC 3Bಗೆ ಸೇರುತ್ತಾರೆ. ಅತ್ತ ಪರಿಶಿಷ್ಟ ಜಾತಿ ವರ್ಗದ ಬೇಡು ಜಂಗಮರು SC ಮೀಸಲಾತಿಗೆ ಸೇರಿ, SC ಸೌಲಭ್ಯ ಪಡೆಯುತ್ತಾರೆ.



