ವೀರ ಸಾವರ್ಕರ್. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರೋಚಕ ಕಥೆ ಹೊಂದಿರುವ ಹಲವು ಹೀರೋಗಳಲ್ಲಿ ಒಬ್ಬರು. ಭಾರತದಲ್ಲಿ ಹುಟ್ಟಿ, ಇಂಗ್ಲೆಂಡಿನಲ್ಲಿ ಓದಿ, ಅಲ್ಲಿಯೇ ಜಲಿಯನ್ ವಾಲಾಬಾಗ್ ಹಂತಕನಿಗೆ ಸ್ಕೆಚ್ ಹಾಕಿ ಕೊಲ್ಲಿಸಿ, ಭಾರತಕ್ಕೆ ಬಂದು ಭೂಗತ ಹೋರಾಟ ನಡೆಸಿದ ಸಾವರ್ಕರ್ ಅವರ ಹೋರಾಟ ನಿಜಕ್ಕೂ ರೋಚಕ. ಅಷ್ಟೇ ಅಲ್ಲ, ಅವರನ್ನು ಕಾಂಗ್ರೆಸ್ ವಿವಾದ ಪುರುಷನನ್ನಾಗಿಸಿದೆ. ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿ ಆರೋಪಿಯನ್ನಾಗಿಸಿದ್ದ ಆಗಿನ ಸರ್ಕಾರ, ಅದರ ಬಗ್ಗೆ ಯಾವುದೇ ಸಾಕ್ಷಿ ಕೊಡುವುದಕ್ಕೆ ಆಗಲಿಲ್ಲ.
ವಿನಾಯಕ್ ದಾಮೋದರ್ ಸಾವರ್ಕರ್. ಆರ್.ಎಸ್.ಎಸ್.ನವರು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಯವರ ವೀರ ಸಾವರ್ಕರ್. ಕಾಂಗ್ರೆಸ್ಸಿಗರು, ಎಡ ಪಂಥೀಯರ ಪ್ರಕಾರ ಹೇಡಿ ಸಾವರ್ಕರ್. ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ರಿಲೀಸ್ ಆದ ಸಾವರ್ಕರ್ ವೀರನಾಗಲು ಹೇಗೆ ಸಾಧ್ಯ ಎನ್ನುವುದು ಸಾವರ್ಕರ್ ವಿರೋಧಿಗಳ ವಾದವಾದರೆ, ಅಂಡಮಾನಿನ ಕರಿನೀರಿನ ಶಿಕ್ಷೆಯಲ್ಲಿ 8 ವರ್ಷ ಇದ್ದ ಸಾವರ್ಕರ್, ಗಾಣದ ಕೆಲಸ ಮಾಡಿ, ಊಟವೂ ಇಲ್ಲದೆ ಸಾಯಬೇಕಿತ್ತೇ ಎನ್ನುವ ಸಾವರ್ಕರ್ ಪರವಾದಿಗಳು, ಅದೇ ಸಾವರ್ಕರ್ ದಲಿತರ ದೇಗುಲ ಪ್ರವೇಶ, ಹೆಣ್ಣು ಮಕ್ಕಳ ಶಿಕ್ಷಣ, ಸಹ ಭೋಜನದಂತಹ ಕ್ರಾಂತಿಕಾರಿ ನಿರ್ಣಯಗಳ ಮೂಲಕ ಹಿಂದೂಗಳನ್ನು ಒಗ್ಗೂಡಿಸಿದರು ಎನ್ನುತ್ತಾರೆ. ಅವರ ವಾದವನ್ನು ಇವರು ಒಪ್ಪಲ್ಲ. ಇವರ ವಾದ ಅವರಿಗೆ ಇಷ್ಟವಾಗಲ್ಲ.
ಆದರೆ, ಸಾವರ್ಕರ್, ಅಂಡಮಾನ್ʻನ ನರಕದಂತಹ ಜೈಲುಗಳಲ್ಲಿ 8 ವರ್ಷ ಇದ್ದದ್ದು ಸತ್ಯ. ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಸಾವರ್ಕರ್ ಮತ್ತವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ಸವೆಸಿದ್ದು ಕೂಡಾ ಸತ್ಯ. ಜೈಲಿಂದ ಬಿಡುಗಡೆಯಾದ ಮೇಲೆ ದಲಿತೋದ್ಧಾರಕ್ಕೆ ನಿಂತ ಸಾವರ್ಕರ್ ಅವರ ನಡೆ, ಕ್ರಾಂತಿಕಾರಿ ಹೆಜ್ಜೆಗಳು ಅಂಬೇಡ್ಕರ್ ಅವರೂ ಮೆಚ್ಚುವಂತೆ ಮಾಡಿತ್ತು. ಇಂತಹ ಸಾವರ್ಕರ್ ಬಗ್ಗೆ ಒಂದು ಸಿನಿಮಾ ಬರುತ್ತಿದೆ.
ಸಾವರ್ಕರ್ ಅವರ ಜೀವನವನ್ನು ಆಧರಿಸಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸಾವರ್ಕರ್ ಪಾತ್ರವನ್ನು ರಣದೀಪ್ ಹೂಡಾ ನಿಭಾಯಿಸಿದ್ದಾರೆ. ಈ ಸಿನಿಮಾಗೆ ಅವರದ್ಧೇ ನಿರ್ದೇಶನವಿದೆ. ಮಾರ್ಚ್ 22ರಂದು ಹಿಂದಿ ಮತ್ತು ಮರಾಠಿಯಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಬಿಡುಗಡೆ ಆಗಲಿದೆ. ಸಾವರ್ಕರ್ ಜೀವನದ ವಿವಿಧ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ರಣದೀಪ್ ಹೂಡಾ ಅವರು ವಿವಿಧ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಆದಂತಹ ಡೈಲಾಗ್ಗಳು ಈ ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬಾಲ ಗಂಗಾಧರ್ ತಿಲಕ್, ಜವಹರ್ ಲಾಲ್ ನೆಹರು, ಮೊಹಮ್ಮದ್ ಅಲಿ ಜಿನ್ನಾ, ಸುಭಾಷ್ ಚಂದ್ರ ಬೋಸ್, ಮದನ್ ಲಾಲ್ ಧಿಂಗ್ರ, ಭಗತ್ ಸಿಂಗ್ ಮುಂತಾದ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲ ಇರಲಿವೆ.
‘ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ನಾವೆಲ್ಲರೂ ಓದಿದ್ದೇವೆ. ಇದು ಆ ರೀತಿಯ ಕಥೆ ಅಲ್ಲ…’ ಎಂಬ ಹಿನ್ನೆಲೆ ಧ್ವನಿಯೊಂದಿಗೆ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಟ್ರೇಲರ್ ಆರಂಭ ಆಗುತ್ತದೆ. ಹಿಂಸೆಯ ವಿಚಾರದಲ್ಲಿ ಮಹಾತ್ಮ ಗಾಂಧಿ ಮತ್ತು ಸಾವರ್ಕರ್ ಅವರಿಗೆ ಇದ್ದ ಭಿನ್ನಾಭಿಪ್ರಾಯವನ್ನು ಕೂಡ ಈ ಟ್ರೇಲರ್ನಲ್ಲಿ ತೋರಿಸಲಾಗಿದೆ. ಟ್ರೇಲರ್ನಲ್ಲಿ ಧರ್ಮದ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಈ ಎಲ್ಲ ಕಾರಣಗಳಿಂದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಕೌತುಕ ಮೂಡಿಸಿದೆ. ಅಂಕಿತಾ ಲೋಖಂಡೆ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಸಾವರ್ಕರ್ ಬಗ್ಗೆ ಪಾಸಿಟಿವ್ ಆದ ಕಥೆಯೇ ಇರುತ್ತದೆ ಅನ್ನೋದ್ರಲ್ಲಿ ಅನುಮಾನವೇನೂ ಇಲ್ಲ. ಏಕೆಂದರೆ ಚಿತ್ರದ ಟೈಟಲ್ಲಿನಲ್ಲೇ ವೀರ ಇದೆ.



