ಉತ್ತರಕಾಂಡ ಟ್ರೇಲರ್ ಹಾಗೆಯೇ ಇದೆ. ಡಾಲಿ ಧನಂಜಯ ಸೈಕಾಗುವಂತೆಯೇ ನಟಿಸಿದ್ದಾರೆ. ಓಂ ಚಿತ್ರ ಬಂದಾಗ ಚಡ್ಡಿಯಲ್ಲಿ ಜೈಲಿನಲ್ಲಿ ಕುಳಿತಿರುವ ಶಿವಣ್ಣನ ಪೋಸ್ಟರ್ ನೋಡಿ ಅಭಿಮಾನಿಗಳು ಆರಂಭದಲ್ಲಿ ಕೆಂಡಾಮಂಡಲರಾಗಿದ್ದರು. ಶಿವಣ್ಣನ ಈ ರೀತಿ ನೋಡ್ಬೇಕಾ ಎಂದು ರೊಚ್ಚಿಗೆದ್ದಿದ್ದರು. ಆಗಿನ್ನೂ ಶಿವಣ್ಣ, ಅಭಿಮಾನಿಗಳ ಪಾಲಿಗೆ ಶಿವರಾಜ್`ಕುಮಾರ್ ಆಗಿಯೇ ಇದ್ದರು. ಶಿವಣ್ಣ ಆಗಿದ್ದು ಆಮೇಲೆ.. ಓಂ ಚಿತ್ರದ ಸತ್ಯ ಪಾತ್ರ ಶಿವಣ್ಣಂಗೆ ಕೊಟ್ಟ ಮೈಲೇಜ್.. ಸ್ಟಾರ್ ಪಟ್ಟ ಬೇರೆಯದೇ ಲೆವೆಲ್ಲಿನದ್ದು. ಇದೀಗ ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಬಂದಿರೋ ಉತ್ತರಕಾಂಡ ಟ್ರೇಲರ್ ಓಂ ಸತ್ಯನನ್ನು ನೆನಪಿಸುತ್ತಿದೆ.
ಬಣ್ಣದ ಚಡ್ಡಿಯಲ್ಲಿ ಪೊಲೀಸ್ ಸ್ಟೇಷನ್ನಿನಲ್ಲಿ ನಿಂತಿರುವ ಗಬ್ರು ಸತ್ಯ.. ಮೈಮೇಲೆ ಚಡ್ಡಿ ಬಿಟ್ಟರೆ ಬೇರೇನೂ ಇಲ್ಲ. ಇನ್ನೊಂದ್ಸಲ ಕಂಡ್ರೆ ಎನ್‍ಕೌಂಟರ್ ಮಾಡ್ತೇನೆ ಎನ್ನುವ ಪೊಲೀಸ್ ಆಫೀಸರ್.. ಗಬ್ರು ಫುಲ್ ಅಮಾಯಕ.. ಆದರೆ ಠಾಣೆಯ ಹೊರಗೆ ಅಮಾಯಕ ಅಲ್ಲ. ಅಮಾಯಕನಂತೆಯೇ ನಟಿಸುವ ಗಬ್ರು ಕೊಡೊ ಬಿಸಿ ಬಾದೂಷಾಗೆ ಠಾಣೆ ಢಂ ಅನ್ನುತ್ತೆ. ಹೊರಗೆ ಫುಲ್ ಆರ್ಕೆಸ್ಟ್ರಾ ಇರುತ್ತೆ. ಉಡಾಳ ಬುದ್ದಿ ಗಬ್ರು ಸಿಗರೇಟಿಗೆ ಬೆಂಕಿ ಕರ್ನಾಟಕದ ಮನಿ ಮಗ ಯಾರ್ರಲೇ ಎಂದು ಡೈಲಾಗ್ ಹೊಡೀತಾನೆ. ಅವನೌನ.. ಫುಲ್ ಸೈಕು..
ಈ ಹಿಂದೆ ಡಾಲಿ ನಾಯಕನಾಗಿದ್ದ ‘ರತ್ನನ್ ಪ್ರಪಂಚ’ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ‘ಉತ್ತರ ಕಾಂಡ’ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆವ ಗ್ಯಾಂಗ್ವಾರ್ ಕತೆಯನ್ನು ಸಿನಿಮಾ ಒಳಗೊಂಡಿದೆ . ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ನಟಿ ರಮ್ಯಾ ಸಹ ಇದ್ದಾರೆ. ಶಿವರಾಜ್ ಕುಮಾರ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.
ಉತ್ತರಕಾಂಡ ಸಿನಿಮಾ ನನ್ನ ಈವರೆಗಿನ ವೃತ್ತಿ ಜೀವನದಲ್ಲಿಯೇ ದೊಡ್ಡ ಬಜೆಟ್ನ ಸಿನಿಮಾ. ಈಗ ರಿಲೀಸ್ ಆಗಿರುವುದು ನನ್ನ ಬರ್ತಡೇಗೆ ನೀಡಿರುವ ಸಣ್ಣ ಝಲಕ್ ಅಷ್ಟೇ. ಉತ್ತರಕಾಂಡ ಸಿನಿಮಾವನ್ನು ಇನ್ನಷ್ಟು ಎಂಜಾಯ್ ಮಾಡ್ತೀರಾ, ಅಭಿಮಾನಿಗಳಿಗೆಂದೆ ಮಾಡಿರುವ ಸಿನಿಮಾ ಉತ್ತರಕಾಂಡ ಎಂದಿರೋ ಡಾಲಿ, ಬಾಕ್ಸ್ ಆಫೀಸ್ ಒಡಿತಿನಿ ಸುಬ್ಬಿ ಎಂದು ಭರ್ಜರಿ ಡೈಲಾಗ್ ಸಹ ಹೊಡೆದಿದ್ದಾರೆ.
ಡಾಲಿ ಧನಂಜಯ್ ಸ್ಟಾರ್ ಆಗಿದ್ದೇ ಶಿವಣ್ಣನ ಟಗರು ಚಿತ್ರದಿಂದ. ವಿಲನ್ ಆಗಿ ನಟಿಸಿಯೇ ಅಭಿಮಾನಿಗಳು ಹಾಗೂ ಶಿವಣ್ಣನನ್ನೂ ಗೆದ್ದಿರುವ ಡಾಲಿ ಧನಂಜಯ್, ಇದೀಗ ಶಿವಣ್ಣನ ಫೇಮಸ್ ಕ್ಯಾರೆಕ್ಟರ್ ಸತ್ಯನ ಹೆಸರಲ್ಲಿ ನಿಂತಿದ್ದಾರೆ. ಆದರೆ ಕಥೆ ಬೇರೆ. ಪ್ರೆಸೆಂಟೇಷನ್ ಬೇರೆ. ಲುಕ್ಕೂ ಬೇರೆ.. ಆದರೆ.. ಮಜವಾಗಿರುವಂತಿದೆ.



