ಉಪೇಂದ್ರ, ಈಗಾಗಲೇ ಯುಐ ಚಿತ್ರದ ಹೆಸರಲ್ಲಿ ತಲೆಗೆ ಹುಳ ಬಿಡ್ತಿದ್ದಾರೆ. ಬಿಟ್ಟಿದ್ದಾರೆ. ವಿಡಿಯೋ ತೋರಿಸದೆಯೇ.. ಹುಳ ಬಿಟ್ಟಿದ್ದ ಉಪೇಂದ್ರ, ರೀಲ್ಸುಗಳನ್ನೇ ಸಾಂಗ್ ಮಾಡಿ ಸೆನ್ಸೇಷನ್ ಸೃಷ್ಟಿಸಿದ್ದರು. ಈಗ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಬಹುನಿರೀಕ್ಷಿತ ‘ಯುಐ’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಅಕ್ಟೋಬರ್‌ನಲ್ಲಿ ಸಿನಿಮಾ ದೇಶಾದ್ಯಂತ ತೆರೆ ಕಾಣಲಿದೆ. ದಿನಾಂಕ ಫೈನಲ್ ಆಗೋದು ಬಾಕಿ ಇದೆ. ಉಪೇಂದ್ರ ಅವರ ಜನ್ಮದಿನದಂದು ರಿಲೀಸ್ ದಿನಾಂಕ ಘೋಷಣೆಯಾಗಲಿದೆ. ಅಂದರೆ.. ಬಿಡುಗಡೆ ಯಾವಾಗ ಎಂದು ಹೇಳೋದಕ್ಕೆ ಒಂದು ಮುಹೂರ್ತ ಫಿಕ್ಸ್ ಆಗಿದೆ.
ಯುಐ ಚಿತ್ರದ ವಿಎಫ್‌ಎಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಪೂರ್ಣಗೊಂಡಿದೆ. ಶೇ.80ರಷ್ಟು ಸಂಗೀತವೂ ಪೂರ್ಣಗೊಂಡಿದೆ. ಅಕ್ಟೋಬರ್‌ನಲ್ಲಿ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿಧಿ ಸುಬ್ಬಯ್ಯ ಹಾಗೂ ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ನಿರ್ಮಾಣದ ಯುಐ ದೊಡ್ಡ ಬಜೆಟ್ಟಿನಲ್ಲಿ ತಯಾರಾಗಿದೆ. ‘ಉಪ್ಪಿ 2’ ಬಳಿಕ, ಅದರಲ್ಲಿಯೂ ಒಂಬತ್ತು ವರ್ಷಗಳ ಬಳಿಕ ಉಪೇಂದ್ರ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಾಗಿರುವ ನಿರೀಕ್ಷೆಗಳು ಮುಗಿಲುಮುಟ್ಟಿವೆ. ಇತ್ತೀಚೆಗಷ್ಟೆ ಹಂಗೇರಿಯಲ್ಲಿಅಜನೀಶ್ ಲೋಕನಾಥ್ ಮತ್ತು ತಂಡ 90 ಪೀಸ್ ರೆಕಾರ್ಡಿಂಗ್ ಮಾಡಿಕೊಂಡಿದೆ. ಬುಡಾಪೆಸ್ಟ್‌ನಲ್ಲಿ 90 ಸಂಗೀತಗಾರರು, 90 ಇನ್‌ಸ್ಟ್ರುಮೆಂಟ್ ಬಳಸಿ ರೆಕಾರ್ಡಿಂಗ್ ಮಾಡಲಾಗಿದೆ.
ಈ ತಿಂಗಳ ಅಂತ್ಯಕ್ಕೆ ಚಿತ್ರದ ಮೊದಲ ಕಾಪಿ ಸಿಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಹಾಗೆಯೇ ಮುಂದಿನ ತಿಂಗಳಲ್ಲಿ ಚಿತ್ರವನ್ನು ಸೆನ್ಸಾರ್ ಮನೆಗೆ ಕಳುಹಿಸಲು ಚಿತ್ರತಂಡ ನಿರ್ಧರಿಸಿದೆ. ಉಪೇಂದ್ರ ಸ್ವತಃ ಆಕ್ಷನ್ ಕಟ್ ಹೇಳಿರುವ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿರೋದ್ರಿಂದ ಯುಐ ಕೂಡಾ ಹಿಟ್ ಆಗುವ ನಿರೀಕ್ಷೆ ಇದೆ.



