ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ. ಗೆಟ್ ಔಟ್ ಎಂದು ಹೇಳಿ ಕೂಡಾ ಸಿನಿಮಾ ಗೆಲ್ಲಿಸೋಕೆ ಸಾಧ್ಯ ಇರೋದು ಉಪೇಂದ್ರ ಅವರಿಗೆ ಮಾತ್ರ. ಬುದ್ದಿವಂತರಾಗಿದ್ರೆ ಎದ್ದು ಹೋಗಿ ಎನ್ನುವ ಮೂಲಕ, ದಡ್ಡರಾದವರು ಮಾತ್ರವೇ ಸಿನಿಮಾ ನೋಡಿ ಅನ್ನೋ ಲೈನ್ ಹಾಕಿಯೇ ಸಿನಿಮಾಗೆ, ಥಿಯೇಟರಿಗೆ ವೆಲ್ ಕಂ ಮಾಡ್ತಾರೆ ಉಪೇಂದ್ರ. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂದು ಪೋಸ್ಟರ್ ಹಾಕಿ ಗೆದ್ದವರು ಉಪೇಂದ್ರ. ಈ ಬಾರಿಯೂ ಅಷ್ಟೇ.. ಸಿಂಪ್ಲಿ ವಿನ್ನರ್ ಆಗಿದ್ದಾರೆ.
ನಮ್ಮ ದುಡ್ಡು ಕೊಟ್ಟು ಥಿಯೇಟರಿಗೆ ಬಂದಿದ್ದೇವೆ, ನಾನ್ ಬುದ್ದಿವಂತ ಅಂದ್ಕೊಂಡ್ ವಾಪಸ್ ಹೋಗ್ತೀನಪ್ಪ, ದುಡ್ಡೇನು ನಿಮ್ಮಪ್ಪ ಕೊಡ್ತಾನಾ ಎಂದೆಲ್ಲ ಪೋಸ್ಟ್ ಹಾಕಿ ಉಪೇಂದ್ರರನ್ನು ಟೀಕೆ ಮಾಡ್ತಿರೋವ್ರೂ ಕೂಡಾ ಸಿನಿಮಾ ನೋಡ್ತಿದ್ದಾರೆ. ಇದೆಲ್ಲ ಉಪ್ಪಿ ಗಿಮಿಕ್ಕು ಅಂತ ನಗಾಡ್ಕೊಂಡು ಸಿನಿಮಾ ನೋಡ್ತಿರೋವ್ರೂ ಇದ್ದಾರೆ.
ಸಿನಿಮಾದಲ್ಲಿ ಉಪೇಂದ್ರ ಸತ್ಯ ಮತ್ತು ಕಲ್ಕಿ ನಡೆಯುವ ಯುದ್ಧವನ್ನ ವಿಡಂಬನೆಗಳ ಮೂಲಕವೇ ಹೇಳಿದ್ದಾರೆ. ಉಪೇಂದ್ರ, ಕಥೆಯನ್ನ ಹೇಳೋ ಶೈಲಿಯೇ ಬೇರೆ. ವಿಮರ್ಶೆ ಹೇಳೋಕೆ ಆಗ್ದೇ ಇರೋ ಮೂವೀ ಅಂದ್ರೆ ಯುಐ. ವಿಮರ್ಶೆಗಿಂತ ರಿಯಾಲಿಟಿ ಮುಖ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಲಿ ಮೂವೀ ನೋಡಿ ನಿಮಗೆ ಗೊತ್ತಾಗುತ್ತೆ. ಈ ಮೂವೀ ಸೋಲೋಕೆ ಸಾಧ್ಯನೇ ಇಲ್ಲ. ಸೋಲ್ತು ಅಂದ್ರೆ ಸೋತಿದ್ದು ಮೂವೀ ಅಲ್ಲ, ನಾವು’ ಅಂತಾ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಪ್ರೇಕ್ಷಕರು ಉಪೇಂದ್ರಗಿಂತ ದಡ್ಡರು ಅಥವಾ ಬುದ್ದಿವಂತರು. ಅರ್ಥ ಮಾಡ್ಕೊಳ್ಳೋದು ಕಷ್ಟ.
ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿರುವ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಚೆನ್ನಾಗಿ ಸೂಟ್ ಆಗಿದೆ. ಸನ್ನಿ ಲಿಯೋನ್ ಸಾಂಗ್ ಮಿಸ್ ಆಗಿದೆ. ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ, ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಮಲಯಾಳಂಗೆ ಡಬ್ ಆಗಿದ್ದರೂ, ಸಿನಿಮಾ ರಿಲೀಸ್ ಆಗಿಲ್ಲ. ಯಾಕೆ ಅನ್ನೋದು ಗೊತ್ತಾಗಿಲ್ಲ.
ಯುಐ ಸಿನಿಮಾ ಪೂರ್ತಿಯಾಗಿ ಅರ್ಥ ಆಗದೇ ಇದ್ದರೂ ಪರವಾಗಿಲ್ಲ, ಕೊನೇ ಪಕ್ಷ ಡಿಫರೆಂಟ್ ಆಗಿದೆ ಅಂತಿದ್ದಾರೆ ಪ್ರೇಕ್ಷಕರು. ಇಡೀ ಸಿನಿಮಾ ಉಪೇಂದ್ರ ಅವರ ಒನ್ ಮ್ಯಾನ್ ಶೋ. ಉಪ್ಪಿ ಡಬಲ್ ಆಕ್ಟಿಂಗ್. ನಿರ್ದೇಶನವನ್ನೂ ಸೇರಿಸಿದರೆ ತ್ರಿಪಾತ್ರ. ಕನ್ನಡ ಮತ್ತು ತೆಲುಗಿನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
1998ರಲ್ಲಿ ರಿಲೀಸ್ ಆಗಿದ್ದ ಎ ಸಿನಿಮಾ ನೆನಪಿದ್ರೆ ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್ʼ ಎನ್ನುತ್ತಾ ಸೋಂಬೇರಿಗಳನ್ನೆಲ್ಲ ಶೂಟ್ ಮಾಡೋ ಸೀನ್ ಕೂಡಾ ನೆನಪಿರುತ್ತೆ. ರೈಲ್ವೇ ಟ್ರ್ಯಾಕ್ ಹತ್ತಿರ ಜಗಳ ಆಡ್ತಿರೋ ಗಂಡ ಹೆಂಡತಿ ಇಬ್ಬರನ್ನೂ ಶೂಟ್ ಮಾಡೋ ಉಪೇಂದ್ರ, ಅಲ್ಲಿಯೇ ಅಳುತ್ತಾ ಕೂತಿರುವ ಬಾಲಕನ ಬಳಿ ಬಂದು ‘ಅಳಬೇಡ, ಅವರ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ. ಸೆಂಟಿಮೆಂಟ್ ಇದ್ರೆ ಖಾಲಿ ತಟ್ಟೆನೇ ಗಟ್ಟಿ ಆಗಿಬಿಡುತ್ತದೆ. ಪ್ರಪಂಚ ವಿಶಾಲವಾಗಿದೆ. ಆರಾಮಗಿ ಹೋಗಿ ಬದುಕಿಕೋ’ ಎನ್ನುತ್ತಾರೆ ಉಪ್ಪಿ. ಆ ಕ್ಷಣವೇ ಬಾಲಕ ಓಡಿ ಹೋಗುತ್ತಾನೆ. ‘ಈ ಹುಡುಗ ಓಡ್ತಿರೋ ಸ್ಪೀಡ್ ನೋಡಿದ್ರೆ ಸುಭಾಷ್ ಚಂದ್ರ ಬೋಸ್ ಆಗಬಹುದು’ ಎನ್ನುತ್ತಾರೆ ಉಪ್ಪಿ.


ಆದರೆ ಇದು ಆಕಸ್ಮಿಕ ಅಲ್ಲ. ಏಕೆಂದರೆ ಯುಐನಲ್ಲಿಯೂ ಅಂಥದ್ದೇ ಸೀನ್ ಇದೆ. ಆದರೆ ಇಲ್ಲಿ ಉಪೇಂದ್ರ ʻಈ ಹುಡುಗ ಓಡ್ತಾ ಇರೋ ಸ್ಪೀಡ್ ನೋಡಿದ್ರೆ ಮುಂದೆ ಇವನು ಲಾಡೆನ್ನೋ, ದಾವೂದ್ ಇಬ್ರಾಹಿಮ್ಮೋ ಆಗ್ತಾನೆʼ ಅಂತಾರೆ. ಆ ಸೀನ್ ಇರುವ ಕಾರಣಕ್ಕೇ ಆ ಹುಡುಗ ಬಂದಿದ್ದ ಅನ್ನೋದು ಕೂಡ ಸಿನಿಮಾ ನೋಡಿದ್ಮೇಲೇನೇ ಗೊತ್ತಾಗೋದು.
ಹಾಗಂತ ಉಪ್ಪಿ ತುಂಬಾ ಕನ್ ಫ್ಯೂಸ್ ಮಾಡೋದಿಲ್ಲ. ಆದರೆ ಕನ್ ಫ್ಯೂಸ್ ಆಗುವಂತೆ ಕಥೆ ಹೇಳ್ತಾರೆ. ಎ ಮತ್ತು ಶ್ ಚಿತ್ರದಲ್ಲಿದ್ದಂತೆ ಇಲ್ಲಿಯೂ ಕಥೆಯ ಒಳಗೊಂದು ಕಥೆ ಇದೆ. ಸಿನಿಮಾದೊಳಗೊಂದು ಸಿನಿಮಾ ಇದೆ. ಮನರಂಜನೆ ಕಮ್ಮಿ. ಬುದ್ದಿವಂತನ ಚಿತ್ರದಲ್ಲಿ ಬುದ್ದಿವಾದ ಜಾಸ್ತಿ.
ಆದರೆ ಸಿನಿಮಾ ಚೆನ್ನಾಗಿದೆಯಾ ಅಂದ್ರೆ.. ಸಖತ್ತಾಗಿದೆ ಗುರು.. ಆದರೆ ಅರ್ಥ ಆಗಲ್ಲ ಅನ್ನೋ ಪ್ರೇಕ್ಷಕ, ಇನ್ನೊಂದ್ಸಲ ಸಿನಿಮಾ ನೋಡೋಣ ಅನ್ನೋ ಅಷ್ಟರಮಟ್ಟಿಗೆ ಸಿನಿಮಾ ಸಕ್ಸಸ್ ಆಗಿದೆ.



