ಹಾಗೆ ನೋಡಿದರೆ ಉಪೇಂದ್ರ, ಸುದೀಪ್ ಅವರಿಗೆ ಗುರುಗಳಾಗಿದ್ದವರೇನಲ್ಲ. ಮಾತಿಗೆ ಹಾಗನ್ನುತ್ತಾರಷ್ಟೇ. ಉಪೇಂದ್ರ ಮತ್ತು ಸುದೀಪ್ ಇಬ್ಬರೂ ಒಟ್ಟಿಗೇ ಮುಕುಂದ ಮುರಾರಿಯಲ್ಲಿ ನಟಿಸಿದ್ದವರು. ಇನ್ನು ಸುದೀಪ್ ಅವರು ಚಿತ್ರರಂಗಕ್ಕೆ ಹೀರೋ ಆಗಿ ಬರುವುದಕ್ಕೆ ಸ್ಫೂರ್ತಿಯೇ ಉಪೇಂದ್ರ. ಅದನ್ನು ಸುದೀಪ್ ಅವರೇ ಹೇಳಿಕೊಳ್ಳುವ ಕಾರಣ, ಅವರಿಗೆ ಗುರುವಿನ ಪಟ್ಟ ಸಿಕ್ಕಿಬಿಟ್ಟಿದೆ. ಇವರಿಬ್ಬರೂ ವರ್ಷದ ಕೊನೆಯಲ್ಲಿ ಮುಖಾಮುಖಿಯಾಗಿದ್ದರು.
ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ‘ಯುಐ’ ಹಾಗೂ ಸುದೀಪ್ ಅಭಿನಯದ ‘ಮ್ಯಾಕ್ಸ್’ ವರ್ಷದ ಕೊನೆಯಲ್ಲಿ ಪೈಪೋಟಿಗೆ ಬಿದ್ದಿದ್ದವು ಉಪೇಂದ್ರರ ಯುಐ ಸೆಲಬ್ರಿಟಿ ಶೋಗೆ ಸುದೀಪ್ ಹೋಗಿ ಶುಭ ಕೋರಿದ್ದರು. ಸಿನಿಮಾ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದರು. ಅಂತಹ ಕೆಲಸಗಳನ್ನೆಲ್ಲ ಉಪೇಂದ್ರ ಮಾಡಿಲ್ಲ ಎನ್ನುವುದೂ ಕೂಡಾ ಅಷ್ಟೇ ನಿಜ. ಅದನ್ನೆಲ್ಲ ಹೊರತುಪಡಿಸಿ . ಎರಡೂ ಚಿತ್ರಗಳು ಹಿಟ್ ಆಗಿವೆ. ಆದರೆ ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಸುದೀಪ್ ಅವರ ಮ್ಯಾಕ್ಸ್, ಉಪೇಂದ್ರರ ಯುಐ ಚಿತ್ರವನ್ನು ಮೀರಿಸಿದೆ.
‘ಯುಐ’ ಡಿಸೆಂಬರ್ 20ರಂದು ರಿಲೀಸ್ ಆದರೆ, ‘ಮ್ಯಾಕ್ಸ್’ ಡಿಸೆಂಬರ್ 25ರಂದು ಕೇವಲ 5 ದಿನಗಳ ಅಂತರದಲ್ಲಿ ರಿಲೀಸ್ ಆಗಿದ್ದವು. ಎರಡೂ ಸಿನಿಮಾಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಆದರೆ, ಹೆಚ್ಚಿನ ರೇಟಿಂಗ್ ಸಿಕ್ಕಿದ್ದು ಹಾಗೂ ದೊಡ್ಡ ಮಟ್ಟದ ಕಲೆಕ್ಷನ್ ಆಗಿದ್ದು ‘ಮ್ಯಾಕ್ಸ್’ ಚಿತ್ರಕ್ಕೆ ಅನ್ನೋದು ವಿಶೇಷ.
‘ಯುಐ’ ಸಿನಿಮಾಗೆ ಉಪೇಂದ್ರ ನಿರ್ದೇಶಕ ಎನ್ನುವುದೇ ಮೊದಲ ಆಕರ್ಷಣೆಯಾಗಿತ್ತು. ಎಂದಿನಂತೆ ಸಿನಿಮಾ ಭಿನ್ನವಾಗಿ ಮೂಡಿ ಬಂದಿತ್ತು. ಉಪೇಂದ್ರ ತಮ್ಮ ಹಲವು ವಿಚಾರ, ಚಿಂತನೆಗಳನ್ನು ಸಿನಿಮಾದಲ್ಲಿ ಹೇಳಿದ್ದರು. ಯುಐ ಮೊದಲ ವಾರದ ಗಳಿಕೆ 30 ಕೋಟಿಗೂ ಹೆಚ್ಚಾಗಿದೆ. ಹೆಚ್ಚೂ ಕಡಿಮೆ 11 ದಿನಗಳ ಬಳಿಕ 30 ಕೋಟಿ ದಾಟಿದೆಯಂತೆ ಯುಐ. ಚಿತ್ರದ ಬಗ್ಗೆ ಅದ್ಧೂರಿ ಪ್ರಚಾರವಿತ್ತು. ಉಪೇಂದ್ರ ಚಿತ್ರ ಎಂಬ ಕಾರಣಕ್ಕೆ ಜಾಹೀರಾತು ಕೊಡುವ ವಿಷಯದಲ್ಲಿ ನಿರ್ಮಾಪಕರು ಜುಗ್ಗತನ ತೋರಿಸಿದ್ದರು ಎನ್ನುವುದು ಬಿಟ್ಟರೆ, ಪ್ರಚಾರಕ್ಕೇನೂ ಕೊರತೆ ಇರಲಿಲ್ಲ.
ಆದರೆ ‘ಮ್ಯಾಕ್ಸ್’ ಚಿತ್ರದ ಪರಿಸ್ಥಿತಿಯೇ ಬೇರೆ ಇತ್ತು. ಸಿದ್ಧವಾಗಿದ್ದ ಸಿನಿಮಾವನ್ನು ಸಡನ್ ಆಗಿ ರಿಲೀಸ್ ಮಾಡಿದ್ದರು ಚಿತ್ರದ ಪ್ರೊಡ್ಯೂಸರ್. ತರಾತುರಿಯಲ್ಲೇ ರಿಲೀಸ್ ಆದ ಮ್ಯಾಕ್ಸ್ ಚಿತ್ರ ಯುಐ ಗಳಿಕೆಯನ್ನು ಮೀರಿಸಿದೆ. 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇನ್ನು ಉಪೇಂದ್ರರ ಯುಐ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ. ಇದಕ್ಕೆ ಹೋಲಿಸಿದರೆ ಮ್ಯಾಕ್ಸ್ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಆದರೆ ಎರಡು ಸ್ಟಾರ್ ಸಿನಿಮಾಗಳು ಗೆದ್ದಿರುವುದು ಕನ್ನಡ ಚಿತ್ರರಂಗಕ್ಕೆ ಗುಡ್ ನ್ಯೂಸ್.
ಎರಡೂ ಚಿತ್ರಗಳು ಗೆದ್ದಿವೆ. ಎರಡೂ ಚಿತ್ರಗಳು 5 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿವೆ. ಹಾಗಾದರೆ ಕಿಚ್ಚ ಸುದೀಪ್ ಗೆದ್ದಿದ್ದು ಎಲ್ಲಿ..? ಏಕೆಂದರೆ ಮ್ಯಾಕ್ಸ್ ಚಿತ್ರಕ್ಕೆ ಸಿಕ್ಕಿದ್ದ ಶೋಗಳು ಮತ್ತು ಸ್ಕ್ರೀನ್ಸ್ ಕಡಿಮೆ. ಆದರೆ ಎರಡನೇ ದಿನವೇ ಶೋಗಳ ಸಂಖ್ಯೆ ಹೆಚ್ಚಾಯ್ತು. ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ಹಾಗಿತ್ತು. ಆದರೆ ಯುಐ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹೆಚ್ಚಾದವು. ಉಪೇಂದ್ರ ಅಪ್ ಡೇಟ್ ಆಗಿಲ್ಲ ಎಂಬ ಪ್ರತಿಕ್ರಿಯೆಗಳೂ ಸಿಕ್ಕವು.
ಎರಡು ಚಿತ್ರಗಳಲ್ಲಿ ಕ್ಲಿಯರ್ ವಿನ್ನರ್ ಕಿಚ್ಚ ಸುದೀಪ್. ಇನ್ನು ಉಪೇಂದ್ರರ ಯುಐ ಸೋತಿಲ್ಲ. ಭರ್ಜರಿಯಾಗಿಯೇ ಗೆದ್ದಿದೆ. ಈ ವರ್ಷದ ಟಾಪ್ ಕಲೆಕ್ಷನ್ ಸಿನಿಮಾಗಳಲ್ಲಿ ಸುದೀಪ್ ಅವರ ಮ್ಯಾಕ್ಸ್ ನಂ.1 ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿರೋದು ಉಪೇಂದ್ರರ ಯುಐ.



