ಉಪೇಂದ್ರರ ಸಿನಿಮಾ ಎಂದರೆ ಅಲ್ಲಿನ ಟ್ರೀಟ್‌ಮೆಂಟ್ ಬೇರೆಯೇ ಇರುತ್ತದೆ. ಓಪನಿಂಗ್ ಇರಲಿ, ಕ್ಲೈಮಾಕ್ಸ್ ಇರಲಿ.. ಎಲ್ಲವೂ ಅಷ್ಟೇ..
ಸುಮ್ಮನೆ ಓಪನಿಂಗ್ ಸೀನ್ಸ್ ನೆನಪು ಮಾಡ್ಕೊಳ್ಳಿ..
ತರ್ಲೆ ನನ್ಮಗ : ಚರಂಡಿಯಲ್ಲಿ ಒಂದು ರೂ ಆಸೆಗೆ ಬೆನ್ನತ್ತುವ ಬ್ಯಾಂಕ್ ಜನಾರ್ದನ್. ಅಂಗಡಿಯಲ್ಲಿ ಮಿಠಾಯಿ ಬೀಳಿಸಿ ಚಿಲ್ಲರೆ ಬುದ್ದಿ ತೋರಿಸುವುದು. ಯಾವನಯ್ಯಾ ಡೈರೆಕ್ಟರು ಎನ್ನುವಾಗ ಬರುವ ಉಪೇಂದ್ರ. ಅದು ಅವರ ಮೊದಲ ಸಿನಿಮಾ.
ಶ್ : ಉಚ್ಚೆ ಹುಯ್ಯುತ್ತಿರುವವನ ಎದುರು ಹೆಣ ಬಂದು ಬೀಳುತ್ತದೆ. ಅವನು ಕಿರುಚುತ್ತಾನೆ. ಅವನು ನೋಡಿದ್ದು ಏನನ್ನು ಎಂದು ಗೊತ್ತಾಗುವುದು ಕ್ಲೈಮಾಕ್ಸಿನಲ್ಲಿ.
ಓಂ : ಚಾಕೊಲೇಟ್ ಹೀರೋ ಶಿವರಾಜ್ ಕುಮಾರ್, ನಾಯಕಿಗೆ ಹಿಂಸೆ ಕೊಡುವ ಮೂಲಕ ಎಂಟ್ರಿ ಸೀನ್. ಆಗಂತೂ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದರು.
ಎ : ಸಿನಿಮಾ ಶುರುವಾದ ಐದು ನಿಮಿಷಕ್ಕೆ ದಿ ಎಂಡ್. ಕೊನೆಯಲ್ಲಿ ಕ್ಲೈಮಾಕ್ಸ್‌ಗಳಂತೂ ಒಂದೊಂದೂ ವಿಭಿನ್ನ ಕಥೆ ಹೇಳ್ತವೆ.
ಉಪೇಂದ್ರ : ನಾನು ಅನ್ನೋದು ಹೀರೋನ ಹೆಸರು ಅರ್ಥವಾಗುವಷ್ಟರ ಹೊತ್ತಿಗೆ 10 ನಿಮಿಷ ಮುಗಿದಿರುತ್ತದೆ. ಕ್ಲೈಮಾಕ್ಸಿನಲ್ಲಿ ನಾವು ಇದುವರೆಗೆ ನೋಡಿದ್ದು ಪಾತ್ರಗಳನ್ನಲ್ಲ, ಭಾವನೆಗಳನ್ನ ಎಂದು ಅರ್ಥವಾದಾಗ ಪ್ರೇಕ್ಷಕ ಶಾಕ್ ಆಗ್ತಾನೆ..
ಸೂಪರ್ : ಕಲ್ಪನೆಯೇ ಅದ್ಭುತ. ಭಾರತದಲ್ಲಿ ವಿದೇಶಿಗರು ಭಿಕ್ಷೆ ಬೇಡುವಷ್ಟು ಶ್ರೀಮಂತವಾಗಿದೆ ಎನ್ನುವ ಕಲ್ಪನೆಯೇ ವಂಡರ್.
ಉಪ್ಪಿ ೨ : ನಾನು ಇಲ್ಲಿ ನೀನು ಆಗಿದ್ದಾನೆ. ಅವನು ನಾನು ವಾ.. ನೀನು ವಾ.. ಎಂಬ ಗೊಂದಲದಲ್ಲೇ ಸಿನಿಮಾ ಮುಗಿಯುತ್ತದೆ.
ಹೀಗೆ ಒಂದೊಂದು ಚಿತ್ರದಲ್ಲೂ ಒಂದೊಂದು ರೀತಿಯ ಶಾಕ್ ಕೊಡುವ ಉಪೇಂದ್ರ, ʻಯುಐʼ ಸಿನಿಮಾದಲ್ಲಿ ಎರಡೆರಡು ಕ್ಲೈಮಾಕ್ಸ್ ಇಟ್ಟಿದ್ದಾರಂತೆ. ಈ ಥಿಯೇಟರಿನಲ್ಲಿ ಒಂಥರಾ ಕ್ಲೈಮಾಕ್ಸ್.. ಆ ಥಿಯೇಟರಿನಲ್ಲಿ ನೋಡಿದರೆ.. ಇನ್ನೊಂದು ಕ್ಲೈಮಾಕ್ಸ್ ಅಂತೆ..
ಇಲ್ಲ ಇಲ್ಲ…
ಒಂದೊಂದು ಭಾಷೆಗೆ ಒಂದೊಂದು ರೀತಿಯ ಕ್ಲೈಮಾಕ್ಸ್ ಇರುತ್ತಂತೆ. ಅವರವರ ಭಾಷೆಗೆ ಸೂಟ್ ಆಗುವಂತೆ ಸಪರೇಟ್ ಕ್ಲೈಮಾಕ್ಸ್ ಮಾಡಿಸಿದ್ದಾರಂತೆ..
ಉಪೇಂದ್ರ ಅವರೇ ನಿರ್ದೇಶಿಸಿರುವ ಸಿನಿಮಾ ರಿಲೀಸ್ ಆದಾಗ.. ಇಂತಹ ಅಂತೆ ಕಂತೆಗಳು ಕಾಮನ್. ಪ್ರೇಕ್ಷಕರು ಉಪೇಂದ್ರ ಮೇಲೆ ಇಟ್ಟಿರುವ ದೊಡ್ಡ ನಂಬಿಕೆ, ನಿರೀಕ್ಷೆಗಳ ಪ್ರತಿಫಲ ಇದು. ಹಾಗೆ ನೋಡಿದರೆ ಒಂದೇ ಚಿತ್ರದಲ್ಲಿ (ಸೂಪರ್ ಸ್ಟಾರ್) ಹಲವು ಕ್ಲೈಮಾಕ್ಸ್ ತೋರಿಸಿದ ಖ್ಯಾತಿಯೂ ಉಪೇಂದ್ರ ಅವರದ್ದು. ಇನ್ನು ಉಪ್ಪಿ ನಿರ್ದೇಶನದ ಚಿತ್ರದ ಕ್ಲೈಮಾಕ್ಸ್ ಒಂದಕ್ಕಿಂತ ಒಂದು ಚಿತ್ರದಲ್ಲಿ ವಿಭಿನ್ನವಾಗಿರುತ್ತವೆ. ಇದು ಒಂದು ಕಥೆಯಾದರೆ..
ಇನ್ನೊಂದು ಚಿತ್ರಗಳ ಓಪನಿಂಗ್ ಸೀನ್ ಕುರಿತಾದದ್ದು. ಎ ಚಿತ್ರವನ್ನೇ ತೆಗೆದುಕೊಂಡರೆ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ʻದಿ ಎಂಡ್ʼ ಬರುತ್ತದೆ. ಪ್ರೇಕ್ಷಕ ಥಿಯೇಟರಿನಲ್ಲಿ ಕೂತು ಉಸಿರು ತೆಗೆದುಕೊಳ್ಳುವಷ್ಟರಲ್ಲಿ ಶಾಕ್ ಕೊಡೋದು ಉಪ್ಪಿಯ ಟೆಕ್ನಿಕ್ಕು. ಯುಐ ನಲ್ಲೂ ಹೀಗೆಯೇ ಇರುತ್ತದಾ..?
ನೋ ಎಂದಿದ್ದಾರೆ ಉಪೇಂದ್ರ.
‘ಓಪನಿಂಗ್ ದೃಶ್ಯವೇ ಪ್ರೇಕ್ಷಕರಿಗೆ ಶಾಕಿಂಗ್ ಆಗಿರಲಿದೆ’ ಎಂದಿರುವ ಉಪೇಂದ್ರ ಕ್ಲೈಮಾಕ್ಸ್ ಮಾತ್ರ ಒಂದೇ ಇರಲಿದೆ. ಒಂದೊಂದು ಭಾಷೆಗೆ ಒಂದೊಂದು ಕ್ಲೈಮಾಕ್ಸ್ ಅಥವಾ ಒಂದೊಂದು ಥಿಯೇಟರಿನಲ್ಲಿ ಒಂದೊಂದು ಕ್ಲೈಮಾಕ್ಸ್ ಎಲ್ಲ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.



