ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ತಮ್ಮ ಗೋಪಾಲ್ ಜೋಷಿ ಮೇಲೆ ಲೋಕಸಭೆ ಟಿಕೆಟ್ ಕೊಡಿಸೋದಾಗಿ ನಂಬಿಸಿ, 25 ಲಕ್ಷ ಹಣ ಪಡೆದು ವಂಚಿಸಿದ ಆರೋಪ ಕೇಳಿ ಬಂದಿದೆ. ದೂರು ನೀಡಿರುವುದು ಮಾಜಿ ಶಾಸಕ ದೇವಾನಂದ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್. ದೇವಾನಂದ ಚೌಹಾಣ್, ಈ ಹಿಂದೆ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದವರು. ನಂತರ ಬಿಜೆಪಿಗೆ ಬಂದವರು. ಇವರ ಪತ್ನಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ವಾಸ್ತವ ಏನು..? ಅದು ಅಷ್ಟು ಸರಳವಾಗಿಲ್ಲ.
ಪ್ರಕರಣ ಏನು..?
ಗೋಪಾಲ್ ಜೋಶಿ, ಪ್ರಹ್ಲಾದ್ ಜೋಶಿಯವರ ಸಹೋದರ. ಗೋಪಾಲ್ ಜೋಶಿ ಹಾಗೂ ಸಹೋದರಿ ವಿಜಯಲಕ್ಷ್ಮಿ ಜೋಷಿ, ಪುತ್ರ ಅಜಯ್ ಜೋಷಿ ವಿರುದ್ಧ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. . 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ JDS ಶಾಸಕರಾಗಿದ್ದ ದೇವನಾಂದ್ ಚೌವ್ಹಾಣ್ ಅವರು 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಷಿ ಪರಿಚಯವಾಗಿದ್ದರು. ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಷಿ ಭೇಟಿ ಮಾಡಿದ್ದ ಚೌವ್ಹಾಣ್ ದಂಪತಿಗೆ, 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೋಪಾಲ್ ಜೋಶಿ, ಪ್ರಹ್ಲಾದ್ ಜೋಶಿಯವರಿಗೆ ಅಣ್ಣನಾಗಬೇಕು.
ವಂಚನೆ ಹೇಗಾಯ್ತು..?
ದೂರಿನ ಪ್ರಕಾರ ಚೀಟಿಂಗ್ ನಡೆದಿದ್ದು ದೆಹಲಿಯ ಕೇಂದ್ರ ಸಚಿವರ ಮನೆಯಲ್ಲಿ. ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ನಮ್ಮ ತಮ್ಮ ಹೇಳಿದಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದೆಲ್ಲ ಹೇಳಿ 5 ಕೋಟಿ ಕೇಳಿದರಂತೆ. ಆಮೇಲೆ 5 ಕೋಟಿ ಆಗಲ್ಲ, 2 ಕೋಟಿ ಆದ್ರೆ ಓಕೆ ಎಂದಿದ್ರಂತೆ ಚೌಹಾಣ್ ದಂಪತಿ. 2 ಕೋಟಿಗೇ ಕೊಡಿಸ್ತೇನೆ ಎಂದಿದ್ದ ಗೋಪಾಲ್ ಜೋಶಿ, 25 ಲಕ್ಷ ಅಡ್ವಾನ್ಸ್ ತಗೊಂಡಿದ್ರಂತೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಸಹೋದರಿ ವಿಜಯಲಕ್ಷ್ಮಿ ಮನೆಗೆ ತಂದು ಹಣ ನೀಡಿದ್ದರಂತೆ. ಆಮೇಲೆ ಟಿಕೆಟ್ಟೂ ಸಿಗಲಿಲ್ಲ. ಅದಾದ ಮೇಲೆ ಮತ್ತೆ 1.75 ಕೋಟಿ ಹಣ ಯಾವುದೋ ಡೀಲ್ ಮಾಡಿಕೊಡ್ತೇನೆ ಅಂತಾ ಇಸ್ಕೊಂಡಿದ್ರಂತೆ.
ಪ್ರಹ್ಲಾದ್ ಜೋಶಿ ವಾದವೇನು..?
ನನ್ನ ತಂದೆ ತಾಯಿಗೆ ನಾಲ್ವರು ಮಕ್ಕಳು. ನಾಲ್ವರೂ ಗಂಡು ಮಕ್ಕಳು. ಸಹೋದರಿಯೇ ಇಲ್ಲ. ಇವರು ಹೇಳುತ್ತಿರುವ ವಿಜಯಲಕ್ಷ್ಮಿ ಯಾರೋ ನನಗೆ ಗೊತ್ತಿಲ್ಲ ಎನ್ನುವ ಪ್ರಹ್ಲಾದ್ ಜೋಶಿ, 2013ರಲ್ಲಿಯೇ ತಮಗೂ ಹಾಗೂ ತಮ್ಮ ಕುಟುಂಬದ ಸಹೋದರರಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟಿಂದ ಆದೇಶ ತೆಗೆದುಕೊಂಡಿದ್ದೇನೆ ಎಂದು ದಾಖಲೆ ತೋರಿಸುತ್ತಾರೆ. ಪ್ರಹ್ಲಾದ್ ಜೋಶಿ ಅವರ ಪ್ರಕಾರ ಅವರಿಗೂ, ಅಣ್ಣ ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ನಮಗೆ ಸಂಪರ್ಕ, ಸಂಬಂಧ ಇಲ್ಲ.
ಆದರೆ ಸುನಿತಾ ಚೌಹಾಣ್ ಅವರ ದೂರಿನಲ್ಲಿ ಇದೆಲ್ಲ ನಡೆದದ್ದು ಪ್ರಹ್ಲಾದ್ ಜೋಶಿ ಅವರ ಮನೆಯಲ್ಲಿ. ಹಾಗಾದರೆ ಸಂಬಂಧವೇ ಇಲ್ಲದ ತಮ್ಮನ ಮನೆಗೆ, ಅಣ್ಣ ಬಂದಿದ್ದು ಏಕೆ..? ಅನುಮಾನ ಮೂಡುವುದು ಸಹಜ. ಆದರೆ ಪ್ರಹ್ಲಾದ್ ಜೋಶಿಯವರಿಗೆ ಇಲ್ಲದ ತಂಗಿಯನ್ನು ಸೃಷ್ಟಿಸಿದ್ದು ಯಾರು..? ಅಥವಾ ವಿಜಯಲಕ್ಷ್ಮಿ ಯಾರು..? ಉತ್ತರ ಸಿಗಬೇಕು.
ಪ್ರಹ್ಲಾದ್ ಜೋಶಿ ಹೇಳೋದು ಇಷ್ಟೇ. ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿಗೂ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎನ್ನುವುದಷ್ಟೇ.



