ರಾಜ್ಯಾದ್ಯಂತ ಗೃಹ ಜ್ಯೋತಿ ಜಾರಿಯಲ್ಲಿದೆ. ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ, ಎಲ್ಲ ಮನೆಯವರೂ ಗೃಹಜ್ಯೋತಿ ಲಾಭ ಪಡೆಯಬಹುದು. ಮನೆಯ ವಿದ್ಯುತ್ ಬಳಕೆ 200 ಯುನಿಟ್ ಒಳಗಿರಬೇಕಷ್ಟೇ. ಬಾಡಿಗೆ ಮನೆಯಲ್ಲಿದ್ದವರೂ ಗೃಹಜ್ಯೋತಿ ಸ್ಕೀಂಗೆ ಅರ್ಹರು. ಹೀಗಿದ್ದರೂ ಗೃಹಜ್ಯೋತಿ ಗೊಂದಲಗಳು ಬಗೆಹರಿದಿಲ್ಲ. ಏಕೆಂದರೆ ಬಳಸುತ್ತಿರುವ ಯುನಿಟ್ ಮಿತಿ 200 ಯುನಿಟ್ ಒಳಗೇ ಇದೆ. ಆದರೂ ಝೀರೋ ಬಿಲ್ ಬರ್ತಿಲ್ಲ. 20 ರೂ. 30 ರೂ. 100 ರೂ.. ಹೀಗೆ ಹೆಚ್ಚೇ ಬರುತ್ತಿದೆ. ಹೀಗ್ಯಾಕೆ..?
ಮನೆಯಲ್ಲಿ ಬಳಸುತ್ತಿರುವ ವಿದ್ಯುತ್ 200 ಯುನಿಟ್ ಒಳಗೇ ಇದ್ದರೂ ಕೆಲವರಿಗೆ ಬಿಲ್ ಬರುತ್ತಿರೋದು ಯಾಕೆ? ಇದು ಕೆಲವು ಬಾಡಿಗೆದಾರರ ಪ್ರಶ್ನೆ.
ಇನ್ನು ಹೊಸದಾಗಿ ಬಾಡಿಗೆ ಮನೆಗೆ ಹೋದವರಿಗೂ ಅದೇ ಸಮಸ್ಯೆ. ಇವುಗಳಿಗೆಲ್ಲ ಬೆಸ್ಕಾಂನವರು ಉತ್ತರ ಕೊಟ್ಟಿದ್ದಾರೆ.
ಪಾಯಿಂಟ್ .01ರಷ್ಟು ಹೆಚ್ಚಿದ್ದರೂ ಪೂರ್ತಿ ಬಿಲ್ ಫಿಕ್ಸ್..!
ಅಂದರೆ.. ೨00 ಯೂನಿಟ್ ನಂತರ ಎಷ್ಟು ಬಳಸಿದ್ದರೂ ಕೂಡಾ ಅಂದರೆ.. 200.1, 200.2 ಬಂದರೂ ಕೂಡಾ ಕಂಪ್ಯೂಟರಿನಲ್ಲಿ ಆಟೋಮ್ಯಾಟಿಕ್ ಆಗಿ ಅದು 200 ಯೂನಿಟ್ ಮಿತಿ ದಾಟಿದೆ ಎಂದೇ ಪರಿಗಣಿಸಲ್ಪಡುತ್ತದೆ. ಆಗ ಪೂರ್ತಿ ಬಿಲ್ ಕಟ್ಟಬೇಕಾಗುತ್ತದೆ. ಹಾಗಾದರೆ ಗ್ರಾಹಕರಿಗೆ ಇರುವ ಮಿತಿ ಎಷ್ಟು..? ಅರ್ಥ ಮಾಡಿಕೊಳ್ಳಬೇಕಾದ ವಿಚಾರವೇನೆಂದರೆ 200 ಯೂನಿಟ್ ಎಂದರೆ ಅದನ್ನು 199 ಯೂನಿಟ್ ಎಂದು ಅರ್ಥ ಮಾಡ್ಕೊಳ್ಳಬೇಕು. ಯೂನಿಟ್ ಗಳನ್ನು ಎಚ್ಚರಿಕೆಯಿಂದ ಬಳಸಬೇಕು.
ಆವರೇಜ್ ಲಿಮಿಟ್ ದಾಟಿದ್ರೂ.. ದುಡ್ಡು ಕಟ್ಟಬೇಕು..!
ಪ್ರತೀ ಮನೆಗೂ ಒಂದು ಸರಾಸರಿ ಫಿಕ್ಸ್ ಆಗಿರುತ್ತೆ, ಗೊತ್ತಲ್ವಾ..? ಅಂದ್ರೆ 200 ಯುನಿಟ್ ಲಿಮಿಟ್ ಇದ್ರೂ, 200 ಯುನಿಟ್‌ವರೆಗೆ ಫ್ರೀ ಅಲ್ಲ. ನೀವು ಬಳಸುವ ವಿದ್ಯುತ್ತಿನ ಒಂದು ವರ್ಷದ ಸರಾಸರಿ ಲೆಕ್ಕ ಹಾಕಿ, ಅದನ್ನ ಫಿಕ್ಸ್ ಮಾಡಿರ್ತಾರೆ. ಆ ಸರಾಸರಿ ವಿದ್ಯುತ್ ಲಿಮಿಟ್ 150 ಯುನಿಟ್ ಇರುತ್ತೆ ಅಂದ್ಕೊಳಿ.
ಆಗ ಮನೆಗೆ ಹೊಸದಾಗಿ ಫ್ರಿಡ್ಜ್ ಅಥವಾ ಟಿವಿ, ಮಿಕ್ಸರ್, ಗ್ರೈಂಡರ್ ಇತ್ಯಾದಿ ತಂದಾಗ ಸಹಜವಾಗಿ ವಿದ್ಯುತ್ ಬಳಕೆ ಏರಿಕೆಯಾಗುತ್ತದೆ. ಅಂದ್ರೆ 150ನ್ನೂ ದಾಟಿ 160 ಯುನಿಟ್ ಬಳಸಿದ್ರೆ, ಸರಾಸರಿಗಿಂತ ಹೆಚ್ಚು ಬಂದಿರುತ್ತಲ್ಲ, 10 ಯುನಿಟ್ ಬಿಲ್, ಅಷ್ಟನ್ನ ಕಟ್ಟಲೇಬೇಕು.
ಹಂಗಾದ್ರೆ ಏನ್ ಮಾಡೋದು ಅಂತೀರಾ. ಏನೂ ಮಾಡೋಕಾಗಲ್ಲ. ಮುಂದಿನ ವರ್ಷ ಮತ್ತೆ ಅಪ್‌ಡೇಟ್ ಆದಾಗ ನಿಮ್ಮ ಮನೆಯ ಗೃಹಜ್ಯೋತಿ ವಿದ್ಯುತ್ ಬಳಕೆ ಸರಾಸರಿ 160 ಯುನಿಟ್ ಆಗುತ್ತಲ್ವಾ. ಆಗ ಫುಲ್ ಝೀರೋ ಬಿಲ್ ಸಿಗುತ್ತೆ. ಅಲ್ಲೀವರ್ಗೂ ಬಿಲ್ ಕಟ್ಟಲೇಬೇಕು.
ಹೊಸ ಬಾಡಿಗೆದಾರರ ಸಮಸ್ಯೆ ಏನೂಂದ್ರೆ..
ಈಗ ಒಂದು ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ, ವಾರ್ಷಿಕ ಸರಾಸರಿ 220 ಯುನಿಟ್ ಬಳಸುತ್ತಿದ್ದಾನೆ ಎಂದಿಟ್ಟುಕೊಳ್ಳಿ. 220 ಯುನಿಟ್ ಬಳಸ್ತಾ ಇದ್ದ ವ್ಯಕ್ತಿ, ಮನೆ ಬಿಟ್ಟು ಬೇರೆ ಮನೆಗೆ ಹೋಗ್ತಾನೆ. ಆಗ ಅದೇ ಮನೆಗೆ ಹೊಸದಾಗಿ ಬಾಡಿಗೆದಾರ ಬರ್ತಾನೆ. ಆ ಹೊಸ ಬಾಡಿಗೆದಾರ 100-150 ಯುನಿಟ್ ಬಳಸಿದ್ರೂ, ಆತನಿಗೆ 200 ಯುನಿಟ್ ಮಿತಿ ಗೃಹಜ್ಯೋತಿ ಅನ್ವಯವಾಗುವುದಿಲ್ಲ. ಝೀರೋ ಬಿಲ್ ಬರೋದಿರ್ಲಿ, 150 ಯುನಿಟ್ಟಿಗೂ ಬಿಲ್ ಕಟ್ಟಲೇಬೇಕು. ಏಕೆಂದರೆ ಆ ಮನೆಯ ಆರ್.ಆರ್.ನಂಬರ್ ಪ್ರಕಾರ ಆ ಮನೆ ಗೃಹಜ್ಯೋತಿ ಸ್ಕೀಮಿನ ವ್ಯಾಪ್ತಿಯಲ್ಲಿ ಇಲ್ಲ.
ಹಾಗಾಗಿ, ಹೊಸ ಬಾಡಿಗೆದಾರನಾದರೂ, ಆರ್. ಆರ್. ನಂಬರ್ ಸೇಮ್ ಇರುವ ಕಾರಣ, ಗೃಹಜ್ಯೋತಿ ಅನ್ವಯವಾಗುವುದಿಲ್ಲ. ಬದಲಿಗೆ ಹೊಸದಾಗಿ ಬಂದ ಬಾಡಿಗೆದಾರ ಒಂದು ವರ್ಷದ ಬಳಸಿದ ನಂತರ, ಆ ಮನೆಯ ವಿದ್ಯುತ್ ಬಳಕೆ ಸರಾಸರಿ 200 ಯುನಿಟ್ ಒಳಗೆ ಬಂದರೆ, ಆಗ ಗೃಹಜ್ಯೋತಿ ಅನ್ವಯವಾಗುತ್ತದೆ. ಅಂದ್ರೆ ಆತ ಕೂಡಾ ಒಂದ್ ವರ್ಷ ವೇಯ್ಟ್ ಮಾಡ್ಲೇಬೇಕು.
ಹೊಸ ಬಾಡಿಗೆದಾರರು ಏನು ಮಾಡಬೇಕು..?
ಬಾಡಿಗೆದಾರರು ಮನೆಯನ್ನು ಬಿಡುವಾಗ, ತಮ್ಮನ್ನು ಗೃಹ ಜ್ಯೋತಿ ಯೋಜನೆಯಿಂದ ಕೈಬಿಡಬೇಕು ಎಂದು ಬೆಸ್ಕಾಂಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಗೃಹಜ್ಯೋತಿಯ ಲಾಭ ಪಡೆಯುತ್ತಿದ್ಧ ಮನೆಯ ಆರ್ ಆರ್ ನಂಬರ್, ಆಧಾರ್ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಬೇಕು. ಆಗ, ಆ ಆರ್. ಆರ್. ನಂಬರಿಗೆ ಅವರ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಂದರೆ ಡಿ-ಲಿಂಕ್ ಮಾಡುತ್ತಾರೆ.
ಅವರು ಬೇರೆ ಮನೆಗೆ ಹೋದಾಗ ಅಲ್ಲಿನ ಆರ್ ಆರ್ ನಂಬರ್ ನಲ್ಲಿ ತಮಗೆ ಗೃಹ ಜ್ಯೋತಿ ಯೋಜನೆಗೆ ಪರಿಗಣಿಸಬೇಕೆಂದು ಅಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ, ಹೊಸ ಆರ್. ಆರ್. ಸಂಖ್ಯೆಗೆ ನಿಮ್ಮನ್ನು ಪರಿಗಣಿಸಲಾಗುತ್ತದೆ. ಅದರ ಜೊತೆಯಲ್ಲೇ, ಆ ಆರ್ ಆರ್ ಸಂಖ್ಯೆಯಲ್ಲಿ ಮೊದಲು ಇದ್ದ ಬಾಡಿಗೆದಾರರು ತಮ್ಮ ಗೃಹ ಜ್ಯೋತಿ ಸೌಲಭ್ಯವನ್ನು ನಿಷ್ಟ್ರಿಯಗೊಳಿಸಿದ್ದನ್ನೂ ಸಹ ಖಾತ್ರಿ ಮಾಡಿಕೊಳ್ಳಬೇಕು. ಅಕಸ್ಮಾತ್ ಡಿ-ಲಿಂಕ್ ಆಗಿರದಿದ್ದರೆ, ಆಧಾರ್ ನಂಬರ್ ಇರುವ ಕಾರಣ ಗೃಹಜ್ಯೋತಿ ಸಿಕ್ಕುವುದಿಲ್ಲ. ಹೊಸ ಮನೆಯಲ್ಲಿ ಹಳೆಯ ಬಾಡಿಗೆದಾರರ ವಾರ್ಷಿಕ ಸರಾಸರಿ ಆಧರಿಸಿ ಗೃಹಜ್ಯೋತಿ ಯೋಜನೆಗೆ ಅನ್ವಯವಾಗುತ್ತದೆ.



