ಉಪೇಂದ್ರ ಜೊತೆಗೂಡಿದವರೆಲ್ಲ ಉಪೇಂದ್ರರಂತೆಯೇ ಆಡೋಕೆ ಶುರು ಮಾಡ್ತಾರೆ. ಉಪ್ಪಿ ಅವರಂತೆಯೇ ಮಾತನಾಡೋಕೆ, ಹಾವಭಾವಗಳೆಲ್ಲ ಅವರಂತೆಯೇ ವರ್ತಿಸೋಕೆ ಶುರು ಮಾಡ್ತಾರೆ. ಆದರೆ.. ಇಂತಹದ್ದು ಶಿವಣ್ಣಂಗೂ ಆಗುತ್ತಾ..? ಯುಐ ಟೀಸರ್ ವೇದಿಕೆಯಲ್ಲಿ ಶಿವಣ್ಣ ಮಾತನಾಡಿದ್ದನ್ನ ಒಂದ್ಸಲ ಕೇಳಿಸ್ಕೊಂಡ್ರೆ, ಹಾಗನ್ನಿಸೋದು ಸಹಜ. ಯುಐ ಟೀಸರ್ ಲೋಕಕ್ಕೆ ಸ್ವಾಗತ.
ಇದು ಉಪೇಂದ್ರ ಸೃಷ್ಟಿಸಿರುವ ವಿಚಿತ್ರ ಲೋಕ. ಈ ಜಗತ್ತಿನಲ್ಲಿ ಏನೇನೋ ಇದೆ. ಆದರೆ ಕಥೆ ಮಾತ್ರ ಅರ್ಥವಾಗುವುದಿಲ್ಲ. ಉಪೇಂದ್ರ ಕುದುರೆ ಏರಿ ಬರುತ್ತಾರೆ. ಸಾಧುಕೋಕಿಲ ಮತ್ತು ರವಿಶಂಕರ್ ಪಾತ್ರಗಳು ರಿಜಿಸ್ಟರ್ ಆಗುತ್ತವೆ. ಆದರೆ ಅವರ ವೇಷಭೂಷಣ ಹಾಗೇಕಿದೆ.. ಗೊತ್ತಿಲ್ಲ. ಕಾಡಿನಿಂದ ಆಧುನಿಕ ಜಗತ್ತಿನವರೆಗೆ ಕ್ಯಾಮೆರಾ ಸರಸರನೆ ಓಡುತ್ತದೆ. ಆದರೆ.. ಯಾಕೆ.. ಗೊತ್ತಿಲ್ಲ. ಹಾಗಾದರೆ ಚಿತ್ರದ ಕಥೆ ಏನಿರಬಹುದು. ಗೊತ್ತಿಲ್ಲ. ಒಟ್ಟಿನಲ್ಲಿ ಇದು ಉಪ್ಪಿ ಸೃಷ್ಟಿಸಿದ ವಿಚಿತ್ರ ಲೋಕ. ಜಗತ್ತು.
ಯುಐ ಚಿತ್ರದ ಟೀಸರ್‌ನ್ನು ಶಿವರಾಜ್ಕುಮಾರ್ ರಿಲೀಸ್ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಟೀಸರ್ ಗಮನ ಸೆಳೆಯುತ್ತಿದೆ. ಟ್ವಿಟರ್ನಲ್ಲಿ ಕಿಚ್ಚ ಸುದೀಪ್ ಅವರು ಈ ಟೀಸರ್ ಬಿಡುಗಡೆ ಮಾಡಿದ್ದಾರೆ.
ಯುಐ ಟೀಸರ್ ರಿಲೀಸ್ ಮಾಡಿದ ಶಿವಣ್ಣ ಯುಐ ಹೇಗೆ ಅನಿಸಿತು ಅಂತ ಉಪೇಂದ್ರ ಕೇಳ್ತಾ ಇದ್ರು. ಹೇಳೋದಕ್ಕೆ ಬಹಳ ವಿಷಯಗಳಿವೆ. ಪ್ರಪಂಚ ತೋರಿಸುತ್ತಿದ್ದೀರ. ಯು ಅಂದರೆ ನೀವು. ನೀವು ನೋಡುತ್ತಿರೋ ನಾನು. ಅಂದರೆ, ನನ್ನ ಕಣ್ಣು. ನಾನು ಪ್ರಪಂಚವನ್ನು ನಿನ್ನಿಂದ ನೋಡುತ್ತಿದ್ದೇನೆ. ಅಜನೀಶ್ ಅವರು ಹೇಳಿದ್ರು ಉಪೇಂದ್ರ ಸಿಂಪಲ್ ಫಿಲಾಸಫಿ ಹೇಳುತ್ತಿದ್ರೂ, ರಿಯಲ್ ಫಿಲಾಸಫಿ ಹೇಳಿದ್ದಾರೆ ಅಂತ. ಅದು ಸರಿಯಾಗಿದೆ..
ಶಿವಣ್ಣ ಹೀಗೇ ಹೇಳಿದ್ದರ ಅರ್ಥ ಇಷ್ಟೆ, ಟೀಸರ್ ರಿಲೀಸ್ ಮಾಡಿದ ಶಿವಣ್ಣ ಕೂಡಾ ಉಪೇಂದ್ರ ಅವರಂತೆಯೇ ಆಗಿಬಿಟ್ಟಂತೆ ಕಾಣ್ತಾ ಇದೆ. ಯುಐ’ ಚಿತ್ರವನ್ನು ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ಧಾರೆ. ಚಿತ್ರದಲ್ಲಿ ಬಹುತೇಕ ಗ್ರಾಫಿಕ್ಸ್ ಇದೆ ಅನ್ನೋದು ಟೀಸರ್ ನೋಡಿದಾಗಲೇ ಗೊತ್ತಾಗುತ್ತೆ. ಉಪೇಂದ್ರ ಎದುರು ರೀಷ್ಮಾ ನಾಣಯ್ಯ ಹೀರೋಯಿನ್. ಆದರೆ ಟೀಸರಿನಲ್ಲಿ ರೀಷ್ಮಾ ನಾಣಯ್ಯ ಬರೋದೇ ಇಲ್ಲ.
ಅಂದಂಗೆ ಶಿವಣ್ಣ ಓಂ-2 ಸೀಕ್ವೆಲ್ ಮಾಡೋಕೆ ರೆಡಿ ಅಂತೆ. ಓಂ 2 ಬಗ್ಗೆ ಹೇಳುತ್ತಿದ್ದರು. ಆಗಲಿ ಬಿಡಿ.. ಅದೇನು ಮುಂದಿನ ವರ್ಷವೇ ಆಗಬೇಕು ಅಂತೇನೂ ಇಲ್ಲ. ಇನ್ನು 10 ವರ್ಷ ಬಿಟ್ಟು ಆಗಲಿ. ಶಿವಣ್ಣ ಹಾಗೇ ಇರುತ್ತಾನೆ. 72 ಆದರೂ ಹಾಗೇ ಇರುತ್ತಾನೆ. ವರಿ ಮಾಡಬೇಕು ಉಪೇಂದ್ರ, ಶಿವಣ್ಣ ಹಾಗೇ ಇರ್ತಾನೆ ಎಂದಿದ್ದಾರೆ ಶಿವಣ್ಣ.
ಎಂದಿನಂತೆ ತಮ್ಮ ತಲೆಗೂದಲಿಗೆ ಕೈಹಾಕಿದ ಮೊದಲ ಡೈರೆಕ್ಟರ್ ಉಪೇಂದ್ರ ಅನ್ನೋದನ್ನೂ ಮೆಚ್ಚುಗೆಯಿಂದ ಹೇಳಿದ ಶಿವಣ್ಣ, ಓಂ ಹಿಟ್ ಆಯ್ತು ಅನ್ನೋದೇನೋ ನಿಜ. ಆದರೆ ಅದಕ್ಕೂ ಮೊದಲಿನ ಶ್, ತರ್ಲೆ ನನ್ಮಗ ಚಿತ್ರಗಳೂ ಚೆನ್ನಾಗಿದ್ದವು. ತರ್ಲೆ ನನ್ಮಗ ಚಿತ್ರವನ್ನು ನಾನು 20 ಬಾರಿ ನೋಡಿದ್ದೆ ಎಂದರು. ಅಂದಹಾಗೆ ತರ್ಲೆ ನನ್ಮಗ ಚಿತ್ರವನ್ನ ಪುನೀತ್ ಕೂಡಾ ಇಷ್ಟಪಟ್ಟು ಹಲವು ಬಾರಿ ಥಿಯೇಟರಿಗೇ ಹೋಗಿ ನೋಡಿದ್ದರಂತೆ.



