ಇದು ಉಪೇಂದ್ರ ಅದೃಷ್ಟದ ಲೆಕ್ಕಾಚಾರ ಇರಲಿಕ್ಕಿಲ್ಲ. ಏಕೆಂದರೆ ಈ ಯಶಸ್ಸನ್ನೆಲ್ಲ ಅವರು ಆರಂಭದಲ್ಲೇ ಕಂಡಿದ್ದಾರೆ. ಆದರೂ.. ಇದು ಅಭಿಮಾನಿಗಳ ಲೆಕ್ಕಾಚಾರ ಅಷ್ಠೆ. ‘ಯುಐ’ ಸಿನಿಮಾ ಇದೇ ಡಿಸೆಂಬರ್ 20ರ ಶುಕ್ರವಾರ ತೆರೆಗೆ ಬರುತ್ತಿದೆ. ಪ್ರೇಕ್ಷಕರು ಕೂಡಾ ಸುದೀರ್ಘ ಕಾಲದಿಂದ ಎದುರು ನೋಡುತ್ತಿರುವ ಸಿನಿಮಾ ಯುಐ. ಇದು ಡಿಸೆಂಬರ್ ಲಕ್ ಎದುರು ನೋಡುತ್ತಿರುವ ಸಿನಿಮಾನಾ..?
ಮುಂಗಾರು ಮಳೆ, ಕೆಜಿಎಫ್, ಕಿರಿಕ್ ಪಾರ್ಟಿ, ಕಾಟೇರ, 777 ಚಾರ್ಲಿ, ಮಿಸ್ಟರ್ & ಮಿಸೆಸ್ ರಾಮಾಚಾರಿ.. ಹೀಗೆ ದೊಡ್ಡ ಲಿಸ್ಟೇ ಇದೆ. ಇವೆಲ್ಲ ಡಿಸೆಂಬರ್ ಅಂತ್ಯದಲ್ಲಿ ರಿಲೀಸ್ ಆದ ಚಿತ್ರಗಳು ಬಹುತೇಕ ಬ್ಲಾಕ್ ಬಸ್ಟರ್ ಆಗಿವೆ. ಡಿಸೆಂಬರ್ ಕೊನೆಯಲ್ಲಿ ರಿಲೀಸ್ ಮಾಡಿ ಸಕ್ಸಸ್ ಕಂಡವರ ಲಿಸ್ಟಲ್ಲಿ ಗಣೇಶ್, ಯಶ್, ರಕ್ಷಿತ್ ಶೆಟ್ಟಿ, ದರ್ಶನ್.. ಸೇರಿದಂತೆ ಹಲವಾರು ನಟರಿದ್ದಾರೆ. ವಿಚಿತ್ರವೇನು ಗೊತ್ತೇ.. ಇದು ಹಾಲಿವುಡ್ಡಿಗೂ ಹೇಳಿ ಮಾಡಿಸಿದ ಸಮಯ. ಸ್ಪೈಡರ್ ಮ್ಯಾನ್, ಟೈಟಾನಿಕ್, ಲಾರ್ಡ್ ಆಫ್ ದಿ ರಿಂಗ್ಸ್.. ಸೇರಿದಂತೆ ಕೆಲವು ಹಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರಗಳೂ ರಿಲೀಸ್ ಆಗಿರುವುದು ಕೂಡಾ ಡಿಸೆಂಬರ್ ಅಂತ್ಯದಲ್ಲೇ. ಹಾಗಂತ ಡಿಸೆಂಬರಿನಲ್ಲಿ ರಿಲೀಸ್ ಆದ ಚಿತ್ರಗಳೆಲ್ಲ ಸೂಪರ್ ಹಿಟ್ ಅನ್ನೋಕಾಗಲ್ಲ. ಆದರೆ ಉಪೇಂದ್ರ ತಮ್ಮ ಚಿತ್ರವನ್ನು ರಿಲೀಸ್ ಮಾಡ್ತಿರೋದಕ್ಕೆ ಕಾರಣ ಡಿಸೆಂಬರ್ ಅಂತ್ಯ ಲಕ್ಕಿ ಡೇಟ್ ಎಂಬುದಷ್ಟೇ ಕಾರಣ ಅಲ್ಲ, ಬಿಸಿನೆಸ್ ಕಾರಣವೂ ಇದೆ.
ಡಿಸೆಂಬರ್ ಎಂಡ್ ರಿಲೀಸ್ ಬಿಸಿನೆಸ್ ಲೆಕ್ಕಾಚಾರ : ಡಿಸೆಂಬರ್ 20ರಿಂದ 22ರವರೆಗೆ ವೀಕೆಂಡ್ ಸಿಗುತ್ತದೆ. ನಂತರ ಕ್ರಿಸ್‌ಮಸ್ ರಜೆ ಬರುತ್ತದೆ. ಇದು ಸಿನಿಮಾದ ಕಲೆಕ್ಷನ್ ಮೇಲೆ ಪಾಸಿಟಿವ್ ಪರಿಣಾಮ ಬೀರಲಿದೆ. ಅಲ್ಲದೆ, ಅದೇ ದಿನ ತೆಲುಗಿನ ರಾಮ್ ಚರಣ್ ತೇಜ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಆ ಸಿನಿಮಾವನ್ನು ಸಂಕ್ರಾಂತಿಗೆ ರಿಲೀಸ್ ಮಾಡುವುದಾಗಿ ಆ ಚಿತ್ರ ತಂಡ ಹೇಳಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ದರ್ಶನ್ ತೂಗುದೀಪ ಅವರ ‘ಡೆವಿಲ್’ ಸಿನಿಮಾವು ಇದೇ ಕ್ರಿಸ್‌ಮಸ್ ವೀಕ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಅವರಿನ್ನೂ ಜೈಲಿನಲ್ಲಿ ಇರುವುದರಿಂದ ಅದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಎಲ್ಲವೂ ಚಿತ್ರಕ್ಕೆ ಪ್ಲಸ್ ಆಗಲಿವೆ.
‘ಯುಐ’ ಪ್ಯಾನ್ ಇಂಡಿಯಾ ಸಿನಿಮಾ. ಎಲ್ಲಾ ಭಾಷೆಗೂ ಅನುಕೂಲವಾಗುವಂತಹ ರಿಲೀಸ್ ಡೇಟ್ ಕೂಡಾ ಸಿಕ್ಕಿದೆ. ಡಿಸೆಂಬರ್ 20ರಂದು ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ‘ಯುಐ’ ಸಿನಿಮಾ ತೆರೆಕಾಣಲಿದೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್, ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…” ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ ಉಪೇಂದ್ರ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು. ಚಿತ್ರ ಉಪೇಂದ್ರ ಸಿಗ್ನೇಚರ್ ಶೈಲಿಯಲ್ಲಿ ಇರಬಹುದು ಎನ್ನುವುದು ನಿರೀಕ್ಷೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವುದು ಉಪೇಂದ್ರ. ಅವರ ಶೈಲಿಯ ಸಿನಿಮಾ ವಿಭಿನ್ನವಾಗಿರುತ್ತದೆ ಹಾಗೂ ಕಥೆಯಲ್ಲಿ ಹೊಸತೇನನ್ನೋ ಹೇಳುತ್ತಾ ಫಿಲಾಸಫಿಕಲ್ ಸ್ಪರ್ಶ ನೀಡುತ್ತಾರೆ ಎಂಬ ಅಭಿಮಾನಿಗಳದ್ದು. ಎರಡನೆಯದಾಗಿ ಇದು ಬಿಗ್ ಬಜೆಟ್ ಚಿತ್ರ. ಜೊತೆಗೆ ಚಿತ್ರಕ್ಕಾಗಿ ಎಂಟು ಎಕರೆ ಜಾಗದಲ್ಲಿಹೊಸ ನಗರವನ್ನೇ ಸೃಷ್ಟಿ ಮಾಡಲಾಗಿದ್ದು, 1400ಕ್ಕೂ ಅಧಿಕ ವಿಎಫ್‌ಎಕ್ಸ್ ಶಾಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದರ ಜತೆಗೆ ವರ್ಚುವಲ್ ರಿಯಾಲಿಟಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಕೂಡ ‘ಯುಐ’ ಪಾತ್ರವಾಗಿದೆ. ಮೊಕೊಬಾಟ್ ಎಂಬ ಅಟೊಮ್ಯಾಟೆಡ್ ಕಂಪ್ಯೂಟರ್‌ನಲ್ಲಿ ಕೂಡ ಶೂಟಿಂಗ್ ನಡೆಸಲಾಗಿದೆ.
ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾವನ್ನು ಲಹರಿ ಫಿಲ್ಮ್ಸ್‌ನ ಮನೋಹರ್ ನಾಯ್ಡು ಮತ್ತು ವೀನಸ್ ಎಂಟರ್‌ಪ್ರೈಸಸ್‌ನ ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದು, ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಉಪೇಂದ್ರ ಅವರ ತ್ರಿಡಿ ಬಾಡಿ ಡಬಲ್ ಬಳಸಲಾಗಿದೆ. ಇದಕ್ಕಾಗಿ 200ಕ್ಕೂ ಹೆಚ್ಚು ಕ್ಯಾಮೆರಾ ಬಳಸಿ ತ್ರಿಡಿ ಸ್ಕ್ಯಾನ್ ಮಾಡಲಾಗಿದೆ. ಈ ರೀತಿ ಬಾಡಿ ಡಬಲ್ ಮಾಡಿರುವ ಭಾರತದ ಮೊದಲ ನಟ ಉಪೇಂದ್ರ ಎಂದಿದೆ ಚಿತ್ರತಂಡ. ‘ಯುಐ’ ತಲೆಗೆ ಹುಳ ಬಿಡುವ ಸಿನಿಮಾ ಅಲ್ಲ. ತಲೆಯಲ್ಲಿರುವ ಹುಳ ತೆಗೆಯುವ ಸಿನಿಮಾ. ನಮ್ಮ ನಿಮ್ಮ ಸಿನಿಮಾ ಎಂದು ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
ಅಂದಹಾಗೆ ಉಪೇಂದ್ರ ಅವರ ಈ ಹಿಂದಿನ ಸೂಪರ್ ಹಾಗೂ ಉಪ್ಪಿ2 ಚಿತ್ರಗಳು ಹಿಟ್ ಆಗಿವೆಯಾದರೂ ʻಉಪೇಂದ್ರ ಲೆವೆಲ್ʼಗೆ ಹೋಲಿಸಿದರೆ ಅವು ಹಿಟ್ ಚಿತ್ರಗಳಲ್ಲ. ಏಕೆಂದರೆ ಅವರ ಹಿಂದಿನ ಎ, ಉಪೇಂದ್ರ ಚಿತ್ರಗಳು ಸೃಷ್ಟಿಸಿದ್ದ ಕ್ರೇಜ್ ಅಂಥಾದ್ದು. ಈ ಬಾರಿ ಯುಐ ಚಿತ್ರ ಆ ರೇಂಜಿಗೆ ಹಿಟ್ ಆಗಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ.



