ಕಳೆದ ಕೆಲದಿನಗಳಿಂದ ಭವಾನಿ ರೇವಣ್ಣ ಅವರು ಭಾರಿ ಸುದ್ದಿಯಲ್ಲಿದ್ದಾರೆ. ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಭವಾನಿ ಪ್ರಯಾಣ ಮಾಡುತ್ತಿದ್ದ ಕಾರು ಯಾರಿಗೆ ಸೇರಿದ್ದು ಎಂಬ ಚರ್ಚೆ ಶುರುವಾಗಿದೆ. ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರ್‌ಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡಿದಿದ್ದನು. ಈ ವೇಳೆ ಕಾರ್ನಲ್ಲಿದ್ದ ಭವಾನಿ ರೇವಣ್ಣ ತಮ್ಮ ಕೋಟಿ ಬೆಲೆ ಬಾಳುವ ಕಾರ್ಗೆ ಡ್ಯಾಮೆಜ್ ಆಯ್ತು ಎನ್ನುವ ಸಿಟ್ಟಿಗೆ ಬೈಕ್ ಸವಾರನಿಗೆ ಬೈದಿದ್ದ ಭವಾನಿ, ಪದೇ ಪದೇ ಇದು ಒಂದೂವರೆ ಕೋಟಿಯ ಕಾರು ಎಂದು ಹೇಳಿದ್ದರು. ಅಂದಹಾಗೆ ಆ ಕಾರು ಟೊಯೊಟಾ ವೆಲ್‌ಫೈರ್ ಮಾಡೆಲ್ಲಿನದ್ದು. ಇದರಲ್ಲಿ ಹೈ ವೆರಿಯೆಂಟ್ ಈ ಕಾರಿಗೆ ಪ್ರಸ್ತುತ ಆನ್ ರೋಡ್ ಬೆಲೆಯು ರೂ.1,48,58,511 ಆಗಿದ್ದು, ಈ ಕಾರಿನ ಟಾಪ್ ವೆರಿಯೆಂಟ್ ಮಾದರಿಯ ಬೆಂಗಳೂರು ಆನ್ ರೋಡ್ ಬೆಲೆಯು ರೂ.1.61 ಕೋಟಿ.
ಆದರೆ ಅವರೇ ಹೇಳಿಕೊಂಡಿದ್ದಂತೆ ಕಾರು ಅವರದ್ದೇ. ಆದರೆ ಆ ಕಾರು ಅವರದ್ದಲ್ಲ ಎನ್ನುವ ಮಾಹಿತಿ ಹೊರಬಿದ್ದಿದ್ದು,ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸೇರಿದ್ದು ಎಂಬ ಆರೋಪ ಕೇಳಿ ಬಂದಿದೆ. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಕಾರ್ಯದರ್ಶಿ ವಿ.ಆರ್.ಮರಾಠೆ, ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಪ್ರಕಾರ ಸೂರಜ್ ರೇವಣ್ಣ ಮೊದಲು ಇದು ತಮ್ಮ ತಾಯಿಯ ಕಾರು ಎಂದು ಹೇಳಿದ್ದರು. ನಂತರ ಮಾಧ್ಯಮದವರ ಪ್ರಶ್ನೆಗೆ ಇಲ್ಲ ಇದು ತಮ್ಮ ತಾಯಿಯವರ ಸ್ನೇಹಿತರ ಕಾರು ಎಂದು ಹೇಳಿ ಗೊಂದಲಕ್ಕೆ ಎಡೆ ಮಾಡಿದ್ದರು. ಕಾರಿನ ಮಾಲೀಕತ್ವದ ಕುರಿತು ಪರಿಶೀಲನೆ ಮಾಡಿದಾಗ ಅದು ಆಫ್ರಾ ಇನ್ಫ ಎಂಜಿನಿಯರಿಂಗ್ ಕಂಪನಿ ಹೆಸರಿನಲ್ಲಿ ನೋಂದಣಿ ಆಗಿದೆ. ಆ ಕಂಪನಿಯ ನಿರ್ದೇಶಕ ಅಭಿಜಿತ್ ಅಶೋಕ್ ಎಂಬುವವರಾಗಿದ್ದು, ಅವರು ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರ ಎಂದಿದ್ದಾರೆ.
ಬಿಬಿಎಂಪಿಯ ಗುತ್ತಿಗೆದಾರರರು ಭವಾನಿ ರೇವಣ್ಣ ಅವರಿಗೆ ಕಾರನ್ನು ಕೊಡುಗೆಯಾಗಿ ಬಂದಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಆ ಗುತ್ತಿಗೆದಾರರಿಗೂ ರೇವಣ್ಣ ಕುಟುಂಬಕ್ಕೂ ಏನು ಸಂಬಂಧ?, ಕಾಮಗಾರಿ ಪಡೆಯಲು ರೇವಣ್ಣ ಅವರ ಕುಟುಂಬದ ಸಹಾಯ ಇದೆಯಾ?, ವಾಹನ ಮಾಲೀಕರು ರೇವಣ್ಣ ಕುಟುಂಬದ ಬೇನಾಮಿಯಾ?, ಕೋಟಿ ಕೋಟಿ, ಹಣ ಇದ್ದರೂ ಭವಾನಿ ರೇವಣ್ಣ ಸ್ನೇಹಿತರ ಕಾರು ಬಳಸುತ್ತಿರುವುದು ಏಕೆ? ಎಂಬೆಲ್ಲಾ ಪ್ರಶ್ನೆಗಳು ಮೂಡಿವೆ. ಹೀಗಾಗಿ, ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಅಪಘಾತಕ್ಕೀಡಾದ ಕಾರು ಒಂದೂವರೆ ಕೋಟಿ ಬೆಲೆ ಬಾಳುವಂತಹದ್ದು ಎಂದು ಭವಾನಿ ರೇವಣ್ಣ ಅವರೇ ಹೇಳಿರುವುದರಿಂದ ಈ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ದೇವೇಗೌಡರು ಕ್ಷಮೆ ಕೇಳುವುದರ ಜೊತೆ ಇನ್ನೇನು ಮುಗಿಯಿತು ಎಂದುಕೊಂಡಿದ್ದ ಪ್ರಕರಣಕ್ಕೆ ಮತ್ತೆ ಜೀವ ಕೊಟ್ಟಿದ್ಧಾರೆ. ಭವಾನಿ ರೇವಣ್ಣ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ.



