ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೊದಲ ದಿನದಿಂದಲೂ ಒಂದು ಬಣ ಬಿ.ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನು ವಿರೋಧಿಸುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ವರ್, ಸಿಟಿ ರವಿ, ಪ್ರತಾಪ್ ಸಿಂಹ ಮೊದಲಾದವರೆಲ್ಲ ಒಂದುಗೂಡಿ ಹೋರಾಡ್ತಿದ್ದಾರೆ.
ವಿಜಯೇಂದ್ರ ಅವರನ್ನು ನಾಯಕ ಎಂದು ಒಪ್ಪುವುದಿಲ್ಲ ಎಂದು ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರು ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿರೋದು ಬಸನಗೌಡ ಪಾಟೀಲ ಯತ್ನಾಳ್. ಈಗ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಿದೆ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ.
ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ರೇಣುಕಾಚಾರ್ಯ ಅವರು ಯತ್ನಾಳ ಬೇಷರತ್ ಕ್ಷಮೆಯಾಚಿಸುವಂತೆ ಹೇಳಬೇಕು. ಕ್ಷಮೆ ಕೇಳದಿದ್ದರೆ ಅವರ ಮೇಲೆ ಪಕ್ಷದಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಯಲ್ಲೇ ಶಾಸಕ ಬಸನಗೌಡ ಪಾಟೀಲ ಅವರನ್ನು ಬಿಜೆಪಿಯಿಂದ ಕೂಡಲೇ ಉಚ್ಚಾಟನೆ ಮಾಡಿ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ನಿರ್ಣಯ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ ರವೀಂದ್ರನಾಥ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಯತ್ನಾಳ ಉಚ್ಚಾಟನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿ, ಬಿಜೆಪಿ ವರಿಷ್ಠರಿಗೆ ದೂರು ನೀಡುವುದಕ್ಕೂ ನಿರ್ಧರಿಸಲಾಗಿದೆ.
ಇದೇ ಮೊದಲ ಬಾರಿಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿರುವ ಯತ್ನಾಳ್ ನಾನು ಹೇಳಿದ್ದೇ ಬೇರೆ. ಮಾಧ್ಯಮಗಳು ವರದಿ ಮಾಡಿದ್ದೇ ಬೇರೆ ಎಂದು ತಪ್ಪುಗಳನ್ನೆಲ್ಲ ಮಾಧ್ಯಮಗಳ ಮೇಲೆ ಹಾಕಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳನ್ನುದ್ದೇಸಿ ಮಾತನಾಡುವಾಗ ಕಾಂಗ್ರೆಸ್ ನಲ್ಲಿರುವ ಒಳಕಿತ್ತಾಟದಿಂದ ಸಿದ್ದರಾಮಯ್ಯ ನವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಇಳಿಸಿ, ಬೇರೆ ಆಕಾಂಕ್ಷಿಗಳು ಮುಖ್ಯ ಮಂತ್ರಿಗಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ. ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದಕ್ಕೆ ರಾಜಕೀಯ ಲೇಪ ಬಳೆದು ಮಾಧ್ಯಮಗಳು ಬೇರೆ ಏನೋ ಅರ್ಥ ಬರುವಂತೆ ವರದಿ ಮಾಡಿದ್ದಾರೆ. ಇವೆಲ್ಲ ಶುದ್ಧ ಸುಳ್ಳಾಗಿದ್ದು, ಈ ರೀತಿಯಾದ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆ ಹೈಕಮಾಂಡ್ ಮಟ್ಟಕ್ಕೂ ತಲುಪಿತ್ತು. ಯತ್ನಾಳ್ ಅವರ ಈ ಹೇಳಿಕೆಯಿಂದ ಬಿಜೆಪಿಯ ರಾಷ್ಟ್ರೀಯ ನಾಯಕರೂ ಗರಂ ಆಗಿದ್ದರು. ಇದುವರೆಗೆ ಪಕ್ಷದ ಸ್ಥಳೀಯ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದ ಯತ್ನಾಳ್ ಅವರ ಆ ಮಾತು, ರಾಷ್ಟ್ರೀಯ ಮಟ್ಟದಲ್ಲೂ ಬಿಜೆಪಿ ತಲೆತಗ್ಗಿಸುವಂತೆ ಮಾಡಿತ್ತು. ಸಿದ್ದರಾಮಯ್ಯ, ಮುಡಾ ಹಗರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ, ಬಿಜೆಪಿಯ ವಿರುದ್ಧ ಕಾಂಗ್ರೆಸ್ಸಿಗರಿಗೆ ದೊಡ್ಡ ಅಸ್ತ್ರವನ್ನೇ ಕೊಟ್ಟಿತ್ತು. ಇದೀಗ ಯತ್ನಾಳ್, ತಮ್ಮ ಮಾತಿನ ಅರ್ಥ ಅದಲ್ಲ, ಇದು ಎನ್ನುತ್ತಿದ್ದಾರೆ.
ಆದರೆ ಈಗ ಯತ್ನಾಳ್ ಅವರ ಬಣವೂ ರಾಜಕೀಯವಾಗಿ ಏಟು ಎದಿರೇಟು ಕೊಡಲು ಸಿದ್ಧವಾಗಿರುವಂತಿದೆ. ಏಕೆಂದರೆ ಇಷ್ಟು ದಿನ ಮೌನವಾಗಿದ್ದ ವಿಜಯೇಂದ್ರ ಟಿಟ್ ಫಾರ್ ಟ್ಯಾಟ್ ಎನ್ನುತ್ತಿದ್ದಾರೆ. ಪಕ್ಷದ ದೊಡ್ಡ ನಾಯಕರು ಮೌನವಾಗಿರುವ ಸಂದರ್ಭದಲ್ಲಿ ತಾನೂ ಸುಮ್ಮನಿದ್ದರೆ, ದೊಡ್ಡ ಹೊಡೆತ ತಮಗೇ ಬೀಳಬಹುದು ಎಂದು ಅರ್ಥವಾದಂತಿದೆ. ಈಗ ವಿಜಯೇಂದ್ರ ಅವರ ಬಣವೂ ಆಕ್ಟಿವ್ ಆಗಿದ್ದು, ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಮೊದಲ ಹೆಜ್ಜೆ ಇಟ್ಟಿದೆ.



