‘ರಾಕಿಂಗ್ ಸ್ಟಾರ್’ ಯಶ್ ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆ ಅಂತ್ಯವಾಗುವ ಸಮಯ ಹತ್ತಿರವಾಗುತ್ತಿದೆ. ಟಾಕ್ಸಿಕ್ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಸೆಟ್ ಬಾಯ್ ಹಾಗೂ ಲೈಟ್ ಬಾಯ್ ಸುನೀಲ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿರುವುದು ವಿಶೇಷ. ಸೆಟ್ ಬಾಯ್ ಹಾಗೂ ಲೈಟ್ ಬಾಯ್ ಆಗಿರುವ ಸುನಿಲ್, ಸುದೀರ್ಘ ಕಾಲದಿಂದ ಯಶ್ ಅವರ ಜೊತೆಯಲ್ಲೇ ಇದ್ದಾರೆ. ಶ್ರಾವಣ ಮಾಸದ ಮೊದಲ ಸಂಭ್ರಮ ಇದು.
ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿಯಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಹಾಕಿರುವ ಸೆಟ್‌ನಲ್ಲೇ ಮುಹೂರ್ತ ನಡೆದಿದೆ. ಬ್ರಾಹ್ಮೀ ಮುಹೂತದಲ್ಲಿ ನಡೆದಿರುವ ಮುಹೂರ್ತದಲ್ಲಿ ಚಿತ್ರತಂಡ ಹಾಜರಿತ್ತು. ಗೀತು ಮೋಹನ್ ದಾಸ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣದ ಚಿತ್ರಕ್ಕೆ ಪ್ರೀಪ್ರೊಡಕ್ಷನ್ ಕೆಲಸಗಳನ್ನು ಒಂದು ಹಂತಕ್ಕೆ ಮುಗಿಸಿಕೊಂಡು ಶೂಟಿಂಗ್ ಶುರು ಮಾಡಿದ್ದಾರೆ. ಯಶ್ ಹೀರೋ ಆಗಿ ನಟಿಸುತ್ತಿದ್ದರೆ, ಅವರಿಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಯನತಾರ, ಕಿಯಾರಾ ಅಡ್ವಾಣಿ, ಸಾಯಿ ಪಲ್ಲವಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆಯಾದರೂ.. ಯಾರ ಹೆಸರೂ ಫೈನಲ್ ಆಗಿಲ್ಲ.
2023ರ ಡಿಸೆಂಬರ್ ತಿಂಗಳಲ್ಲಿ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಘೋಷಣೆ ಆಗಿತ್ತು. ಅಂದೇ ಈ ಸಿನಿಮಾವನ್ನು 2025ರ ಏಪ್ರಿಲ್ 10ರಂದು ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು. ರಿಲೀಸ್ ಡೇಟ್ಗೆ ಈಗ ಉಳಿದಿರುವುದು ಕೇವಲ 8 ತಿಂಗಳು. ಆದರೆ ಸಿನಿಮಾ ಮುಹೂರ್ತ ಆಗಿರುವುದು ಘೋಷಣೆಯಾದ 8 ತಿಂಗಳ ನಂತರ. ಇನ್ನು, ಸಿನಿಮಾ ಬಿಡುಗಡೆಗೂ ಉಳಿದಿರುವುದು ಬರೀ 8 ತಿಂಗಳು ಮಾತ್ರ. ಕರೆಕ್ಟ್ ಆಗಿ ಹೇಳಬೇಕೆಂದರೆ ಇನ್ನು 246 ದಿನಗಳಷ್ಟೇ ಉಳಿದಿದೆ.
‘ಟಾಕ್ಸಿಕ್’ ಸಿನಿಮಾಗೆ ಈಗಾಗಲೇ ದೊಡ್ಡ ದೊಡ್ಡ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಹಲವಾರು ತಿಂಗಳಿನಿಂದಲೇ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಲಾಗಿದೆ. ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಹಾಗಾಗಿ, ಸತತವಾಗಿ ಶೂಟಿಂಗ್ ಮಾಡಿ, ಅಂದುಕೊಂಡ ಸಮಯಕ್ಕೆ ‘ಟಾಕ್ಸಿಕ್’ ಸಿನಿಮಾ ತೆರೆಕಂಡರೆ ಆಶ್ಚರ್ಯವೇನಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ನಾರಾಯಣ್ ಜೊತಗೂಡಿ ಯಶ್ ಕೂಡ ‘ಟಾಕ್ಸಿಕ್’ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕಾಗಿಯೇ ‘ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್’ ಎಂಬ ಸಂಸ್ಥೆಯನ್ನು ಯಶ್ ಆರಂಭಿಸಿದ್ದಾರೆ.
ಟಾಕ್ಸಿಕ್ ಚಿತ್ರಕ್ಕಾಗಿ ಅತ್ಯುತ್ತಮ ತಂತ್ರಜ್ಞರ ತಂಟ ಕಟ್ಟಿದ್ದಾರೆ ಯಶ್. ಹಾಲಿವುಡ್ʻನ ಪ್ರಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಅಥವಾ ಸ್ಟಂಟ್ ಕೊಆರ್ಡಿನೇಟರ್ ಜೆಜೆ ಪೆರ್ರಿ ಕೂಡಾ ಟಾಕ್ಸಿಕ್ ತಂಡದಲ್ಲಿದ್ದಾರೆ. ದಿ ರನ್ಡೌನ್’, ‘ಜಾನ್ ವಿಕ್’, ‘ಬ್ಯಾಟ್ಮ್ಯಾನ್’, ‘ಮಾರ್ಷಲ್ ಕೊಂಬ್ಯಾಟ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಆಕ್ಷನ್ ಸಿನಿಮಾಗಳಲ್ಲಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಎಲ್ಲ ಆಕ್ಷನ್ ದೃಶ್ಯಗಳನ್ನು ಜೆಜೆ ಪೆರ್ರಿ ಅವರೇ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.



