ರೈತರ ಜೀವನವೇ ಲಾಟರಿಯಂತೆ. ಕಷ್ಟವೋ.. ನಷ್ಟವೋ.. ಬೆಳೆಯುತ್ತಾರೆ. ಅಪರೂಪಕ್ಕೊಮ್ಮೆ ಲಾಭ ಸಿಗುತ್ತದೆ. ಇದೀಗ ಟೊಮ್ಯಾಟೋ ಮತ್ತು ಇತರೆ ತರಕಾರಿ ಬೆಳೆದವರ ಸರದಿ. ತರಕಾರಿ..ಅದರಲ್ಲಿಯೂ ಟೊಮ್ಯಾಟೋ ಬೆಳದವರಿಗೀಗ ಬಂಪರ್ ಲಾಭ ಸಿಗುತ್ತಿದೆ. ಕೋಲಾರದ ರೈತರೊಬ್ಬರು ಒಂದೇ ದಿನದಲ್ಲಿ 38 ಲಕ್ಷ ಬಂಪರ್ ಲಾಭ ಪಡೆದುಕೊಂಡಿದ್ದಾರೆ. ಕೇವಲ 2 ಸಾವಿರ ಬಾಕ್ಸ್ ಟೊಮ್ಯಾಟೋಗೆ 38 ಲಕ್ಷ ರೂ. ಸಿಕ್ಕಿದೆ.
ಕೋಲಾರದ (Kolar) ಬೇತಮಂಗಲದಲ್ಲಿ ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರು 40 ಎಕರೆ ಜಮೀನಿನಲ್ಲಿ 40 ವರ್ಷಗಳಿಂದ ತರಕಾರಿ ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ ಇವರು ಟೊಮ್ಯಾಟೋ (Tomato) ಬೆಳೆದಿರುವುದು ಎರಡೂವರೆ ಎಕರೆಯಲ್ಲಿ. ಪ್ರಭಾಕರ್ ಗುಪ್ತಾ ಸೋದರರು ಅತ್ಯುತ್ತಮ ದರ್ಜೆಯ ಟೊಮ್ಯಾಟೋ ಬೆಳೆದಿದ್ದಾರೆ. ಈಗ ಇರುವ ಬೆಲೆಯಲ್ಲಿ ಗರಿಷ್ಠ 2200 ರೂ.ಗೆ ಒಂದು ಬಾಕ್ಸ್ ಸೇಲ್ ಆಗಿದೆ. ಹೀಗಾಗಿ 38 ಲಕ್ಷ ರೂ. ಸಿಕ್ಕಿದೆಯಂತೆ.
ಒಂದು ಎಕರೆಯಲ್ಲಿ ಟೊಮೆಟೊ (Tomato) ಬೆಳೆಯಲು ಸುಮಾರು 2.5 ಲಕ್ಷ ರೂ. ಖರ್ಚಾಗಿದೆ. ನಾನು 2.5 ಎಕರೆಯಲ್ಲಿ 300 ಬಾಕ್ಸ್ ಟೊಮೆಟೊ ಬೆಳೆಯುತ್ತಿದ್ದೆ. ಈಗ ಕೇವಲ 90 ಬಾಕ್ಸ್ ಟೊಮೆಟೊ ಸಿಕ್ಕಿದೆ ಎಂದು ರೈತ ಎಸ್ಬಿ ಕುಮಾರ್ ತಿಳಿಸಿದ್ದಾರೆ.
ಹಾಗೆ ನೋಡಿದರೆ ಬೆಲೆ ಏರಿಕೆಗೆ ಇದೇ ಕಾರಣ. ಈ ರೈತರೇ ಹೇಳುವ ಪ್ರಕಾರ ಇವರ ಎರಡೂವರೆ ಎಕರೆ ಜಮೀನಿನಲ್ಲೇ 300 ಬಾಕ್ಸ್ ಟೊಮ್ಯಾಟೋ ಸಿಗುವ ಜಾಗದಲ್ಲಿ ಕೇವಲ 90 ಬಾಕ್ಸ್ ಸಿಗುತ್ತಿದೆ. ಅಲ್ಲಿಗೆ ಇಳುವರಿ ಕಡಿಮೆಯಾಗಿದೆ. ಸಹಜವಾಗಿಯೇ ಬೆಲೆಯೂ ಏರಿಕೆಯಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೇಟೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮಂಗಳವಾರದಂದು 15 ಕೆಜಿ ಟೊಮೆಟೊ ಬಾಕ್ಸ್ಗೆ ಗರಿಷ್ಠ 2,200 ರೂ. ದೊರೆತಿತ್ತು. ಕೋಲಾರದಿಂದ ದಿನಕ್ಕೆ 8,000 ಮೆಟ್ರಿಕ್ ಟನ್ ಟೊಮೆಟೊ ಪೂರೈಕೆಯಾಗುತ್ತಿತ್ತು. ಈಗ ಕೇವಲ 1,000 ಮೆಟ್ರಿಕ್ ಟೊಮೆಟೊ ಪೂರೈಕೆ ಮಾತ್ರ ಆಗುತ್ತಿದೆ. ಟೊಮ್ಯಾಟೋ ರೈತರೇ ಹೆಚ್ಚಾಗಿರುವ ಕೋಲಾರದಲ್ಲಿಯೇ ಈ ಪರಿ ಬೆಳೆ ಕಡಿಮೆಯಾದರೆ, ರೇಟ್ ಡಬಲ್..ತ್ರಿಬಲ್.. ಅಲ್ಲ.. ಹತ್ತಿಪ್ಪತ್ತು ಪಟ್ಟು ಏರುವುದು ಸಹಜವೇ.
ಅಂದಹಾಗೆ ಗುಪ್ತಾ ಬ್ರದರ್ಸ್`ಗೆ ಟೊಮ್ಯಾಟೋ (Tomato) ಲಕ್ಕಿ ಬೆಳೆ. ಎರಡು ವರ್ಷಗಳ ಹಿಂದೆ ಕೂಡ ಗುಪ್ತಾ ಕುಟುಂಬಕ್ಕೆ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಆಗ 15 ಕೆಜಿ ಟೊಮೆಟೊ ಬಾಕ್ಸ್ಗೆ 800 ರೂ.ನಂತೆ ಕುಟುಂಬವು ಮಾರಾಟ ಮಾಡಿತ್ತಂತೆ. ಅಂದಹಾಗೆ ಕೋಲಾರ ಸೇರಿದಂತೆ ಟೊಮ್ಯಾಟೋ ಬೆಳೆಯುವ ಪ್ರದೇಶಗಳಲ್ಲಿ ರೈತರು ಟೊಮ್ಯಾಟೋಗೆ ರಾತ್ರಿಯೆಲ್ಲ ಕಾವಲು ಹಾಕುತ್ತಿದ್ದಾರಂತೆ.
ಕೋಲಾರ ಎಪಿಎಂಸಿಯಲ್ಲಿ (APMC) ಸದ್ಯ ಮೂರು ವಿಧದ ಟೊಮ್ಯಾಟೋ ಸದ್ಯ ಬರುತ್ತಿದೆ, ನಾಟಿ, ಸೀಡ್ಸ್, ಹಾಗೂ ಗೋಲಿ ಟೊಮ್ಯಾಟೋ ಇದೆ. ನಾಟಿ ಟೊಮ್ಯಾಟೋ ಬಾಕ್ಸ್ಗೆ 1750 ರೂಪಾಯಿಗೆ ಹರಾಜಾಗಿದ್ದರೆ, ಸೀಡ್ಸ್ ಟೊಮ್ಯಾಟೋ 1800 ರಿಂದ 1850 ರೂಪಾಯಿಗೆ ಹರಾಜಾಗಿದೆ. ಇನ್ನು ಗೋಲಿ ಟೊಮ್ಯಾಟೋ ಕೂಡಾ 1000 ರೂಪಾಯಿ ಗಡಿ ದಾಟಿದೆ. ಇನ್ನು ಸೀಡ್ಸ್ ಹಾಗೂ ನಾಟಿ ಟೊಮ್ಯಾಟೋ ಒಂದು ಕೆಜಿಗೆ ಹತ್ತು ಅಥವಾ ಅನ್ನೊಂದು ಟೊಮ್ಯಾಟೋ (Red Gold) ಬರುತ್ತದೆ ಒಂದು ಕೆಜಿ ಟೊಮ್ಯಾಟೋಗೆ 130 ರೂಪಾಯಿ ಇದೆ.
ಅಂದರೆ ಒಂದು ಟೊಮ್ಯಾಟೋಗೆ 13 ರಿಂದ 14 ರೂಪಾಯಿ ಬೆಲೆ ಇದೆ. ಹಾಗಾಗಿ ಚಿನ್ನದ ನಾಡು ಕೋಲಾರದಲ್ಲಿ ಟೊಮ್ಯಾಟೋಗೆ ಚಿನ್ನದ ಬೆಲೆಯೇ ಬಂದಿದೆ. ಕೆಂಪು ಸುಂದರಿ ಕಿಚನ್ ಕ್ವೀನ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುವ ಸಾಧ್ಯತೆ ಕೂಡಾ ಹೆಚ್ಚಾಗಿದೆ.



