ಇತ್ತೀಚೆಗೆ ಹಲವು ಸಿನಿಮಾಗಳು ಬಿಡುಗಡೆಯಾದ ಒಂದು ತಿಂಗಳಿಗೆ ಸರಿಯಾಗಿ OTTಗೆ ಬರುತ್ತಿವೆ. ಕಾಂತಾರ-01, ಮ್ಯಾಕ್ಸ್, 45.. ಹೀಗೆ ಬಹುತೇಕ ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಒಂದು ತಿಂಗಳಿಗೆ ಸರಿಯಾಗಿ ಲಗ್ಗೆ ಇಡುತ್ತಿವೆ. ತಮಿಳು, ತೆಲುಗಿನಲ್ಲೂ ಅಷ್ಟೇ. ಇದೀಗ ಟಾಲಿವುಡ್ ಈ ಸಂಪ್ರದಾಯಕ್ಕೆ ಕೊನೆ ಹಾಡಲು ಮುಂದಾಗಿದೆ.
ಪೈರಸಿ, ಸಿನಿಮಾಗಳನ್ನು ಪರೋಕ್ಷವಾಗಿ ಕಾಡಿದರೆ ಒಟಿಟಿಗಳು ಪ್ರೇಕ್ಷಕರನ್ನು ಚಿತ್ರಮಂದಿರದಿಂದಲೇ ದೂರ ಇಡುತ್ತಿವೆ ಎನ್ನುವ ವಾದ ಹೊಸದೇನಲ್ಲ. ತಿಂಗಳಿಗೆ ಮುಂಚೆಯೇ ಒಟಿಟಿಗೆ ಬರುವ ಮೂಲಕ ಚಿತ್ರಮಂದಿರಗಳ ಮಾಲೀಕರು, ವಿತರಕರು ನಷ್ಟ ಹೊಂದುತ್ತಿರುವುದೂ ಹೊಸದಲ್ಲ. ಇದನ್ನು ಗಮನಿಸಿದ ತೆಲುಗು ಫಿಲ್ಮ್ ಚೇಂಬರ್ ಇನ್ನು ಮುಂದೆ ನಿರ್ಮಾಣ ಆಗುವ ಯಾವುದೇ ತೆಲುಗು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂಬ ನಿರ್ಣಯ ತೆಗೆದುಕೊಂಡಿದೆ. ತೆಲುಗು ಸಿನಿಮಾ ಚೇಂಬರ್, ನಿರ್ಮಾಪಕರ ಸಂಘದ ಸುಮಾರು 40 ಮಂದಿ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಒಟ್ಟಿಗೇ ಸಭೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಣಯದ ಪ್ರಕಾರ ಇನ್ನು ಮುಂದೆ ನಿರ್ಮಾಣ ಆಗುವ ತೆಲುಗು ಸಿನಿಮಾಗಳು ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಆಗುತ್ತವೆ.
ಇದು ಈಗಾಗಲೇ ಚಿತ್ರದ ಚಿತ್ರೀಕರಣ ಮಾಡುತ್ತಿರುವ ಚಿತ್ರಗಳಿಗೆ, ಈಗಾಗಲೇ ಒಪ್ಪಂದವಾಗಿರುವ ಚಿತ್ರಗಳಿಗೆ ಅನ್ವಯವಾಗುವುದಿಲ್ಲ. ಬಾಲಿವುಡ್ನಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಮಲಯಾಳಂ ಚಿತ್ರರಂಗದಲ್ಲಿ ಆರು ವಾರಗಳ ನಿರ್ಬಂಧ ಜಾರಿಯಲ್ಲಿದೆ. ತಮಿಳುನಾಡಿನಲ್ಲಿ ನಾಲ್ಕು ವಾರಗಳ ನಿಯಮ ಇದೆಯಾದರೂ, 4 ವಾರಗಳಿಗೂ ಸಿನಿಮಾ ಬಿಡುಗಡೆಯಾದ ಉದಾಹರಣೆಗಳಿವೆ. ಈಗ ತೆಲುಗಿನಲ್ಲಿ 8 ವಾರ/2 ತಿಂಗಳ ನಿಯಮ ಜಾರಿಯಾಗಿದೆ. ಕನ್ನಡದಲ್ಲಿ ಅಂಥದ್ದೆಲ್ಲ ಏನೂ ಇಲ್ಲ. ಬಹುಶಃ ಇಂಥಾದ್ದೊಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಇಚ್ಚೆಯೂ ಫಿಲಂ ಚೇಂಬರ್‌ಗೆ ಇದ್ದಂತೆ ಕಾಣುತ್ತಿಲ್ಲ.



