ದಾನ ಮಾಡುವುದೇ ಧರ್ಮ ಎಂದು ನಂಬಿದವರಿದ್ದಾರೆ. ನಮ್ಮದು ಬಲಿ ಚಕ್ರವರ್ತಿ, ಕರ್ಣ ಹುಟ್ಟಿದ್ದ ಕರ್ಮಭೂಮಿ. ದಾನ ನೀಡುವುದಕ್ಕೆ ಪ್ರಾಣವನ್ನೇ ಕೊಟ್ಟ ಬಲಿ, ದೇಹದ ರಕ್ಷಾಕವಚವೇ ಆಗಿದ್ದ ಕವಚವನ್ನೇ ದಾನ ಮಾಡಿದ ಕರ್ಣ, ಸತ್ಯಕ್ಕಾಗಿ ರಾಜ್ಯವನ್ನೇ ದಾನ ಮಾಡಿದ ಹರಿಶ್ಚಂದ್ರ.. ಹೀಗೆ ದಾನ ಮಾಡುವುದರಲ್ಲಿಯೇ ಭಿನ್ನ ವಿಭಿನ್ನ ಕಥೆಗಳಿವೆ. ನಿಮಗೆ ಗೊತ್ತಿರಲಿ.. ಪರಮೇಶ್ವರನಿಗೆ ಅಂಟಿದ್ದ ಬ್ರಹ್ಮಕಪಾಲ ಶಾಪವನ್ನು ದೂರ ಮಾಡಿದ್ದು ಲಕ್ಷ್ಮೀದೇವಿ ಮಾಡಿದ ದಾನ. ಇಂತಹ ಕಥೆಗಳಿರುವಾಗ.. ದಾನ ಮಾಡುವುದೇ ಧರ್ಮ ಎನ್ನುವುದು ನಮ್ಮ ನಂಬಿಕೆ.
ಜ್ಯೋತಿಷ್ಯ ಶಾಸ್ತ್ರ, ಧರ್ಮ ಶಾಸ್ತ್ರ.. ಅಷ್ಟೇ ಏಕೆ.. ಕೊನೆಗೆ ಚಾಣಕ್ಯ ನೀತಿಯಲ್ಲಿಯೂ ದಾನ ಧರ್ಮದ ಬಗ್ಗೆ ಒಳ್ಳೆಯ ಮಾತುಗಳೇ ಇವೆ. ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರಿಗೆ ಸಹಾಯ ಮಾಡಬೇಕು. ಅದೇ ಧರ್ಮ ಎಂದು ಹೇಳಲಾಗಿದೆ. ಇದು ಮಾನವೀಯತೆಯ ಭಾವನೆಯಾದರೆ, ಚಾಣಕ್ಯ ನೀತಿಯಲ್ಲಿಯೂ ದಾನವನ್ನು ವಿವರವಾಗಿ ಹೇಳಲಾಗಿದೆ. ದಾನದ ಮಹತ್ವವನ್ನು ವಿವರಿಸಲಾಗಿದೆ. ಚಾಣಕ್ಯ ನೀತಿಯಲ್ಲಿ, ದಾನವನ್ನು ಮಾಡುವುದು ಮಾನವ ಕೈಗಳಿಗೆ ಮಾಡಿಕೊಳ್ಳುವ ಅಲಂಕಾರ ಎಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿ ಯಾರಿಗೆ ದಾನ ಮಾಡಬೇಕು ಮತ್ತು ದಾನ ಮಾಡಬಹುದಾದ ವಸ್ತುಗಳೇನು ಎಂಬುದನ್ನೂ ತಿಳಿಸಲಾಗಿದೆ.
ದಾನ ಮಾಡುವುದುಉ ಅಗತ್ಯ :
ದಾನದ ಮಹತ್ವವನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಕಾರಣವನ್ನೂ ಕೊಡಲಾಗಿದೆ. ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು. ದಾನ ಮಾಡುವುದರಿಂದ ಯಾವುದೇ ಹಣಕಾಸಿನ ಸಮಸ್ಯೆ ಇರುವುದಿಲ್ಲ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ದಾನ ಮಾಡುವಲ್ಲಿ ಜಿಪುಣತನ ತೋರಬಾರದು ಮತ್ತು ನಿಯಮಿತವಾಗಿ ದಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ದಾನ ಮಾಡಬೇಕಾದವರು ಯಾರು? ಯಾರಿಗೆ..?
ಯಾರು ಯಾರಿಗೋ ದಾನ ಮಾಡಬಾರದು. ದುಶ್ಚಟಗಳಿಗೆ ಅಂಟಿಕೊಂಡಿರುವವರಿಗೆ ದಾನ ಕೊಡಲೇಬಾರದು. ದಾನವನ್ನು ಯಾವಾಗಲೂ ನಿರ್ಗತಿಕರಿಗೆ ನೀಡಬೇಕು. ಹಸಿದವರಿಗೆ ದಾನ ನೀಡುವುದು ಪರಮಪವಿತ್ರ. ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಎಂದಿಗೂ ದಾನ ಮಾಡಬಾರದು.
ಇದರ ಹೊರತಾಗಿ ದಾನ ಮಾಡುವವರೂ ಅಷ್ಟೆ, ದುರಾಸೆ ಅಥವಾ ಸ್ವಾರ್ಥವನ್ನು ಮನಸ್ಸಿನಲ್ಲಿಟ್ಟುಕೊಂಡು ದಾನ ಮಾಡಬಾರದು. ತಮ್ಮ ತಮ್ಮ ಭಕ್ತಿಗೆ ಅನುಗುಣವಾಗಿ ದೇವಸ್ಥಾನದಲ್ಲಿ ಅಥವಾ ವಿವಿಧ ಸೇವಾ ಸಂಸ್ಥೆಗಳಲ್ಲಿ ದಾನವನ್ನು ಮಾಡಬಹುದು.
ಏನನ್ನು ದಾನ ಮಾಡಬೇಕು..? ಯಾವುದನ್ನು ದಾನ ಮಾಡಬಾರದು..?
ದಾನ ಮಾಡುವಾಗ ಯಾವ ದಿನ ಏನನ್ನು ದಾನ ಮಾಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ದಾನ ಮಾಡಬಾರದ ಕೆಲವು ವಸ್ತುಗಳಿವೆ. ಸ್ಟೀಲ್ ವಸ್ತುಗಳನ್ನು ಎಂದಿಗೂ ದಾನ ಮಾಡಬಾರದು. ಇದು ಸಂತೋಷ ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಅಪಶ್ರುತಿಯನ್ನು ಸೃಷ್ಟಿಸುತ್ತದೆ.
ನೀವು ಹಸುವನ್ನು ದಾನ ಮಾಡಬಹುದು, ತುಪ್ಪವನ್ನು ದಾನ ಮಾಡಬಹುದು, ಬಟ್ಟೆ, ಎಳ್ಳು ಮತ್ತು ಬೆಲ್ಲವನ್ನು ದಾನ ಮಾಡಬಹುದು. ಧಾನ್ಯಗಳನ್ನೂ ದಾನ ಮಾಡಬಹುದು. ಈ ವಸ್ತುಗಳನ್ನು ದಾನಕ್ಕೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗಿದೆ.



