ವಕ್ಫ್ ಆಸ್ತಿಯ ವಿಚಾರವಾಗಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಮೊದಲಿನಿಂದಲೂ ಪ್ರಶ್ನೆ ಎತ್ತುತ್ತಲೇ ಇವೆ. ಹಿಂದೂ ಸಂಘಟನೆಗಳಷ್ಟೇ ಅಲ್ಲ, ಹಲವು ಮುಸ್ಲಿಂ ಧಾರ್ಮಿಕ ನಾಯಕರೂ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ನೇರವಾಗಿ ವಕ್ಫ್ ಮಂಡಳಿಗೆ ಮೂಗುದಾರ ಹಾಕಲು ಮುಂದಾಗಿದೆ. ವಕ್ಫ್ ಮಂಡಳಿಯ ಸ್ವಾಯತ್ತತೆಗೆ ಕಡಿವಾಣ ಹಾಕಿ ವಕ್ಫ್ ನ ಎಲ್ಲ ಘೋಷಿತ ಆಸ್ತಿಗಳ ನೇಲೆ ನಿಯಂತ್ರಣ ಸಾಧಿಸಲು ಚಿಂತನೆ ನಡೆಸಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಲಿಂಗ ವೈವಿಧ್ಯತೆ ತರುವ ನಿಟ್ಟಿನಲ್ಲಿ 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಇಂಥದ್ದೊಂದು ತಿದ್ದುಪಡಿ ಮೂಲಕ, ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರ ನಿರ್ಬಂಧಿಸಲೂ ನಿರ್ಧರಿಸಿದೆ.
ಎಷ್ಟಿದೆ ವಕ್ಫ್ ಆಸ್ತಿ ಮತ್ತು ಅದರ ಮೌಲ್ಯ..?
ಭಾರತ ದೇಶಾದ್ಯಂತ ಒಟ್ಟು 8 ಲಕ್ಷದ 70 ಸಾವಿರ ವಕ್ಫ್ ಆಸ್ತಿ ಇದೆ. ಸುಮಾರು 9.40 ಲಕ್ಷ ಎಕರೆ ಪ್ರದೇಶದಲ್ಲಿ ದೇಶಾದ್ಯಂತ ವಕ್ಫ್ ಆಸ್ತಿ ಇದೆ. ಈ ಆಸ್ತಿಗಳ ಮೌಲ್ಯ ಹಲವು ಲಕ್ಷ ಕೋಟಿ ರೂ. ಆಗಬಹುದು. ಆಸ್ತಿಗಳು ಇರುವ ಸ್ಥಳ, ಆ ಸ್ಥಳದ ಮಾರುಕಟ್ಟೆ ಮೌಲ್ಯ ಆಧರಿಸಿ ದೇಶಾದ್ಯಂತ ಇರುವ ವಕ್ಫ್ ಆಸ್ತಿಗಳ ಒಟ್ಟು ಮೌಲ್ಯ ನಿರ್ಧರಿಸಬೇಕಾಗಿದ್ದು, ಅವುಗಳು ಬಹುತೇಕ ಮಾರುಕಟ್ಟೆ ವ್ಯಾಲ್ಯೂ ಇರುವ ಪ್ರದೇಶಗಳಲ್ಲಿಯೇ ಇವೆ. ಇವುಗಳಿಂದ ಒಟ್ಟಾರೆ 200 ಕೋಟಿ ರೂ.ಗಿಂತ ಹೆಚ್ಚು ಆದಾಯ ಬರುತ್ತಿದೆ ಎನ್ನಲಾಗುತ್ತಿದೆ. ಆದರೆ, ವಿಶೇಷವೇನು ಗೊತ್ತೇ, ಭಾರತೀಯ ರೈಲ್ವೆ ಮತ್ತು ರಕ್ಷಣಾ ಇಲಾಖೆಯ ನಂತರದ ಅತೀ ಹೆಚ್ಚು ಭೂಮಿ ಇರುವ ೩ನೇ ಸಂಸ್ಥೆಯೇ ವಕ್ಫ್. ಹೀಗಿದ್ದರೂ.. ಕೇವಲ 200 ಕೋಟಿಯ ಆಸುಪಾಸು ಲೆಕ್ಕ ಸಿಗುತ್ತಿದೆ. ಇಷ್ಟೇನಾ ಎಂದು ಕೇಳುವ ಅಧಿಕಾರವೂ ಕಾಯ್ದೆ ಪ್ರಕಾರ ಸರ್ಕಾರಕ್ಕೆ ಇಲ್ಲ. ಟ್ಯಾಕ್ಸ್ ಕೂಡಾ ಇಲ್ಲ. ಅಂದರೆ ಅವರು ಯಾರಿಗೂ ಲೆಕ್ಕ ಕೊಡಬೇಕಿಲ್ಲ. ಇದು ಮೂಲ ವಿವಾದ.
ಕಾಯ್ದೆ ಏನು ಹೇಳುತ್ತದೆ..?
1995ರಲ್ಲಿ ಜಾರಿಗೆ ಬಂದ ವಕ್ಫ್ ಕಾಯಿದೆಯಲ್ಲಿ ಮುಸ್ಲಿಂ ಕಾನೂನನ್ನು ಅನ್ವಯ ಮಾಡಲಾಗಿದೆ. ಕಾನೂನಿನ ಅನ್ವಯ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ದಾನ ಮಾಡಿದ ಆಸ್ತಿ ವಕ್ಫ್ ಆಸ್ತಿಯಾಗುತ್ತದೆ. ಈ ಆಸ್ತಿ ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಬರುತ್ತದೆ. ಜೊತೆಯಲ್ಲೇ ವಕ್ಫ್ ಮಂಡಳಿ ಯಾವುದೇ ಆಸ್ತಿಯನ್ನು ʻಇದು ತನ್ನ ಆಸ್ತಿʼ ಎಂದು ಘೋಷಿಸಿ ವಶಕ್ಕೆ ಪಡೆಯುವ ಪರಮಾಧಿಕಾರವನ್ನೂ ಹೊಂದಿದೆ. 2013ರಲ್ಲಿ ಈ ಕಾಯ್ದೆಗೆ ಅಲ್ಪ ಬದಲಾವಣೆ ತಂದಿದ್ದ ಯುಪಿಎ ಸರ್ಕಾರ, ಭಾರತೀಯ ಪುರಾತತ್ವ ಇಲಾಖೆ, ಭಾರತೀಯ ವಕ್ಫ್ ಹಾಗೂ ರಾಜ್ಯ ವಕ್ಫ್ ಘಟಕಗಳಿಗೆ ಅಧಿಕಾರ ಹಂಚಿಕೆ ಮಾಡುವ ಕಾನೂನು ತಂದಿತ್ತು. ಇಂದಿಗೂ ಎಲ್ಲಾ ಆಸ್ತಿಗಳೂ ವಕ್ಫ್ ಅಧೀನದಲ್ಲೇ ಇವೆ.
ವಿವಾದ ಬೆಳಕಿಗೆ ಬಂದಿದ್ದು ಹೇಗೆ..?
ಹಿಂದೂಗಳೇ ಬಹುಸಂಖ್ಯಾತರಾಗಿದ್ದ ತಮಿಳುನಾಡಿನ ತಿರುಚೆಂದೂರೈ ಎಂಬ ಹಳ್ಳಿಯನ್ನೇ ವಕ್ಫ್ ಬೋರ್ಡ್ ತನ್ನದು ಎಂದು ಹೇಳಿಕೊಂಡಿತ್ತು. ಸೆಪ್ಟೆಂಬರ್ 2022ರಲ್ಲಿ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ವಿವಾದದ ಅಲೆ ಎಬ್ಬಿಸಿತ್ತು. ಹೀಗಾಗಿ ವಕ್ಫ್ ಮಂಡಳಿಯನ್ನು ಪ್ರಶ್ನೆ ಮಾಡುತ್ತಿದ್ದವರಿಗೆ ಶಕ್ತಿ ಕೊಟ್ಟಿದ್ದರೆ, ಸಮರ್ಥನೆ ಮಾಡಿಕೊಳ್ಳುತ್ತಿದ್ದವರಿಗೆ ತಲೆ ತಗ್ಗಿಸುವಂತೆ ಮಾಡಿತ್ತು. 2023ರ ಮೇ ತಿಂಗಳಲ್ಲಿ ದಿಲ್ಲಿ ವಕ್ಫ್ ಬೋರ್ಡ್ ಕೂಡಾ ಸುದ್ದಿಯಲ್ಲಿ ಇತ್ತು. ಮಂಡಳಿಯ ಸ್ವಾಧೀನದಲ್ಲಿ ಇರುವ 123 ಆಸ್ತಿಗಳನ್ನ ಪರಿಶೀಲನೆ ಮಾಡಿ ಎಂದು ದಿಲ್ಲಿ ಹೈಕೋರ್ಟ್ ತಾಕೀತು ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ 2024ರ ಲೋಕಸಭಾ ಚುನಾವಣೆಗೆ ಮುನ್ನವೇ ವಕ್ಫ್ ಮಂಡಳಿಗೆ ಮೂಗುದಾರ ಹಾಕುವ ಹೊಸ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿತ್ತು. ಆದರೆ ಈ ಪ್ರಸ್ತಾಪ ಮುಂದುವರೆಯಲಿಲ್ಲ. ಇದೀಗ ಮಹಾರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಹೊತ್ತಲ್ಲಿ ವಕ್ಫ್ ಕಾಯ್ದೆಗೆ ತಿದ್ದಪಡಿ ತರುವ ಪ್ರಸ್ತಾಪ ಸದ್ದು ಮಾಡುತ್ತಿದೆ.
ವಕ್ಫ್ ಕಾಯ್ದೆಯಲ್ಲಿ ಏನೇನೆಲ್ಲ ಬದಲಾವಣೆ..?
ವಕ್ಫ್ ಬೋರ್ಡ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಇಲ್ಲವೇ ಇಲ್ಲ. ಮುಸ್ಲಿಮರ ಉಪ ಪಂಗಡಗಳಾದ ಶಿಯಾ, ಬೋಹ್ರಾ ಸೇರಿದಂತೆ ಹಲವರು ವಕ್ಫ್ ಕಾನೂನಿಗೆ ವಿರೋಧಿಸುತ್ತಿದ್ದಾರೆ. ಇಸ್ಲಾಂ ಧರ್ಮ ಉದಯಿಸಿದ ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲೇ ಇಲ್ಲದ ಕಾನೂನು ಭಾರತದಲ್ಲಿ ಇದೆ ಎಂದು ಕೆಲವರು ಪ್ರಶ್ನೆ ಮಾಡ್ತಿದ್ದಾರೆ.
ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯೋದು ಕೇಂದ್ರ ಸರ್ಕಾರದ ಹೊಸ ಕಾನೂನಿನ ಉದ್ದೇಶ. ವಕ್ಫ್ ಆಸ್ತಿಗಳ ಅಧಿಕಾರವನ್ನು ಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡುವ ಸಾಧ್ಯತೆಯೂ ಇದೆ. ಮೊದಲ ಹಂತದಲ್ಲಿ ಸರ್ಕಾರ ವಕ್ಫ್ ಬೋರ್ಡ್‌ನ ಎಲ್ಲಾ ಆಸ್ತಿಗಳ ಪರಿಶೀಲನೆ ಮಾಡಲಿದೆ ಬಳಿಕ ವಕ್ಫ್ ಬೋರ್ಡ್‌ನ ಎಲ್ಲಾ ಪರಮಾಧಿಕಾರಗಳ ಮೇಲೆ ನಿಯಂತ್ರಣ ಸಾಧಿಸಲಿದೆ. ಜೊತೆಯಲ್ಲೇ ವಕ್ಫ್ ಆಸ್ತಿ ಕುರಿತಾಗಿ ಇರುವ ವ್ಯಾಜ್ಯಗಳ ಪರಿಶೀಲನೆ ಕೂಡಾ ನಡೆಯಲಿದೆ.
ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಿದ್ದತೆ ನಡೆಸಿದೆ ಎನ್ನಲಾಗಿದೆ. ಸದ್ಯ ಇರುವ ವಕ್ಫ್ ಕಾಯಿದೆಗೆ 40ಕ್ಕೂ ಹೆಚ್ಚು ತಿದ್ದುಪಡಿಗಳನ್ನು ತರಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಈ ಮೂಲಕ ವಕ್ಫ್ ಮಂಡಳಿಯ ಸ್ವಾಯತ್ತತೆಗೆ ಕಡಿವಾಣ ಹಾಕಿ ವಕ್ಫ್ ಬೋರ್ಡ್‌ನ ಎಲ್ಲಾ ಆಸ್ತಿಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಬಹುದಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿದ್ದುಪಡಿ ಕಾಯ್ದೆಯ ಪರಾಮರ್ಶೆ ನಡೆಸಲಿದೆ.
ವಕ್ಫ್ ಆಸ್ತಿಗಳ ನಿರ್ವಹಣೆಗೆ ಮುತವಲ್ಲಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲೂ ವಕ್ಫ್ ಮಂಡಳಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳೋದನ್ನ ತಡೆಯುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎನ್ನಲಾಗಿದೆ. ದೇಶಾದ್ಯಂತ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 30 ವಕ್ಫ್ ಮಂಡಳಿಗಳು ಇವೆ.
ವಕ್ಫ್ ಬೋರ್ಡ್ ನಿರ್ಧಾರಗಳನ್ನು ಸ್ವತಃ ಹೈಕೋರ್ಟ್‌ಗಳ ಕೂಡಾ ಪ್ರಶ್ನಿಸುವಂತಿಲ್ಲ ಎಂಬ ಮಂಡಳಿ ಆಕ್ಷೇಪಕ್ಕೆ ಹಲವು ಹೈಕೋರ್ಟ್‌ಗಳ ಮುಸ್ಲಿಂ ಜಡ್ಜ್‌ಗಳ ಆಕ್ಷೇಪ, ತಿದ್ದುಪಡಿಗೆ ಮುಸ್ಲಿಂ ಸಮುದಾಯದಿಂದಲೇ ಕೇಳಿಬಂದ ಒತ್ತಾಯ, ಸಾಚಾರ್ ಸಮಿತಿಯ ಶಿಫಾರಸು ಮತ್ತು ಕೆ.ರೆಹಮಾನ್ ಖಾನ್ ನೇತೃತ್ವದ ಸಂಸದೀಯ ಸಮಿತಿಯ ಶಿಫಾರಸು ಆಧರಿಸಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ, ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದರೆ ವಕ್ಫ್ ಮಂಡಳಿಗೆ ಸರ್ಕಾರದ ದೃಢೀಕರಣ (ವೆರಿಫಿಕೇಶನ್) ಕಡ್ಡಾಯವಾಗಲಿದೆ.



