ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬು, ಮೀನಿನ ಎಣ್ಣೆಯ ಕೊಬ್ಬುಗಳನ್ನೂ ಬಳಸಿ ತಯಾರಿಸಲಾಗುತ್ತಿತ್ತು. ಜಗನ್ ರೆಡ್ಡಿ ನೇತೃತ್ವದ ಸರ್ಕಾರವೇ ಕೆಜಿಗೆ 20 ರೂ. ಕಡಿಮೆ ಸಿಗುತ್ತದೆ ಎಂಬ ಆಸೆಗೋ.. ಮತ್ತೇನು ಕಾರಣಕ್ಕೋ.. ತಿಮ್ಮಪ್ಪನ ಲಡ್ಡು ತಯಾರಿಕೆಗೆ ಕರ್ನಾಟಕದಿಂದ ಹೋಗುತ್ತಿದ್ದ ನಂದಿನಿ ತುಪ್ಪದ ಸರಬರಾಜು ನಿಲ್ಲಿಸಿತ್ತು. ಅದೇ ಹೊತ್ತಿನಲ್ಲಿ ತಿಮ್ಮಪ್ಪನ ಲಡ್ಡುಗೆ ಪ್ರಾಣಿಜನ್ಯ ಕೊಬ್ಬಿನ ಅಂಶವೂ ಸೇರ್ಪಡೆಯಾಗಿತ್ತು. ಯಾವಾಗ ನಂದಿನಿ ತುಪ್ಪವನ್ನು ಲಡ್ಡು ತಯಾರಿಕೆಯಿಂದ ಹೊರಗಿಟ್ಟರೋ.. ಅಲ್ಲಿಂದಲೇ ಲಡ್ಡುವಿಗೆ ಇದ್ದ ರುಚಿ, ಸ್ವಾದವೆಲ್ಲ ಹೋಗಿ.. ಖ್ಯಾತಿಗೂ ಮಣ್ಣು ಬಿತ್ತು.
ಲಡ್ಡುವಿನ ಟೇಸ್ಟ್ ಮೊದಲಿನಂತೆ ಇಲ್ಲ ಎಂದು ಹಲವು ಭಕ್ತರಿಗೆ ಅನಿಸುತ್ತಾದರೂ.. ತಿರುಪತಿ ತಿಮ್ಮಪ್ಪನ ಪ್ರಸಾದ ಎಂಬ ಕಾರಣಕ್ಕೆ ಭಕ್ತರು ಮಾತನಾಡುತ್ತಿರಲಿಲ್ಲ. ಒಂದು ವಿಷಯ ಸ್ಪಷ್ಟ. ಇದು ಸಸ್ಯಾಹಾರಿಗಳಿಗಳಿಗಷ್ಟೇ ಅಲ್ಲ, ಮಾಂಸಾಹಾರಿಗಳಿಗೂ ಮಾಡಿರುವ ಅವಮಾನ. ಎಷ್ಟೋ ಜನ ಮಾಂಸಾಹಾರಿ ಹಿಂದೂಗಳೂ ಕೂಡಾ ನೂರಕ್ಕೆ 80% ಮಾಂಸಾಹಾರಿಗಳು ಕೂಡಾ ದನದ ಮಾಂಸ ತಿನ್ನೋದಿಲ್ಲ. ಇನ್ನು ಕೊಡಗು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗದ ಘಟ್ಟ ಪ್ರದೇಶಗಳು.. ಮೊದಲಾದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕ ಕಡೆಗಳಲ್ಲಿ ಹಂದಿ ಮಾಂಸ ಬಳಸಲ್ಲ. ಅಂತಾದ್ದರಲ್ಲಿ ತಿರುಪತಿ ಲಡ್ಡುಗೆ ದನ, ಹಂದಿ ಮಾಂಸದ ಕೊಬ್ಬು ಬಳಸಿ ಅಪಚಾರ ಎಸಗಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿಯೇ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಸೇರಿದಂತೆ ಪ್ರಾಣಿಗಳ ಕೊಬ್ಬಿನ ಅಂಶಗಳು ಪತ್ತೆಯಾಗಿವೆ ಎಂದು ಲ್ಯಾಬ್ ವರದಿಯೂ ಲಭ್ಯವಾಗಿದೆ. ಗುಜರಾತ್‌ನ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಲ್ಲಿರುವ ಜಾನುವಾರು ಮತ್ತು ಆಹಾರ ವಿಶ್ಲೇಷಣೆ ಹಾಗೂ ಕಲಿಕೆ ಕೇಂದ್ರ (ಸಿಎಎಲ್‌ಎಫ್) ಆಂಧ್ರ ಪ್ರದೇಶ ಸರ್ಕಾರಕ್ಕೆ ಈ ವರದಿ ಸಲ್ಲಿಸಿದೆ. ತುಪ್ಪದಲ್ಲಿ ಮೀನಿನ ತೈಲ, ಗೋಮಾಂಸದ ಕೊಬ್ಬು ಹಾಗೂ ಹಂದಿಗಳ ಕೊಬ್ಬಿನ ಅಂಗಾಂಶದಿಂದ ಪಡೆದುಕೊಂಡ ಸೆಮಿ ಸಾಲಿಡ್ ಬಿಳಿ ಕೊಬ್ಬಿನ ಉತ್ಪನ್ನವಾದ ಚೆರಬಿ ಇದ್ದದನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಸೋಯಾಬೀನ್, ಸೂರ್ಯಕಾಂತಿ, ಆಲೀವ್, ರೇಪ್ ಸೀಡ್, ನಾರಗಸೆ, ಗೋಧಿ ನುಚ್ಚು, ಜೋಳದ ನುಚ್ಚು, ಹತ್ತಿ ಬೀಜ, ಮೀನಿನ ತೈಲ, ತೆಂಗು ಮತ್ತು ಪಾಮ್ ಕೆರ್ನೆಲ್ ಕೊಬ್ಬು, ಪಾಮ್ ಆಯಿಲ್, ಬೀಫ್ ಕೊಬ್ಬು ಮತ್ತು ಹಂದಿ ಕೊಬ್ಬಿನಂತಹ ಸಾಕಷ್ಟು ಪ್ರಮಾಣದ ವಿದೇಶಿ ಕೊಬ್ಬುಗಳನ್ನು ಒಳಗೊಂಡಿದೆ ಎಂದು ವರದಿ ಹೇಳಿದೆ.
ಹಾಗಾದರೆ ಈಗ ತಿರುಪತಿ ಲಡ್ಡು ಸೇಫ್ ಆಗಿದೆಯಾ..?
ಹೌದು. ಈಗ ತಿರುಪತಿ ಲಡ್ಡು ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪವೇ ಸರಬರಾಜಾಗುತ್ತಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಮಾಹಿತಿ ನೀಡಿದ್ದುಮ್ಮಿಂದ ಕಳೆದ 4 ವರ್ಷಗಳಿಂದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆಯಾಗಿಲ್ಲ. ಇತ್ತೀಚಿನ ಕೆಲ ದಿನಗಳಿಂದ ನಾವು ತುಪ್ಪ ಸರಬರಾಜು ಮಾಡುತ್ತಿದ್ದೇವೆ . ತಿರುಪತಿ ತಿಮ್ಮಪ್ಪ ದೇವಸ್ಥಾನ (ಟಿಟಿಡಿ) ಸಮಿತಿಯವರು ನಮ್ಮ ರಾಜ್ಯದ ನಂದಿನಿ ತುಪ್ಪದ ಪೂರೈಕೆಯನ್ನೇ ಸ್ಥಗಿತಗೊಳಿಸಿದ್ದರು ಎಂದು ಹೇಳಿದ್ಧಾರೆ.
ನಮ್ಮ ನಂದಿನಿ ತುಪ್ಪಕ್ಕೆ ಅದರದೇ ಆದ ಶ್ರೇಷ್ಟತೆ ಹಾಗೂ ಮನ್ನಣೆಯಿದೆ. ಅವರು ಆರೋಪಿಸಿರುವುದು ನಮ್ಮ ಕೆಎಂಎಫ್ ನಿಂದ ಪೂರೈಕೆಯಾಗೋ ನಂದಿನಿ ತುಪ್ಪವನ್ನಲ್ಲ. ಈವರೆಗೂ 3.50 ಲಕ್ಷ ಕೆಜಿ ತೂಕ ಪೂರೈಕೆ ಮಾಡಿದ್ದೇವೆ. ನಂದಿನಿ ತುಪ್ಪದ ಬಗ್ಗೆ ಟಿಟಿಡಿ ಆಡಳಿತಕ್ಕೆ ತೃಪ್ತಿ ಇದೆ ಎಂದಿದ್ದಾರೆ.
ನಂದಿನಿ ತುಪ್ಪ ಎಂದರೆ ಅದರ ಮೇಲೆ ಇರುವ ನಂಬಿಕೆಯೇ ದೊಡ್ಡದು. ಆ ನಂಬಿಕೆಗೆ ನಂದಿನಿ ಅಂದರೆ ನಮ್ಮ ಕೆಎಂಎಫ್ ಯಾವತ್ತೂ ದ್ರೋಹ ಮಾಡಿಲ್ಲ. ಹೀಗಾಗಿ ಇನ್ನು ಮುಂದೆ ತಿರುಪತಿ ಲಡ್ಡು ಪ್ರಸಾದವನ್ನು ಅದೇ ಭಕ್ತಿಯೊಂದಿಗೆ ತಿನ್ನಬಹುದು. ಭಯ ಬೇಡ.



