ತಿರುಪತಿ ತಿರುಮಲ ಏಡುಕೊಂಡಲವಾಡ ಈಗ ಇಡೀ ದೇಶದಲ್ಲಿ ಚರ್ಚೆಯ ವಿಷಯವೇ ಆಗಿದೆ. ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ಪುಣ್ಯಕ್ಷೇತ್ರ ತಿರುಮಲ. ಅಂತಹ ಪುಣ್ಯಕ್ಷೇತ್ರಕ್ಕೀಗ ಕಳಂಕ ಅಂಟಿಕೊಂಡಿದೆ. ಭಕ್ತಿಯಿಂದ ಬರುವ ಭಕ್ತರು, ಪ್ರಸಾದ ರೂಪದಲ್ಲಿ ಸೇವಿಸುವ ಲಡ್ಡು ಪ್ರಸಾದದಲ್ಲಿ ದನ, ಹಂದಿ, ಮೀನೆಣ್ಣೆ ಸೇರಿದಂತೆ ಹಲವು ಪ್ರಾಣಿಗಳ ಕೊಬ್ಬು ಬಳಸಿರುವುದು ಈಗ ದೃಢಪಟ್ಟಿದೆ.
ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿ ಇದ್ದಾಗ ನಡೆದಿರುವ ಪ್ರಮಾದ ಇದು. ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರ ಮೂಲಕ ಬೆಳಕಿಗೆ ಬಂದು, ಲ್ಯಾಬ್ ರಿಪೋರ್ಟ್ ಕೂಡಾ ಸಿಕ್ಕಿ, ಟಿಟಿಡಿಯವರೂ ಇದನ್ನು ಒಪ್ಪಿಕೊಂಡಿದ್ದಾರೆ. ರಾಜಕೀಯ ವಾಕ್ ಸಮರಕ್ಕೆ ಇದೀಗ ಪ್ರಕಾಶ್ ರಾಜ್ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡಿದ್ದರೆ, ಅದನ್ನು ಪ್ರಶ್ನೆ ಮಾಡುವ ಮೂಲಕ ಪ್ರಕಾಶ್ ರಾಜ್ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿ, ಗುಂಟೂರಿನ ವೆಂಕಟೇಶ್ವರ ದೇವಾಲಯದಲ್ಲಿ ದೀಕ್ಷಾ ವ್ರತವನ್ನೂ ಆರಂಭಿಸಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನ ಕೈಬಿಡಲಿದ್ದಾರೆ. ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಟ ಪ್ರಕಾಶ್ ರಾಜ್ ಲೇವಡಿಯನ್ನೂ ಮಾಡಿದ್ದಾರೆ.
ದೇಶದಲ್ಲಿ ನೂರಾರು ಸಮಸ್ಯೆಗಳಿವೆ. ತಪ್ಪಿತಸ್ಥರನ್ನು ಶಿಕ್ಷಿಸಿ. ಹೀಗೆಲ್ಲ ಮಾಡುವ ಮೂಲಕ ಸಾಮರಸ್ಯಕ್ಕೆ ಬೆಂಕಿ ಹಚ್ಚಬೇಡಿ ಎಂದಿದ್ದಾರೆ ಪ್ರಕಾಶ್ ರಾಜ್. ಇತ್ತ ಪವನ್ ಕಲ್ಯಾಣ್ ‘ತಿರುಪತಿ ಲಡ್ಡು ಅಂದರೆ, ಅಮೃತ ಸಮಾನ. ಹಿಂದಿನ ಪಾಲಕರ ವಿಕೃತ ಚೇಷ್ಠೆಗಳ ಫಲವಾಗಿ ಅಪವಿತ್ರವಾಗಿದೆ. ಮಲಿನವಾಗಿದೆ. ಮನುಷ್ಯತ್ವವನ್ನು ಕಳೆದುಕೊಂಡವರು ಮಾತ್ರ ಇಂತ ಪಾಪ ಕಾರ್ಯವನ್ನು ಮಾಡಬಲ್ಲರು. ಈ ಪಾಪವನ್ನು ಮೊದಲೇ ಕಂಡು ಹಿಡಿಯಲಾಗಲಿಲ್ಲ. ಅದು ನಮ್ಮ ದುರಾದೃಷ್ಟ. ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಅವಶೇಷಗಳಿವೆ ಎಂದು ಗೊತ್ತಾದಾಗ, ಮೊದಲೇ ಕಂಡುಹಿಡಿಯಲು ಆಗಲಿಲ್ಲ ಎಂಬ ಪರಿಸ್ಥಿತಿಯನ್ನು ನೆನಪಿಸಿಕೊಂಡೇ ಬೇಸರವಾಯಿತು. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕು. ಅದೇ ಕಾರಣಕ್ಕೆ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪವನ್ನು ಕೈಗೊಂಡಿದ್ದೇನೆ. “ಓ ದೇವಾಧಿ ದೇವಾ… ಹಿಂದಿನ ಪಾಲಕರು ಮಾಡಿದ ಪಾಪಗಳನ್ನು ಶುದ್ಧೀಕರಿಸುವ ಶಕ್ತಿಯನ್ನು ಪ್ರಸಾದಿಸು ತಂದೇ” ಅಂತ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಪವನ್ ಕಲ್ಯಾಣ್.
ಆದರೆ ಪ್ರಕಾಶ್ ರಾಜ್ ವಿವಾದಕ್ಕೆ ಎಂಟ್ರಿಯಾಗಿದ್ದೇ ತಡ, ತಿರುಪತಿ ತಿಮ್ಮಪ್ಪನ ಭಕ್ತರೇ ಪ್ರಕಾಶ್ ರಾಜ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಜನಸೇನಾ ಪಕ್ಷದ ನಾಯಕರಾಗಿರುವ ಕಿರಣ್ ರಾಯಲ್ ಅವರಂತೂ ಪ್ರಕಾಶ್ ರಾಜ್ ನಾಲಗೆ ಕತ್ತರಿಸುತ್ತೇನೆ ಎಂದಿದ್ದರೆ, ನೀವಂತೂ ನಂಬುವುದಿಲ್ಲ. ನಂಬಿಕೆ ಇರುವವರನ್ನೇಕೆ ಲೇವಡಿ ಮಾಡುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ತಮ್ಮನ್ನು ತಾವು ನಾಸ್ತಿಕ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಪವನ್ ಕಲ್ಯಾಣ್ ಅವರ ವ್ರತಾಚರಣೆಯನ್ನು ಕೋಮುವಾದ ಎಂದು ಟೀಕಿಸಿರುವ ಪ್ರಕಾಶ್ ರಾಜ್ ಅವರಿಗೆ ನಟ ಮಂಚು ವಿಷ್ಣು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರೇ ತಾಳ್ಮೆಯಿಂದ ಇರಿ. ಶಾಂತವಾಗಿರಿ. ಪವನ್ ಕಲ್ಯಾಣ್ ಹಿಂದೂಗಳ ಧಾರ್ಮಿಕ ನಂಬಿಕೆಯ ರಕ್ಷಣೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಇಲ್ಲದ ಕೋಮುವಾದವನ್ನು ಎಲ್ಲಿಂದ ಎಳೆದು ತರುತ್ತೀರಿ. ನೀವು ನಿಮ್ಮ ಇತಿಮಿತಿಯಲ್ಲಿ ಇದ್ದರೆ ಒಳಿತು.. ಎಂದು ಹೇಳಿದ್ದಾರೆ ಮಂಚು ವಿಷ್ಣು.



