ಇತ್ತೀಚೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ʻ ರಾಜ್ಯಕ್ಕೆ ಮಹಾರಾಜರಿಗಿಂತ ನಮ್ಮ ತಂದೆಯೇ ಹೆಚ್ಚು ಕೊಡುಗೆ ನೀಡಿದ್ದಾರೆʼʼ ಎಂದು ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಗೆ ಎಲ್ಲ ಕಡೆಯಿಂದಲೂ ಟೀಕೆ ಬಂದು.. ಹೇಗೋ ತಿಪ್ಪೆ ಸಾರಿಸಿದರು. ಈಗ ಸಚಿವ ಮಹದೇವಪ್ಪನವರ ಸರದಿ. ಸಚಿವ ಹೆಚ್ ಸಿ ಮಹದೇವಪ್ಪನವರ ಪ್ರಕಾರ ʻʻ ಕನ್ನಂಬಾಡಿ ಕಟ್ಟೋದಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ರು. ಆದರೆ, ಈಗ ಅದನ್ನು ಹೇಳೋಕೆ ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು ಎಂದಿದ್ದಾರೆ. ಹಾಗಂತ ಇದು ಧುತ್ತನೆ ಎದ್ದ ವಿವಾದವಲ್ಲ. ಇಂತಾದ್ದೊಂದು ನರೇಷನ್ ಸುಮಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಕೆಎಸ್ ಭಗವಾನ್ ಅನ್ನೋ ಒಬ್ಬ ಪ್ರೊಫೆಸರ್, ಸಚಿವರಾದ ಕೆಎನ್ ರಾಜಣ್ಣ, ಇತಿಹಾಸ ತಜ್ಞ ಕರೀಮುದ್ದೀನ್.. ಅಂತಹವರು ಆಗಾಗ್ಗೆ ಹೇಳ್ತಾ ಇದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ. ಅವರು ಜಾತಿ ಆಧರಿತ ಮೀಸಲಾತಿಗೆ ವಿರೋಧವಾಗಿದ್ದು. ನಿಜವಾದ ಮೈಸೂರು ಕಟ್ಟಿದ್ದು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಮತ್ತು ಟಿಪ್ಪು ಸುಲ್ತಾನ್ ಎಂಬ ವಾದ ಸರಣಿ, ಒಂದೈದಾರು ವರ್ಷಗಳಿಂದ ಉದ್ಭವವಾಗಿದೆ. ಎಲ್ಲ ಓಕೆ.. ಕನ್ನಂಬಾಡಿಯಲ್ಲಿ ಗೇಟ್ ಮೇಲೆ ಟಿಪ್ಪು ಸುಲ್ತಾನ್ ಹೆಸರಿದೆಯಲ್ಲ.. ಅದಂತೂ ಸತ್ಯವೇ ತಾನೇ.. ಸುಖಾಸುಮ್ಮನೆ ಟಿಪ್ಪು ಸುಲ್ತಾನ್ ಹೆಸರು ಅಲ್ಲಿ ಬಂದಿದ್ದಾದ್ರೂ ಏಕೆ..? ಒಡೆಯರ್ ಅವರೇ ಕಟ್ಟಿಸಿದ್ದಾರೆ ಎಂದ ಮೇಲೆ.. ಅವರೇ ಟಿಪ್ಪು ಸುಲ್ತಾನ್ ಹೆಸರು ಹಾಕಿದ್ದಾರೆ ಅಂದ್ರೆ.. ಟಿಪ್ಪು ಸುಲ್ತಾನ್ ಕಾಲದಲೇ ಅಡಿಗಲ್ಲು ಹಾಕಿರಬೇಕು ಎಂದರ್ಥ ಅಲ್ಲವೇ..
ಉತ್ತರ ಸಿಕ್ಕೋದು ಇತಿಹಾಸದಲ್ಲಿಯೇ. ಟಿಪ್ಪು ಸುಲ್ತಾನ್ ಕಾಲ ಕ್ರಿ.ಶ. 1782 ರಿಂದ 1799. ಅಂದ್ರೆ.. ಟಿಪ್ಪು ಸುಲ್ತಾನ್ ಅಧಿಕಾರದಲ್ಲಿ ಇದ್ದದ್ದು ಕೇವಲ 17 ವರ್ಷ. ಈ 17 ವರ್ಷಗಳಲ್ಲಿ ಬ್ರಿಟಿಷರು, ಮರಾಠರು, ಚಿತ್ರದುರ್ಗದ ಪಾಳೆಗಾರರು, ಹೈದರಾಬಾದಿನ ನವಾಬರು.. ಸೇರಿದಂತೆ ಎಲ್ಲರ ಜೊತೆ ಯುದ್ಧ ಮಾಡಿದ್ದಾನೆ. ಅದು ಒಂದೆರಡು ಯುದ್ಧ ಅಲ್ಲ. ಕೊನೆಗೆ ಬ್ರಿಟಿಷರ ಜೊತೆಗಿನ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸಾಯ್ತಾನೆ. ಇತಿಹಾಸದ ಪ್ರಕಾರ ಟಿಪ್ಪು ಸುಲ್ತಾನ್ ಸತ್ತಿದ್ದು 1799 ಮೇ 2ನೇ ತಾರೀಕು.
ಆದರೆ.. ಕನ್ನಂಬಾಡಿ ಅಣೆಕಟ್ಟೆ ಇದ್ಯಲ್ಲ.. ಅದಕ್ಕೆ ಅಡಿಗಲ್ಲು ಹಾಕಿದ್ದೇ 1911ರಲ್ಲಿ. ಅಷ್ಟು ಹೊತ್ತಿಗೆ ಟಿಪ್ಪು ಸುಲ್ತಾನ್ ಸತ್ತು ಕರೆಕ್ಟ್ ಆಗಿ 112 ವರ್ಷಗಳಾಗಿತ್ತು. ಒಂದು ಶತಮಾನಕ್ಕಿಂತ ಜಾಸ್ತಿ. ಅರೆ.. ಸತ್ತು ಶತಮಾನ ಆಗಿದ್ದವನು ಅದು ಹೇಗೆ ಕನ್ನಂಬಾಡಿಗೆ ಶಂಕು ಸ್ಥಾಪನೆ ಮಾಡೋಕೆ ಸಾಧ್ಯ..? ಮಹದೇವಪ್ಪನವರ ವಾದಕ್ಕೆ ಒಂದಿಷ್ಟಾದ್ರೂ ತಲೆ ಬೇಡ್ವಾ.?
ಇರಲಿ ಬಿಡಿ, 1911ರಲ್ಲಿ ಶುರುವಾದ ಕೆಆರ್‌ಎಸ್ ಕಟ್ಟುವ ಕೆಲಸ ಮುಕ್ತಾಯವಾಗಿದ್ದು 1932ರಲ್ಲಿ. ಅಂದ್ರೆ.. ಸತತವಾಗಿ 21 ವರ್ಷ ಕಟ್ಟಿದ ಡ್ಯಾಂ ಕನ್ನಂಬಾಡಿ.
ಹಾಗಾದರೆ.. ಕನ್ನಂಬಾಡಿ ಗೇಟಿನ ಬಳಿ ಟಿಪ್ಪು ಸುಲ್ತಾನನ ಹೆಸರೇಕೆ..? ಒಂದಿಷ್ಟು ಹಿಸ್ಟರಿ ನೋಡೋಣ.
ಕಾವೇರಿಗೆ ಮೊದಲು ಒಡ್ಡು ಕಟ್ಟೋ ಆಲೋಚನೆ ಮಾಡಿದ್ದು ದಳವಾಯಿ ಕುಮಾರರಾಮ. ಅದಾದ ಮೇಲೆ ನರಸರಾಜ ಒಡೆಯರ್.. ಅಂದ್ರೆ.. ಕನ್ನಡದ ರಣಧೀರ ಕಂಠೀರವ.. ಒಂದಿಷ್ಟು ಸಕ್ಸಸ್ ಆದ್ರು. ನದಿಗೆ ಒಂದು ದೊಡ್ಡ ಅಣೆಕಟ್ಟೆ ಕಟ್ಟೋಣ ನ್ನೋ ಪ್ರಯತ್ನ ಶುರು ಮಾಡಿದ್ದು ಚಿಕ್ಕದೇವರಾಜ ಒಡೆಯರ್. ಶ್ರೀರಂಗಪಟ್ಟಣದ ಉತ್ತರದಲ್ಲಿ ಒಂದು ಅಣೆಕಟ್ಟನ್ನೂ ಕಟ್ಟಿದ್ರು. ಆದರೆ.. ಇನ್ನೂ ದೊಡ್ಡದಾಗಿ ಕಟ್ಟುವ ಆಸೆ, ಕನಸು ಇಟ್ಟುಕೊಂಡಿದ್ರಾದ್ರೂ.. ಆಗಲಿಲ್ಲ. ಆಗ ಹೈದರಾಲಿ, ಟಿಪ್ಪು ಸುಲ್ತಾನ್ ಕಾಲ ಬಂತಲ್ಲ. ಆ ಕನಸನ್ನ ನಾನೂ ಈಡೇರಿಸ್ತೇನೆ ಅಂತ ಯಾರ ಹತ್ರಾನೋ ಹೇಳ್ಕೊಂಡಿದ್ನಂತೆ. ಅಷ್ಟು ಬಿಟ್ರೆ.. ದಾಖಲೆಗಳಿಲ್ಲ.
ನಾಲ್ವಡಿ ಕೃಷ್ಣರಾಜ ಒಡೆಯರ್.. ಉದಾರತೆಯಿಂದ ಟಿಪ್ಪು ಸುಲ್ತಾನ್ ಕೂಡಾ ಕನಸು ಕಂಡಿದ್ದ ಎಂದು ಬರೆಸಿದ್ಧಾರೆ. ಈಗ ಹೆಚ್ ಸಿ ಮಹದೇವಪ್ಪ ಹೇಳ್ತಿರೋದೂ ಇದನ್ನೇ.
ಇತಿಹಾಸ ತಜ್ಞರಾದ, ಸಂಶೋಧಕ ಚಿಕ್ಕರಂಗೇ ಗೌಡರು ದಾಖಲೆ ಸಮೇತ ಹೇಳಿರೋ ಪ್ರಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದರ ಸಂಪೂರ್ಣ ಕ್ರೆಡಿಟ್ ಸಿಗಬೇಕು. ಅಣೆಕಟ್ಟೆ ಕಟ್ಟುವುದಕ್ಕೆ ಆರ್ಥಿಕ ಸಮಸ್ಯೆ ಎದುರಾದಾಗ ಹೆಂಡತಿ ಪ್ರತಾಪ ಕುಮಾರಿ, ತಾಯಿ ಕೆಂಪನಂಜಮ್ಮಣ್ಣಿ, ಮಕ್ಕಳ ಚಿನ್ನದ ಒಡವೆಗಳನ್ನು ಮಾರಿ ಹಣ ಹೊಂಚಿದ್ದರು. ಅವರ ಉದಾರತೆಯನ್ನು ಈಗಿನ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳೋದು ಬೇಡ ಎಂದಿದ್ದಾರೆ. ಟಪ್ಪು ಸುಲ್ತಾನನ ಒಂದು ರೂಪಾಯಿ ಕೂಡಾ ಕನ್ನಂಬಾಡಿಗೆ ಬಳಕೆ ಆಗಿಲ್ಲ.



