ಹುಲಿ ಉಗುರು. ಈಗ ರಾಜ್ಯಾದ್ಯಂತ ಭರ್ಜರಿ ಸದ್ದು ಮತ್ತು ಸುದ್ದಿ ಮಾಡ್ತಾ ಇದೆ. ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಸಂತೋಷ್ ಅವರನ್ನ ಬಿಗ್ ಬಾಸ್ ಮನೆಗೇ ನುಗ್ಗಿ ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ ಮೇಲೆ ಹಲವು ನಟರಿಗೂ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಹಳ್ಳಿಕಾರ್ ಹೋರಿ ಖ್ಯಾತಿಯ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಹುಲಿ ಉಗುರಿನ ಲಾಕೆಟ್ ತೋರಿಸಿದ್ದರು. ವನ್ಯಜೀವಿ ಕಾಯ್ದೆ ಪ್ರಕಾರ ಅದು ಅಪರಾಧ. ಸಂತೋಷ್ ಅರೆಸ್ಟ್ ಆಗಿದ್ದೇ ತಡ, ಇದೇ ರೀತಿ ಹುಲಿ ಉಗುರಿನ ಲಾಕೆಟ್ ಪ್ರದರ್ಶನ ಮಾಡಿದವರನ್ನೂ ಅರೆಸ್ಟ್ ಮಾಡಿ ಎಂಬ ಆಗ್ರಹ ಉದ್ಭವವಾಗಿದೆ.
ನಟ ದರ್ಶನ್, ಚಿಕ್ಕಮಗಳೂರಿನ ಸ್ವಾಮೀಜಿ ಗೌರಿ ಗದ್ದೆಯ ವಿನಯ್ ಗುರೂಜಿ, ನಟ ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್, ನಟ ಹಾಗೂ ಸಂಸದರೂ ಆಗಿರುವ ಜಗ್ಗೇಶ್, ನಟ ನಿಖಿಲ್ ಕುಮಾರಸ್ವಾಮಿ.. ಒಬ್ಬಿಬ್ಬರಲ್ಲ.. ಹಲವು ನಟರು ಈ ಲಿಸ್ಟಿನಲ್ಲಿದ್ದಾರೆ.
ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ಅಲ್ಲದೇ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ದರ್ಶನ್ ಹಾಗೂ ವಿನಯ್ ಗುರೂಜಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ್ದು ಅಸಲಿನೋ ಅಥವಾ ನಕಲಿಯೋ ಎಂಬುದು ಅಧಿಕಾರಿಗಳು ಪರಿಶೀಲಿಸಬೇಕು. ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ? ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ’ ಎಂದು ಶಿವಕುಮಾರ್ ಹೇಳಿದ್ದಾರೆ.
ಈ ಹಿಂದೆ ದರ್ಶನ್ ಮತ್ತು ರಾಕ್ಲೈನ್ ವೆಂಕಟೇಶ್ ಅವರು ಹುಲಿ ಉಗುರಿನ ಲಾಕೆಟ್ ಧರಿಸಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಈಗ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತಿದೆ. ಅಲ್ಲದೆ ನಟ ಜಗ್ಗೇಶ್ ತಮಗೆ ತಮ್ಮ ತಾಯಿ ಕೊಟ್ಟ ಹುಲಿ ಉಗುರಿನ ಲಾಕೆಟ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಲ್ಲದೆ ನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಫೋಟೋಗಳು ವೈರಲ್ ಆಗುತ್ತಿದ್ದು, ಎಲ್ಲರಿಗೂ ಹುಲಿ ಉಗುರು ಮುಳುವಾಗಲಿದೆಯಾ.. ಕಾದು ನೋಡಬೇಕಿದೆ.
ನಟ ಜಗ್ಗೇಶ್ ರಾಜಕಾರಣಿ, ರಾಜ್ಯಸಭಾ ಸದಸ್ಯ. ಇನ್ನು ನಟ ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿ. ರಾಕ್ʻಲೈನ್ ವೆಂಕಟೇಶ್ ಪ್ರಭಾವಿ ನಿರ್ಮಾಪಕ. ವಿನಯ್ ಗುರೂಜಿ ಕೂಡಾ ಪ್ರಭಾವಿಗಳೇ. ಎಲ್ಲ ಪಕ್ಷದಲ್ಲೂ ಅವರಿಗೆ ಭಕ್ತರಿದ್ಧಾರೆ. ಈಗ ಯಾರನ್ನೆಲ್ಲ ಅರೆಸ್ಟ್ ಮಾಡುತ್ತೆ.. ಅರಣ್ಯ ಇಲಾಖೆ..?



