ಪ್ರಧಾನಿ ನರೇಂದ್ರ ಮೋದಿ ಗೆದ್ದರೆ ಹ್ಯಾಟ್ರಿಕ್ ಆಗುತ್ತದೆ. ಆದರೆ.. ಈ ಬಾರಿ 100ಕ್ಕೂ ಹೆಚ್ಚು ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ಏಕಾಂಗಿಯಾಗಿ ಕನಿಷ್ಠ 370 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ, ಈ ಬೃಹತ್ ಗುರಿ ದಾಟಲು 100 ಹಾಲಿ ಸಂಸರಿಗೆ ಟಿಕೆಟ್ ನಿರಾಕರಣೆ ಮಾಡಿದೆ ಎನ್ನುವುದು ಕೂಡಾ ಇಂಪಾರ್ಟೆಂಟ್. ಕರ್ನಾಟಕದಲ್ಲಿಯೇ ಘೋಷಣೆಯಾಗಿರುವ 24 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳ ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ಇನ್ನೊಂದು ಕ್ಷೇತ್ರ ಕೋಲಾರವನ್ನು ಜೆಡಿಎಸ್ʻಗೆ ಕೊಟ್ಟಿದ್ದರೆ, ಮತ್ತೊಂದು ಕ್ಷೇತ್ರ ಮಂಡ್ಯವನ್ನು ಬಿಜೆಪಿಗೆ ಬೆಂಬಲಿಸಿದ್ದ ಸುಮಲತಾ ಅವರಿಗೂ ಕೊಟ್ಟಿಲ್ಲ. ಇನ್ನು ಘೋಷಣೆಯಾಗದ ಚಿತ್ರದುರ್ಗ ಕ್ಷೇತ್ರದಲ್ಲೂ ಗೋವಿಂದ ಕಾರಜೋಳ ಅವರ ಹೆಸರು ಕೇಳಿ ಬರ್ತಿದ್ದು, ಹಾಲಿ ಸಂಸದರಿಗೆ ಅಲ್ಲಿಯೂ ಟಿಕೆಟ್ ಇಲ್ಲ.
ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ, ನಳೀನ್ ಕುಮಾರ್ ಕಟೀಲು ಅವಂತಹವರಿಗೇ ಟಿಕೆಟ್ ಕೊಟ್ಟಿಲ್ಲ. ಇದರ ಜೊತೆ ಮೋದಿ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ತಮ್ಮ ಒಲವು ಮತ್ತು ನಿಲುವು ಎರಡನ್ನೂ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಭ್ಯರ್ಥಿಗಳ ಆಯ್ಕೆಗೆ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದು, ಪ್ರತಿ ಅಭ್ಯರ್ಥಿಯ ಆಯ್ಕೆಯಲ್ಲೂ ಸಕ್ರಿಯ ಪಾತ್ರ ವಹಿಸಿ, ಅವರ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಮೋದಿ ಅವರಿಂದ ಸ್ಪೆಷಲ್ ಕ್ಲಾಸ್ʻಗೆ ಗುರಿಯಾದವರು.
ಮೋದಿ ಸ್ಪೆಷಲ್ ಕ್ಲಾಸ್ ಪಾಠ :
ಇಂದೋರ್ ಕ್ಷೇತ್ರದ ಬಗ್ಗೆ ಚರ್ಚೆ ನಡೆದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅಭ್ಯರ್ಥಿಯೊಬ್ಬರ ಹೆಸರು ಸೂಚಿಸಿದರು. ಆ ಅಭ್ಯರ್ಥಿಯೇ ಏಕೆ ಎಂಬ ಪ್ರಶ್ನೆಗೆ ಮೋಹನ್ ಯಾದವ್ ಕೊಟ್ಟ ಉತ್ತರ ʻಸಿಎಂ ಆಗಿರುವ ನಾನು ಭೋಪಾಲದಲ್ಲಿರುತ್ತೇನೆ. ಈ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಇಂದೋರ್ ಹಾಗೂ ಉಜ್ಜಯಿನಿ ಎರಡನ್ನೂ ನೋಡಿಕೊಳ್ಳುತ್ತಾರೆ’ ಎನ್ನುವುದು. ಆದರೆ.. ಮೋದಿ ಅವರಿಗೆ ಮೋಹನ್ ಯಾದವ್ ಅವರು ಸಿಎಂ ಆದ ನಂತರವೂ ಭೋಪಾಲಕ್ಕಿಂತ ಹೆಚ್ಚು ಅವರ ಕ್ಷೇತ್ರ ಉಜ್ಜಯಿನಿಯಲ್ಲೇ ಇರುತ್ತಾರೆ ಎಂಬ ಮಾಹಿತಿ ಇತ್ತು. ಆಗ ಮಧ್ಯಪ್ರದೇಶದ ಸಿಎಂಗೆ ನೀವು ಕೇವಲ ಶಾಸಕರಲ್ಲ, ಸಿಎಂ ಎಂದು ಮನದಟ್ಟು ಮಾಡಿದ ಮೋದಿ ‘ನೀವು ಭೋಪಾಲದಲ್ಲಿ ಹೆಚ್ಚು ಸಮಯ ಇರುವುದೇ ಇಲ್ಲವಂತೆ? ಪದೇ ಪದೇ ಉಜ್ಜಯಿನಿಗೆ ಹೋಗುತ್ತೀರಂತೆ? ನಿಮಗೆ ಕೊಟ್ಟಿರುವ ಜವಾಬ್ದಾರಿ ಸರಿಯಾಗಿ ನಿಭಾಯಿಸಿ’ ಎಂದು ಹೇಳಿದರು ಎನ್ನಲಾಗಿದೆ.
ಇನ್ನು ಗೋವಾದ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಮೋದಿ ತಮ್ಮ ಒಲವು ಮತ್ತು ನಿಲುವು ಎರಡನ್ನೂ ಹೇಳಿದ್ದಾರೆ. ದಕ್ಷಿಣ ಗೋವಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯೊಬ್ಬರನ್ನು ಹುಡುಕಿ ಎಂದು ಮೋದಿ ಹೇಳಿದ್ದರು. ಅದಕ್ಕೆ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಆ ಕ್ಷೇತ್ರದಲ್ಲಿ ‘ಗಟ್ಟಿ ಮಹಿಳಾ ಅಭ್ಯರ್ಥಿ’ ಇಲ್ಲ ಎಂದರು. ಆಗ ಮೋದಿ, ‘ಹಾಗಿದ್ದರೆ ನೀವು ರಾಜ್ಯಸಭೆಗೆ ರಾಜೀನಾಮೆ ನೀಡಿ ದಕ್ಷಿಣ ಗೋವಾದಿಂದ ಸ್ಪರ್ಧಿಸಿ. ನಿಮ್ಮ ರಾಜ್ಯಸಭೆ ಸೀಟಿಗೆ ನಾನು ಮಹಿಳೆಯೊಬ್ಬರನ್ನು ತರುತ್ತೇನೆ’ ಎಂದು ಕ್ಲಾಸ್ ತೆಗೆದುಕೊಂಡರು. ಕೊನೆಗೆ ದಕ್ಷಿಣ ಗೋವಾದಲ್ಲಿ ಉದ್ಯಮಿ ಪಲ್ಲವಿ ಡೆಂಪೋ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಅಂದರೆ ಈ ಬಾರಿ ಮಹಿಳಾ ಅಭ್ಯರ್ಥಿಗಳು ಹೆಚ್ಚು ನಿಲ್ಲಬೇಕು ಹಾಗೂ ಗೆಲ್ಲಬೇಕು ಎಂದು ಮೋದಿ ಹಠ ತೊಟ್ಟಂತೆ ಕಾಣುತ್ತಿದೆ. ಯಾರೋ ಒಬ್ಬರ ಪರವಾಗಿ ಅಲ್ಲ. ಅಲ್ಲದೆ.. ಅಂತಹವರನ್ನು ಆಯ್ಕೆ ಮಾಡಿಸುವ ಗೆಲ್ಲಿಸುವ ಹೊಣೆಗಾರಿಕೆಯನ್ನೂ ಕೊಡುತ್ತಿದ್ಧಾರೆ. ಗೆಲುವಿಗಿಂತ ಹೆಚ್ಚು ಮೋದಿಯ ಉದ್ದೇಶ ಬೇರೆಯದೇ ಇರುವಂತಿದೆ.



