ಕಮಲ್ ಹಾಸನ್ ಅವರ ಥಗ್ ಲೈಫ್ ಬ್ಯಾನ್ ವಿಚಾರದಲ್ಲಿ, ರಾಜ್ಯ ಸರ್ಕಾರವೇ ಹೆದರಿತಾ..? ಸರ್ಕಾರ ಎರಡು ಹೆಜ್ಜೆ ಹಿಂದಿಟ್ಟಿದ್ದೇಕೆ..? ಥಗ್ ಲೈಫ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಫಿಲಂ ಚೇಂಬರಿಗೆ ಪತ್ರವನ್ನೂ ಬರೆದಿದ್ದ, ಬಹಿರಂಗವಾಗಿ ಹೇಳಿಕೆಯನ್ನೂ ಕೊಟ್ಟಿದ್ದ ಸಚಿವ ಶಿವರಾಜ್ ತಂಗಡಗಿ ಇದ್ದಕ್ಕಿದ್ದಂತೆ ಚೇಂಬರ್ ತೀರ್ಮಾನಕ್ಕೆ ನಾವು ಬದ್ಧ ಎನ್ನುತ್ತಿರುವುದೇಕೆ..? ಇದರ ಹಿಂದೊಂದು ಸ್ಟೋರಿ ಇದೆ. ಆ ಸ್ಟೋರಿಯ ಹೆಸರು ಭಯ.
ಕಮಲ್ ಹಾಸನ್ ಸೀನಿಯರ್ ನಟ ಆದ್ರೆ ನಮ್ಗೇನು.. ಕ್ಷಮೆ ಕೇಳ್ಲೇಬೇಕ್.. ಬಿಡೋ ಮಾತೇ ಇಲ್ಲ ಎನ್ನುತ್ತಿದ್ದ ಶಿವರಾಜ್ ತಂಗಡಗಿ, ಇದ್ದಕ್ಕಿದ್ದಂತೆ ಪ್ಲೇಟ್ ಬದಲಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆಯಲ್ಲ, ಇನ್ನೇನು ಎನ್ನುತ್ತಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾವೂ ತಮಿಳರು ನೆರೆಹೊರೆಯವರು, ಜಗಳ ಮಾಡ್ಕೋಬಾರ್ದು ಅಂತಾ ಬುದ್ದಿವಾದ ಹೇಳಿದ್ದಾರೆ. ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಬರಲಿಲ್ಲ ಎಂದು ಇಡೀ ಚಿತ್ರರಂಗದವರ ನಟ್ಟು ಬೋಲ್ಟು ಟೈಟ್ ಮಾಡೋ ವಾರ್ನಿಂಗ್ ಕೊಟ್ಟಿದ್ದ ಡಿಕೆ ಕೂಡಾ, ಹೆದರಿಬಿಟ್ರಾ..? ಯೆಸ್.. ಚಿತ್ರಲೋಕಕ್ಕೆ ಬಂದಿರೋ ಮಾಹಿತಿ ಪ್ರಕಾರ, ಯಾವಾಗ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಬ್ಯಾನ್ ಪ್ರಶ್ನೆ ಮಾಡಿ ಹೈಕೋರ್ಟ್ ಮೆಟ್ಟಿಲೇರಿದ್ರೋ.. ಥಟ್ಟಂತ ಅಲರ್ಟ್ ಆಗಿದೆ ಸರ್ಕಾರ.
ಹೈಕೋರ್ಟಿಗೆ ಹೋದರೆ ಬೇರೆ ಇನ್ನೇನೂ ಆಗಲ್ಲ. ಸೆನ್ಸಾರ್ ಆಗಿರೋ ಸಿನಿಮಾವನ್ನ ಬ್ಯಾನ್ ಮಾಡೋ ಅಧಿಕಾರ ಇಲ್ಲ. ಸಮಸ್ಯೆ ಆದ್ರೆ ರಕ್ಷಣೆ ಕೊಡಿ ಅಂತಾ ಆದೇಶ ಕೊಡಬೇಕಾಗುತ್ತೆ ಹೈಕೋರ್ಟು. ಈ ಹಿಂದಿನ ಕೇಸುಗಳಲ್ಲಿ ಈ ರೀತಿ ಆದೇಶ ನೀಡಿದ ಉದಾಹರಣೆ ಇದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಪೀಠದಲ್ಲಿ ವಿಚಾರಣೆ ಆಗುವಾಗ ಹಳೆಯ ತೀರ್ಪುಗಳು ಖಂಡಿತಾ ಪ್ರಸ್ತಾಪ ಆಗುತ್ತವೆ.
ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಹೆದರಿರೋದು ಜಯಲಲಿತಾ ವರ್ಸಸ್ ಕರ್ನಾಟಕ ಸರ್ಕಾರದ 2001ರ ಪ್ರಕರಣಕ್ಕೆ. ಆಗ ಸರ್ಕಾರವೇ ತಮಿಳು ಸಿನಿಮಾ ಬ್ಯಾನ್ ಮಾಡಿತ್ತು. ಕಾವೇರಿ ಗಲಾಟೆ ಕಾರಣ ಹೇಳಿತ್ತು. ಆಗ ಎಸ್ ಎಂ ಕೃಷ್ಣ ಅವರ ಕುರ್ಚಿ ರಕ್ಷಣೆ ಮಾಡಿದ್ದದ್ದು ಚಲನಚಿತ್ರ ವಾಣಿಜ್ಯ ಮಂಡಳಿ. ಬ್ಯಾನ್ ಮಾಡಿದ್ದರ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತುಕೊಂಡು, ಸರ್ಕಾರವನ್ನು ಬಚಾವ್ ಮಾಡಿತ್ತು. ಸುಪ್ರೀಂಕೋರ್ಟ್, ಚಲನಚಿತ್ರ ವಾಣಿಜ್ಯ ಮಂಡಳಿಗೆ ಛೀಮಾರಿ ಹಾಕಿತ್ತು. ಆದರೆ, ಎಸ್ ಎಂ ಕೃಷ್ಣ ಸರ್ಕಾರ, ಸುಪ್ರೀಂ ತೂಗುಗತ್ತಿಯಿಂದ ಬಚಾವ್ ಆಗಿತ್ತು.
ಸಿದ್ದರಾಮಯ್ಯ ಹೆದರುತ್ತಾ ಇರೋದು ಈ ಕಾರಣಕ್ಕೇ ಎನ್ನುವುದು ಚಿತ್ರಲೋಕಕ್ಕೆ ಲಭ್ಯವಾಗಿರೋ ಮೂಲಗಳ ಮಾಹಿತಿ. ನಟ್ಟುಬೋಲ್ಟು ಖ್ಯಾತಿಯ ಡಿಸಿಎಂ ಹೆದರುತ್ತಿರುವುದೂ ಇದೇ ಕಾರಣಕ್ಕೆ. ಬ್ಯಾನ್ ಮಾಡದೇ ಇದ್ರೆ ಬಿಡಲ್ಲ ಎನ್ನುತ್ತಿದ್ದ, ವಾಣಿಜ್ಯ ಮಂಡಳಿಗೆ ಪತ್ರವನ್ನೂ ಬರೆದಿದ್ದ ಸಚಿವ ಶಿವರಾಜ್ ತಂಗಡಗಿ, ಇದ್ದಕ್ಕಿದ್ದಂತೆ ಕೂಲ್ ಆಗಿರುವುದೂ ಇದೇ ಕಾರಣಕ್ಕೆ.
ಹಾಗಾದರೆ ಥಗ್ ಲೈಫ್ ಸಿನಿಮಾ ರಿಲೀಸ್ ಆಗೋದು ಗ್ಯಾರಂಟಿನಾ..?
ಆಲ್ ಮೋಸ್ಟ್ ಆಗುತ್ತೆ. ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೂ ಆಗುತ್ತೆ ಅಂತಾರೆ ಕಾನೂನು ತಜ್ಞರು. ಯಾಕಂದ್ರೆ, ತಮಿಳುನಾಡಿನಲ್ಲಿ ಒಂದು ಪೋಸ್ಟರ್ ಓಡಾಡ್ತಾ ಇದೆ. ಕರ್ನಾಟಕದಲ್ಲಿ ರಿಲೀಸ್ ಆಗದೇ ಹೋದ್ರೆ 40-60 ಕೋಟಿ ಲಾಸ್ ಆಗಲಿದೆ ಎನ್ನುವ ಪೋಸ್ಟರ್ ಅದು. ಕರ್ನಾಟಕದಲ್ಲಿ ಸಿನಿಮಾವನ್ನು ಸುಮಾರು 6ರಿಂದ 10 ಕೋಟಿಗೆ ಡಿಸ್ಟಿಬ್ಯೂಷನ್ ತಗೊಂಡಿದ್ದಾರಂತೆ. ಶೇರ್ ಲೆಕ್ಕಾಚಾರದಲ್ಲಿ ಕರ್ನಾಟಕಕ್ಕೆ ವಿತರಣೆ ಹಕ್ಕು ತಗೊಂಡಿದ್ದಾರಂತೆ. ಅವರ ಕಥೆ ಏನು..?
ಅಲ್ಲಿ ಒಂದು ಟ್ವಿಸ್ಟೂ ಇದೆ. ಏನಂದ್ರೆ, ಸಿನಿಮಾ ರಿಲೀಸ್ ಮಾಡಿಸಿ, ಪ್ರೊಟೆಕ್ಷನ್ ಕೊಡಿ ಅಂತಾ ಕೋರ್ಟೇನೋ ಹೇಳಬಹುದು. ಆದರೆ, ಥಿಯೇಟರಿನವರು ಮನಸ್ಸು ಮಾಡದಿದ್ದರೆ, ಸಾಧ್ಯವೇ ಇಲ್ಲ. ಹೇಗೆ ಅಂದ್ರೆ.. ಅದಕ್ಕೆ ತಮಿಳಿನವರೇ ಒಂದು ಮಾಡೆಲ್ ಕೊಟ್ಟಿದ್ದಾರೆ.
ಕಳೆದ ವರ್ಷ ಕೋಟಿಗೊಬ್ಬ 2 ರಿಲೀಸ್ ಆಗಿತ್ತು, ಗೊತ್ತಿದ್ಯಲ್ಲ. ಕಿಚ್ಚ ಸುದೀಪ್ ಅಭಿನಯದ ಸಿನಿಮಾಗೆ ತಮಿಳುನಾಡಿನಲ್ಲಿ ಒಂದೇ ಒಂದು ಶೋ ಕೂಡಾ ಕೊಡಲಿಲ್ಲ. ಯಾಕೆ ಅನ್ನೋದ್ರ ಕಥೆ ಬಿಡಿ, ಈ ಕೆಲಸವನ್ನ ತಮಿಳುನಾಡಿನ ಥಿಯೇಟರ್, ಮಲ್ಟಿಪ್ಲೆಕ್ಸಿನವರು ಹಲವು ಚಿತ್ರಗಳಿಗೆ ಮಾಡ್ತಾನೇ ಬಂದಿದ್ದಾರೆ. ಕಾನೂನು ಪ್ರಕಾರ, ನೀವು ಸಿನಿಮಾ ಶೋ ಕೊಡಿ ಅಂಥಾ ಹೇಳೋಕೆ ಕೋರ್ಟಿಗೂ ಅಧಿಕಾರ ಇಲ್ಲ. ದಟ್ ಈಸ್ ದಿ ಓನ್ಲಿ ವೇ. ನಾವು ಸಿನಿಮಾ ಹಾಕಲ್ಲ ಅಂತಾ ಥಗ್ ಲೈಫ್ ಸಿನಿಮಾ ಶೋ ಮಾಡ್ದೇ ಇರೋದು.
ಅಂದ್ರೆ ಸಿಂಗಲ್ ಸ್ಕ್ರೀನ್ ಥಿಯೇಟರಿನವರನ್ನೇನೋ ಒಗ್ಗಟ್ಟು, ಕನ್ನಡದ ಅಭಿಮಾನದ ಹೆಸರಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಆಗದಂತೆ ತಡೆಯಬಹುದು. ಆದರೆ.. ಮಲ್ಟಿಪ್ಲೆಕ್ಸ್ ವಿಷಯ ಆ ರೀತಿ ಇರಲ್ಲ. ದೊಡ್ಡ ದೊಡ್ಡ ಕಂಪೆನಿಗಳು, ಉದ್ಯಮಿಗಳು ಹಾಗೂ ರಾಜಕಾರಣಿಗಳೇ ಇದ್ದಾರೆ. ಅವರು ಕೇವಲ ಬಿಸಿನೆಸ್ ನೋಡ್ತಾರೆ.
ಸರ್ಕಾರ ಹೆದರಿ ಹಿಂದೆ ಹೆಜ್ಜೆ ಇಟ್ಟಿರುವಾಗ, ಕನ್ನಡ ಸಂಘಟನೆಗಳು ಥಿಯೇಟರು, ಮಲ್ಟಿಪ್ಲೆಕ್ಸುಗಳಿಗೆ ಹೋಗಿ ಥಗ್ ಲೈಫ್ ಶೋ ಬೇಡ ಎಂದು ಹೇಳುತ್ತಿರುವಾಗ.. ಫಿಲ್ಮ್ ಚೇಂಬರ್ ಮತ್ತೊಂದು ಕೇಸ್ ಎದುರಿಸೋಕೆ ಸಿದ್ಧವಾಗ್ತಾ ಇದೆ. ಫೈನಲ್ ಆಗಿ ತಲೆ ಕೊಡೋದು ಫಿಲ್ಮ್ ಚೇಂಬರ್ ಮತ್ತು ಕನ್ನಡ ಸಂಘಟನೆಗಳು ಮಾತ್ರ.



