ಕೆಎಂ ರಘು ಎಂಬ ಸಿನಿಮಾ ಡೈರೆಕ್ಟರ್ ಡಿಕೆ ಶಿವಕುಮಾರ್ ಅವರ ಕುರಿತಾಗಿ ಪುಸ್ತಕವೊಂದನ್ನು ಬರೆದಿದ್ದಾರೆ. ಪುಸ್ತಕದಲ್ಲಿ ವಿಶೇಷತೆಗಳು, ಕೌತುಕಗಳು, ಬಚ್ಚಿಟ್ಟ ಕಥೆಗಳು.. ಹೊಸ ಕಥೆಗಳು.. ಯಾವುದೂ ಇಲ್ಲ. ಆದರೆ.. ಎಲ್ಲವನ್ನೂ ಒಟ್ಟಿಗೇ ಸೇರಿಸಿ ಕೃತಿ ಮಾಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಅಕ್ಷರ ರೂಪದಲ್ಲಿ ನೋಡಿದಂತೆ ಇದೆ ಎನ್ನುವುದು ವಿಮರ್ಶೆ. ಆದರೆ.. ಆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಒಂದು ಸತ್ಯ ಕಥೆ ಹೇಳಿದ್ದಾರೆ. ಅಂದಹಾಗೆ ಆ ಕಥೆ ಕುಮಾರಸ್ವಾಮಿ 2ನೇ ಬಾರಿ ಸಿಎಂ ಆಗಿರುವ ಅವಧಿಯಲ್ಲಿ ನಡೆದ ಘಟನೆ.
ʻನಾನು ರಾಜಕೀಯಕ್ಕೆ ಬಂದಾಗಿನಿಂದ ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ಹೋರಾಟ ಮಾಡಿಕೊಂಡೇ ಬಂದವನು. ಆದರೆ, ಪಕ್ಷದ ಆದೇಶಕ್ಕೆ ಕಟ್ಟು ಬಿದ್ದು ಕುಮಾರಸ್ವಾಮಿ ಜೊತೆ ಒಗ್ಗಟ್ಟಾಗಿ ನಿಂತಿದ್ದೆ. ಹೈಕಮಾಂಡ್ ಮಾತಿಗೆ ಕಟಿಬಿದ್ದು, ಕುಮಾರಸ್ವಾಮಿಯವರ ಕೈಹಿಡಿದು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವುʼʼ ಎನ್ನುವ ಡಿಕೆ ತಮಗೆ ವೈಯಕ್ತಿಕವಾಗಿ ಅದು ಇಷ್ಟ ಇರಲಿಲ್ಲ ಎಂದೂ ಹೇಳುತ್ತಾರೆ. ನನ್ನ ಮನಸ್ಸು ಒಪ್ಪಿತೋ ಇಲ್ಲವೋ ಅದು ಆಮೇಲಿನ ವಿಚಾರ ಎನ್ನುವ ಡಿಕೆ, ಸರ್ಕಾರ ಪತನವಾಗುತ್ತಿದೆ ಎನ್ನುವಾಗ ಅದನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎನ್ನುತ್ತಾರೆ.
ಒಂದು ಫೋನ್ ಬಂತು.
ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಹಂತದಲ್ಲಿತ್ತು. ಸರ್ಕಾರ ಉಳಿಸಿಕೊಳ್ಳಲು ಶತಪ್ರಯತ್ನ ಪಡುತ್ತಿದ್ದೆ. ಆ ವೇಳೆ ಆದಾಯ ತೆರಿಗೆ ಇಲಾಖೆಯ ಆಡಿಟರ್ ಒಬ್ಬರಿಂದ ಫೋನ್ ಬಂತು. ನಿಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ, ಇಲ್ಲಾಂದರೆ ಜೈಲಿಗೆ ಹೋಗಬೇಕಾಗುತ್ತದೆ. ಎಲ್ಲಾ ಶಾಸಕರನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ವಾರ್ನಿಂಗ್ ಮಾಡಿದರು ಎಂದಿದ್ದಾರೆ. ಆದರೆ.. ಬಹುತೇಕ ಮಾಧ್ಯಮಗಳು ಡಿಕೆ ಹೇಳಿಕೆಯಲ್ಲಿ ಇದ್ದ ʻಇನ್ ಕಂ ಟ್ಯಾಕ್ಸ್ ಅಡಿಟರ್ʼ ಎನ್ನುವುದನ್ನು ಹೇಳದೆ.. ಅಥವಾ ಹೇಳಿಯೂ ಹೇಳದಂತೆ ಸುದ್ದಿ ಮಾಡಿದ್ದಾರೆ. ಇದು ಸಹಜವಾಗಿಯೇ ಬಿಜೆಪಿಯವರ ಆಕ್ರೋಶಕ್ಕೆ ಕಾರಣವಾಗಿದೆ.
ಯಾರು ಕರೆ ಮಾಡಿದ್ದರು, ಯಾವಾಗ ಕರೆ ಮಾಡಿದ್ದರು, ಯಾವ ನಂಬರ್‌ನಿಂದ ಕರೆ ಮಾಡಿದ್ದರು ಎಂಬುದನ್ನು ಡಿಕೆ ಶಿವಕುಮಾರ್ ಬಹಿರಂಗಪಡಿಸಬೇಕು ಎಂದು ಆರ್ ಅಶೋಕ್ ಒತ್ತಾಯಿಸಿದ್ದಾರೆ. ಇದು ಡಿಕೆ ಅವರ ಪಕ್ಷದ ಹೈಕಮಾಂಡಿಗೆ ಮಾಡ್ತಿರೋ ಬ್ಲಾಕ್ ಮೇಲ್ ಎಂದು ಟೀಕಿಸಿರುವ ಆರ್ ಅಶೋಕ್ ಮೊದಲು ಯಾವ ಬಸ್ ಹತ್ತಬೇಕು ಅನ್ನೋದನ್ನು ಡಿಕೆಶಿ ತೀರ್ಮಾನಿಸಲಿ. ಆ ಮೇಲೆ ಟಿಕೆಟ್ ಕೊಡೋದು ಬಿಡೋದು ಕಂಡಕ್ಟರ್ ಕೆಲಸ. ನವೆಂಬರ್ ಕ್ರಾಂತಿ ಕಾರಣ ಹಲವು ವಿಷಯಗಳನ್ನ ಹರಿಬಿಡಲಾಗಿದೆ. ಆಫರ್ ಬಂದಿದೆ ಅಂದರೆ ಇವರು ಲೈನ್ನಲ್ಲಿ ಇದ್ದಾರೆ ಎಂದರ್ಥ. ಡಿಕೆಶಿ ಅವರನ್ನ ಅಷ್ಟು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನ ಅವರು ಹೊಡೆಯುತ್ತಾರೆ ಅಶೋಕ್ ಬಣ್ಣಿಸಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆ ಆಗದಿದ್ದರೆ, ಡಿಕೆ ಶಿವಕುಮಾರ್ ಬೇರೆ ದಾರಿ ಹಿಡಿಯಬಹುದು ಎಂಬ ಸಂದೇಶವನ್ನು ಈ ಹೇಳಿಕೆಯ ಮೂಲಕ ನೀಡಿದ್ದಾರೆ ಎಂದಿರುವ ಅಶೋಕ್, ನನಗೆ ಬಿಜೆಪಿಯಿಂದ ಆಫರ್ ಬಂದಿತ್ತು ಎನ್ನುವುದು ಆ ತಂತ್ರದ ಭಾಗವಷ್ಟೇ. ಬಿಜೆಪಿಯ ಯಾರೊಬ್ಬರೂ ಕರೆ ಮಾಡಿಲ್ಲ. ಆಫರ್ ಕೊಟ್ಟಿಲ್ಲ. ಅದರ ಅಗತ್ಯ ಇಲ್ಲ ಎಂದಿದ್ದಾರೆ.
ಡಿಕೆ ಶಿವಕುಮಾರ್ ಸ್ಪಷ್ಟನೆ : ನಾನು ಬಿಜೆಪಿಯಿಂದ ಅಥವಾ ಬಿಜೆಪಿ ನಾಯಕರಿಂದ ಡಿಸಿಎಂ ಅಥವಾ ಸಿಎಂ ಆಫರ್ ಬಂದಿತ್ತು ಎಂದು ಹೇಳಿಯೇ ಇಲ್ಲ. ನಾನು ವೇದಿಕೆಯಲ್ಲಿ ಸ್ಪಷ್ಟವಾಗಿ ಅಧಿಕಾರಿಯೊಬ್ಬರಿಂದ ಕಾಲ್ ಬಂದಿತ್ತು ಎಂದೇ ಹೇಳಿದ್ದೇನೆ. ಇದೆಲ್ಲ ಆಗಿ 5 ವರ್ಷಗಳೇ ಆಗಿವೆ. ಮುಗಿದ ಅಧ್ಯಾಯ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಮುಗಿದ ಅಧ್ಯಾಯವನ್ನು ಡಿಕೆ ಮತ್ತೆ ನೆನಪಿಸಿಕೊಂಡಿದ್ದೇಕೆ.. ಅದು ಈಗ ಮೂಡ್ತಾ ಇರೋ ಪ್ರಶ್ನೆ.



