ಡಾ.ರಾಜ್ ಕುಮಾರ್.. ಅವರನ್ನು ಆರಾಧಿಸುವ ಕೋಟ್ಯಂತರ ಕನ್ನಡಿಗರಿದ್ದಾರೆ. ಬರೀ ಸಿನಿಮಾಗಳಿಂದಷ್ಟೇ ಅಲ್ಲ, ಹೋರಾಟ, ಸಮಾಜಸೇವೆಗಳಲ್ಲಿಯೂ ನಿರತರಾಗಿದ್ದ ಡಾ.ರಾಜ್ ಅವರು ಅದೆಷ್ಟೋ ನಾಯಕರನ್ನು ಬೆಳೆಯೋಕೆ ಬಿಡಲಿಲ್ಲ ಎಂಬ ಸುಳ್ಳು ಆರೋಪಗಳೂ ಇವೆ. ಆದರೆ ಡಾ.ರಾಜ್ ಅವರು ಎದುರಿಸಿದ್ದ ಅವಮಾನಗಳ ಕಥೆ ಬಹುತೇಕರಿಗೆ ಗೊತ್ತಿಲ್ಲ. ಅವರಿಗೆ ಸ್ಟಾರ್ ನಟರು ಕುಳಿತುಕೊಳ್ಳಲು ಕುರ್ಚಿಯನ್ನೂ ಕೊಡದೆ ನಿಲ್ಲಿಸಿಯೇ ಮಾತನಾಡಿಸಿದ್ದು, ಮೇಕಪ್ ಹಾಕಿಕೊಂಡು ರೆಡಿಯಾದ ಮೇಲೆ ನೀವು ಈ ಸಿನಿಮಾಗೆ ಹೀರೋ ಅಲ್ಲ ಎಂದು ಕಳಿಸಿದ್ದು, ರಾಜ್ ಅಭಿನಯಿಸಿದ್ದ ಪಾತ್ರವನ್ನು ರಾಜ್ ಮಾಡಬಾರದಾಗಿತ್ತು ಎಂಬ ಏಕೈಕ ಕಾರಣಕ್ಕೆ ಅದೇ ಕಥೆಯನ್ನು ಇಟ್ಟುಕೊಂಡು ಮತ್ತೊಂದು ಸಿನಿಮಾ ಮಾಡಿದ್ದು, ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ನೆಲೆಯಾಗಬೇಕು ಎಂದು ನಿರ್ಮಾಣಕ್ಕಿಳಿದಾಗ ಸಿನಿಮಾ ಬಿಡುಗಡೆಗೆ ಒಂದು ವರ್ಷದವರೆಗೆ ಥಿಯೇಟರ್ ಸಿಗದಂತೆ ಮಾಡಿದ್ದು … ಹೀಗೆ ಹಲವಾರು ಕಥೆಗಳಿವೆ. ಅವು ಸತ್ಯಕಥೆಗಳೇ. ಇದೆಲ್ಲದರ ಮಧ್ಯೆ ಡಾ.ರಾಜ್ ವಿರುದ್ಧ ಡಾನ್ ಜಯರಾಜ್ʻನನ್ನು ಎತ್ತಿ ಕಟ್ಟಿದ್ದ ವಿಷಯವೂ ಈಗ ಬಹಿರಂಗವಾಗಿದೆ. ಜನಜಾಗೃತಿ ಅನ್ನೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಮಾತನಾಡಿರುವ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ವಿಷಯ ಹೇಳಿಕೊಂಡಿದ್ದಾರೆ.
ಅದು ಸಂಪತ್ತಿಗೆ ಸವಾಲ್ ಸೂಪರ್ ಹಿಟ್ ಆಗಿದ್ದ ಸಮಯ. ಸಿನಿಮಾದ ಯಾರೇ ಕೂಗಾಡಲಿ.. ಊರೇ ಹೋರಾಡಲಿ ಹಾಡು ಹಿಟ್ ಆಗಿತ್ತು. ಆ ಹಾಡನ್ನು ಸ್ವತಃ ಡಾ.ರಾಜ್ ಹಾಡಿದ್ದರು. ಸುದೀರ್ಘ ವಿರಾಮದ ಬಳಿಕ ಮತ್ತೆ ಗಾಯಕರಾಗಿ ವಾಪಸ್ ಬಂದಿದ್ದರು ಡಾ.ರಾಜ್. ಆಗ ಚಿತ್ರರಂಗದ ಇಬ್ಬರು ನಟರು ಡಾನ್ ಜಯರಾಜ್ʻಗೆ ಡಾ.ರಾಜ್ ವಿರುದ್ಧ ಎತ್ತಿಕಟ್ಟಿದ್ದರಂತೆ.
‘ಯಾರೇ ಕೂಗಾಡಲಿ’ ಹಾಡು ನಿನಗೆ ಚಾಲೆಂಜ್ ಮಾಡಿ ಹಾಡಿರುವುದು. ನಿನ್ನಂತಹವರು ಎಷ್ಟೇ ಅಬ್ಬರಿಸಿದರೂ ನನಗೇನು ಆಗಲ್ಲ, ಎಂದು ನಿನ್ನನ್ನು ಹಿಯ್ಯಾಳಿಸಿ ಮಾಡಿರುವ ಹಾಡು, ಈ ಚಿತ್ರ ಹಿಟ್ ಆಗೋಕೆ ಬಿಡಬಾರದು, ಇದು ಗೆದ್ದರೆ ನಿನಗೆ ಅವಮಾನ ಎನ್ನುವಂತೆ ಜಯರಾಜ್ ಮನಸ್ಸಿನಲ್ಲಿ ಇಲ್ಲದ ವಿಷ ಬೀಜ ಬಿತ್ತಿದ್ದರಂತೆ. ಆ ಇಬ್ಬರು ನಟರ ಮಾತನ್ನು ಡಾನ್ ಜಯರಾಜ್ ನಂಬಿದ್ದ. ಅಣ್ಣಾವ್ರಿಗೆ ಪಾಠ ಕಲಿಸುತ್ತೇನೆ ಎಂದು ಹೊರಟಿದ್ದ.
ಆಗ ಜಯರಾಜನ ಟೀಂನಲ್ಲಿದ್ದವರೇ ಕೆಲವರು ರಾಜ್ ಅಭಿಮಾನಿಗಳನ್ನು ಕೆಣಕಬೇಡಿ. ಅಭಿಮಾನಿಗಳು ತಿರುಗಿಬಿದ್ದರೆ ಕಷ್ಟ ಎಂದು ಜಯರಾಜನಿಗೆ ಬುದ್ದಿವಾದ ಹೇಳಿದ್ದರು. ಆದರೆ ಜಯರಾಜ್ ಕೇಳಿರಲಿಲ್ಲ. ಅದ್ಯಾರು ಏನ್ ಮಾಡ್ತಾರೆ ನೋಡೇ ಬಿಡ್ತೀನಿ ಎಂದು ಹೊರಟಿದ್ದ ಎಂದಿದ್ದಾರೆ.
ಆಗ ಪ್ರಭಾತ್, ನವರಂಗ್ ಹಾಗೂ ಭಾರತ್ ಚಿತ್ರಮಂದಿರಗಳಲ್ಲಿ ಸಂಪತ್ತಿಗೆ ಸವಾಲ್ ಶೋ ಸಂದರ್ಭದಲ್ಲಿಯೇ ಸ್ಕ್ರೀನ್‌ಗೆ ಬೆಂಕಿ ಹಚ್ಚಿದ್ದರಂತೆ. ಆದರೆ ಆರಂಭದಲ್ಲಿ ಗೊತ್ತಾಗಿರಲಿಲ್ಲ. ವಿಚಾರಣೆ ಬಳಿಕ ವಿಷಯ ಗೊತ್ತಾಯ್ತು. ಬಹಳ ದಿನಗಳ ನಂತರ ಜಯರಾಜ್‌ಗೆ ಈ ವಿಷಯದ ಬಗ್ಗೆ ಚಿತ್ರರಂಗದ ಇಬ್ಬರು ನಟರು ಕಿವಿ ಊದಿದ್ದರು ಅನ್ನೋದು ಗೊತ್ತಾಗಿತ್ತು ಎಂದಿರುವ ಬಿಕೆ ಶಿವರಾಂ ಕೊನೆಯಲ್ಲಿ ʻನೀವು ಕಲ್ಪನೆ ಮಾಡಿಕೊಂಡಿರೋ ಹಾಗೆ ಆ ನಟರು ಅಂಬರೀಷ್ ಅಲ್ಲ, ವಿಷ್ಣುವರ್ಧನ್ ಕೂಡಾ ಅಲ್ಲ. ಅವರ ಮಧ್ಯೆ ಡಾ.ರಾಜ್ ಬಾಂಧವ್ಯ ಚೆನ್ನಾಗಿಯೇ ಇತ್ತು. ಅವರು ಅಂತಹ ದೊಡ್ಡ ನಟರೂ ಆಗಿರಲಿಲ್ಲʼʼ ಎಂದಿದ್ದಾರೆ. ಆದರೆ ಆ ನಟರು ಯಾರು ಅನ್ನೋದನ್ನು ಮಾತ್ರ ಹೇಳಿಲ್ಲ. ಅವರು ಈಗಲೂ ಇದ್ದಾರಂತೆ. ಡಾ.ರಾಜ್ ಕುಟುಂಬದ ಜೊತೆ ಚೆನ್ನಾಗಿಯೇ ಇದ್ದಾರಂತೆ.



