ಪುನೀತ್ ರಾಜ್ ಕುಮಾರ್ ನಿಧನರಾದ ಮೇಲೆ, ಅವರ ಇಡೀ ಕುಟುಂಬ ಇವತ್ತಿಗೂ ಆಘಾತದಲ್ಲಿದೆ. ಸಾಂತ್ವನ ಹೇಳುವವರ ಸಂಖ್ಯೆ ಕೋಟಿಗಳಲ್ಲಿದೆ. ಅದರಲ್ಲೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ದೊಡ್ಮನೆಯವರು ಪ್ರೀತಿ ಗೌರವಗಳಿಂದ ನೋಡಿಕೊಳ್ತಾರೆ. ಅಭಿಮಾನಿಗಳಂತೂ ಅಶ್ವಿನಿ ಅವರಿಗೆ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಕೊಟ್ಟಿದ್ದ ಸ್ಥಾನ ಕೊಟ್ಟಿದ್ದಾರೆ. ಇದರ ನಡುವೆ ಅಶ್ವಿನಿ ಅವರ ಮೇಲೆ ವೈಯಕ್ತಿಕ ನಿಂದನೆಗಳೂ ನಡೆಯುತ್ತಲೇ ಇವೆ.
ಆರ್.ಸಿ.ಬಿ. ಸೋತಿದ್ದಕ್ಕೂ, ಅಶ್ವಿನಿ ಅವರ ವೈಧವ್ಯಕ್ಕೂ ಲಿಂಕ್ ಮಾಡಿ ವಿಕೃತಿ ಮೆರೆದವರಿದ್ದಾರೆ. ವೈಯಕ್ತಿಕ ನಿಂದನೆಗಳು, ಅಶ್ಲೀಲ ಪೋಸ್ಟುಗಳಂತೂ ಲೆಕ್ಕವೇ ಇಲ್ಲದಷ್ಟಿವೆ. ಇದರ ನಡುವೆ ಇಲ್ಲೊಬ್ಬ ಆಸಾಮಿ ಅಶ್ವಿನಿ ಅವರಿಗೆ ಬಾಳು ಕೊಡ್ತೇನೆ ಅಂತಾ ಪೋಸ್ಟ್ ಹಾಕಿದ್ದಾನೆ.
ಯೋಗೇಂದ್ರ ಪ್ರಸಾದ್ ಎಂಬ ವ್ಯಕ್ತಿಯ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಬಾಳು ಕೊಡುತ್ತಿದ್ದೇನೆ. ‘ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 ಅಕ್ಟೋಬರ್ 2024 ರಂದು ನಾನು ವಿವಾಹವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ.
ಸ್ಥಳ ` ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಅಲ್ಲದೇ ನೇರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೇ ಟ್ಯಾಗ್ ಮಾಡಿದ್ದಾನೆ.
ವಿಡಿಯೋದಲ್ಲಿ ಅಶ್ವಿನಿಯವರು ಈತನನ್ನು ಅಪ್ಪಿಕೊಳ್ಳೋ ವಿಡಿಯೋ ಕೂಡಾ ಇದೆ. ಅವರ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ್ದಾನೆ. ವಿಡಿಯೋ ಪೋಸ್ಟ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಳಮಟ್ಟದ ಭಾಷೆ ಬಳಸಿದ್ದಾನೆ ಎನ್ನುವುದಂತೂ ಸ್ಪಷ್ಟ.
ವಿಚಿತ್ರ ಎಂದರೆ ಈ ಯೋಗೇಂದ್ರ ಯಾದವ್ ತಾನು ದೊಡ್ಮನೆಯ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಈತನಿಗೆ ತಾನೇಕೆ ಆ ಪೋಸ್ಟ್ ಮಾಡಿದೆ ಅನ್ನೋದೇ ಗೊತ್ತಿಲ್ಲವಂತೆ. ಟ್ವಿಟರ್‌ನಲ್ಲಿ ಕೇವಲ 100 ಫಾಲೋವರ್ಸ್ ಹೊಂದಿರುವ ಯೋಗೇಂದ್ರ ಪ್ರಸಾದ್ ಎಂಬ ಹೆಸರಿನ ಈ ವ್ಯಕ್ತಿ ತಾನು ರಾಜವಂಶದ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ, ಬಿನ್ನಿ ಪೇಟೆ ಘಟಕದ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದು, ತನ್ನ ಟ್ವಿಟರ್ ಪೋಸ್ಟ್ ಗಳಲ್ಲಿ ಟ್ರೋಲ್ ವಿಚಾರಗಳನ್ನು ಹಾಕಿಕೊಂಡಿದ್ದಾನೆ.
ಸಹಜವಾಗಿಯೇ ರಾಜ್ ಕುಟುಂಬದ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರ ಇಂತಹವರ ಬಗ್ಗೆ ಗಮನ ಹರಿಸುವ ಅಗತ್ಯ ಇದೆ. ಏಕೆಂದರೆ, ಈತ ಮತ್ತು ಈತನಂತಹ ವ್ಯಕ್ತಿಗಳು ರಾಜ್ಯ ಸರ್ಕಾರ ಕರ್ನಾಟಕ ರತ್ನ ಎಂದು ಗೌರವಿಸುವ ವ್ಯಕ್ತಿಯ ಕುಟುಂಬವನ್ನು ಅಶ್ಲೀಲ, ಅಸಹ್ಯ, ದುಷ್ಟತನದಿಂದ ಬೀದಿಗೆ ಎಳೆಯುತ್ತಿವೆ. ಒಬ್ಬ ಕರ್ನಾಟಕ ರತ್ನ ಪುರಸ್ಕೃತ ವ್ಯಕ್ತಿಯ ಪತ್ನಿಗೇ ಹೀಗಾದರೆ.. ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬೇಕಾದ ಅಗತ್ಯವಂತೂ ಇದೆ.
ಇದು ಹೊಸದೇನಲ್ಲ. ಪುನೀತ್ ರಾಜ್ ಕುಮಾರ್ ಅವರನ್ನು, ಶಿವಣ್ಣ ಅವರನ್ನು, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಪ್ರತಿಯೊಬ್ಬರನ್ನೂ ಈ ರೀತಿ ಪರ್ಸನಲ್ ಅಟ್ಯಾಕ್ ಮಾಡುವ ಸಂಸ್ಕೃತಿ ಹೆಚ್ಚುತ್ತಿದೆ. ಈಗ ಅದು ಅವರ ಕುಟುಂಬದ ಹೆಣ್ಣು ಮಕ್ಕಳಿಗೂ ತಟ್ಟುತ್ತಿದೆ.



