ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿ ಈಗಾಗಲೇ ಸಾವಿರ ದಿನಗಳಿಗೆ ಸಮೀಪಿಸುತ್ತಿದೆ. 2024ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್ ಆದ ದರ್ಶನ್, ಮಧ್ಯೆ ಬೇಲ್ ಪಡೆದು ಹೊರಗೆ ಬಂದರಾದರೂ, ಮತ್ತೆ ಜೈಲು ಸೇರಿದ್ದಾರೆ. ಹೀಗಿರುವಾಗ ದರ್ಶನ್ ಅವರ ಮಾನಸಿಕ ಆರೋಗ್ಯ ಹೇಗಿದೆ.. ಅವರ ಮೆಂಟಲ್ ಹೆಲ್ತ್ ಸರಿ ಇಲ್ವಂತೆ ಎಂಬ ಸುದ್ದಿಗಳು ಓಡಾಡುತ್ತಿವೆ. ಇದಕ್ಕೆಲ್ಲ ವಿಜಯಲಕ್ಷ್ಮಿ ದರ್ಶನ್ ಅವರೇ ಉತ್ತರ ಕೊಟ್ಟಿದ್ದಾರೆ.
ದರ್ಶನ್ ಜೈಲು ಸೇರಿ ತಿಂಗಳುಗಳೇ ಆಗಿ ಹೋಗಿದೆ. ಕಳೆದ ಆಗಸ್ಟ್‌ನಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್, ಹೊರಜಗತ್ತು ನೋಡಿಯೇ ಇಲ್ಲ. ಈ ಬಾರಿ ಹುಟ್ಟುಹಬ್ಬವನ್ನು ಕೂಡಾ ಜೈಲಿನಲ್ಲೇ ಸೆಲಬ್ರೇಟ್ ಮಾಡಿಕೊಳ್ಳುವಂತಾಗಿದೆ.
2024ರ ಜೂನ್ ತಿಂಗಳಿಂದ ಅಕ್ಟೋಬರ್‌ವರೆಗೆ ಸುಮಾರು 131 ದಿನ ಜೈಲಿನಲ್ಲಿದ್ದ ದರ್ಶನ್, ಹೆಚ್ಚೂ ಕಡಿಮೆ 5 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಅದಾದ ಮೇಲೆ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲಿಗೆ ಹೋಗಿದ್ದು ಆಗಸ್ಟ್ 14, 2025ರಂದು. ಈ ಎರಡನೇ ಅವಧಿಯ ಜೈಲುವಾಸ: ಸುಮಾರು 6 ತಿಂಗಳು ಅಥವಾ ಸರಿಸುಮಾರು 190-200 ದಿನಗಳು ಪೂರೈಸಿದ್ದಾರೆ.
ಮೊದಲ ಅವಧಿಯಲ್ಲಿ ಬೆಂಗಳೂರು, ಬಳ್ಳಾರಿ ಜೈಲು ಎರಡನ್ನೂ ನೋಡಿದ್ದರು. ಹೀಗೆ ಸತತವಾಗಿ ಜೈಲಿನಲ್ಲೇ ಇರುವ ದರ್ಶನ್ ಮಾನಸಿಕವಾಗಿ ಹೇಗಿದ್ದಾರೆ ಎಂಬ ಪ್ರಶ್ನೆಗೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಉತ್ತರ ಕೊಟ್ಟಿದ್ದಾರೆ.
ಡಿ ಬಾಸ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು, ನಿಮ್ಮಿಂದ ಅವರು ಚೆನ್ನಾಗಿದ್ದಾರೆ ಎಂದಿದ್ದಾರೆ ವಿಜಯಲಕ್ಷ್ಮಿ. ಇತ್ತೀಚೆಗೆ ದರ್ಶನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬೆಲ್ಲ ಮಾತುಗಳು ಹರಿದಾಡಿದ್ದವು. ಅದಕ್ಕೆಲ್ಲ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದು, ಜೈಲಿನಲ್ಲಿ ಇದ್ದಾರೆ. ಇವರ ಟ್ರಯಲ್‌ನಲ್ಲಿ ಇದ್ದು, ವಿಚಾರಣೆ ನಡೆಯುತ್ತಿದೆ. ಈ ಕೇಸ್ ಮುಗಿಯುವವರೆಗೂ ಅವರು ಜೈಲಿನಲ್ಲಿಯೇ ಇರಬೇಕಾಗುತ್ತದೆ. ಮೊದಲ ಬಾರಿ ಜೈಲಿನಲ್ಲಿದ್ದಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಬಾರಿ ದರ್ಶನ್ ಅವರಿಗೆ ಮನೆಯೂಟ ಸಿಗುತ್ತಿಲ್ಲ. ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆಗಳಿಗೂ ಕೊಕ್ ಬಿದ್ದಿದೆ. ಜೈಲಿನಲ್ಲಿ ಇದ್ದು ಹಲವು ತಿಂಗಳಾಗಿದ್ದರಿಂದ ದರ್ಶನ್ ಮಾನಸಿಕ ಸ್ಥಿತಿ ಬಗ್ಗೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಆತಂಕ ಹೊರ ಹಾಕುತ್ತಿದ್ದರು.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜುಡಿಶಿಯಲ್ ಕಸ್ಟಡಿಯಲ್ಲಿರುವ ದರ್ಶನ್, ಸದ್ಯಕ್ಕೆ ಹೊರಬರುವುದು ಅನುಮಾನ. ಚಾರ್ಜ್ ಫ್ರೇಮಿಂಗ್ ನವೆಂಬರ್ 2025ರಲ್ಲಿ ಮುಗಿದಿದೆ, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಡೈಲಿ ಟ್ರಯಲ್‌ಗೆ ಅರ್ಜಿ ಸಲ್ಲಿಸಿದ್ದಾರೆ, ಆದರೆ ಶೀಘ್ರ ಬಿಡುಗಡೆಯ ಸಾಧ್ಯತೆ ಕಡಿಮೆ ಎಂದು ವರದಿಗಳಿವೆ.



