ಒಬ್ಬ ನಟನ ಜೀವನ, ಗಳಿಸಿದ ಸ್ಟಾರ್ ಗಿರಿಗಳಿಗೆ ಸಾರ್ಥಕತೆ ಸಿಗುವುದು ಯಾವಾಗ.. ಮೊದಲು ಮೊದಲು ಖುಷಿ ಕೊಡುವ ಸಿನಿಮಾ ರಿಲೀಸ್ ಆದಾಗಿನ ಹಬ್ಬ, ಸ್ಟಾರ್ ಕಟ್ಟೋದು, ಕಟೌಟ್ ನಿಲ್ಲಿಸೋದು ಬೋರ್ ಆಗ್ತಾ ಹೋದಂತೆ, ಬೇರೇನೋ ಬೇಕು ಅನ್ನಿಸೋಕೆ ಶುರುವಾಗುತ್ತೆ. ಹಾಗೆ ನೋಡಿದ್ರೆ ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳು ಕೇವಲ ಅಭಿಮಾನಿಗಳ ಸಂಘಗಳಾಗದೆ ಉಳಿದುಕೊಂಡಿವೆ (ಎಲ್ಲ ಸಂಘಗಳೂ ಅಲ್ಲ). ಅಂತದ್ದೇ ಹಾದಿಯಲ್ಲಿ ಹೋಗ್ತಿರೋದು ಕಿಚ್ಚ ಸುದೀಪ್ ಫ್ಯಾನ್ಸ್.
ಕಿಚ್ಚ ಸುದೀಪ್ ಹಲವಾರು ರೀತಿಯಲ್ಲಿ ಸಮಾಜಸೇವೆ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ, ಮನೆ ಕಟ್ಟಿಸುವುದು, ಆರೋಗ್ಯ, ಶಿಕ್ಷಣಕ್ಕೆ ನೆರವು ನೀಡುವುದು.. ಇಂಥದ್ದೇ ಹಲವು ಸಮಾಜಸೇವೆಗಳಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ಸುದೀಪ್ ಅಭಿಮಾನಿಗಳು ಕೂಡಾ ತಾವು ಮೆಚ್ಚುವ ಸ್ಟಾರ್ ನಟನಿಗಿಂತ ಕಡಿಮೆ ಇಲ್ಲ. ಅವರದ್ಧೆ ಹಾದಿಯಲ್ಲಿ ಸಾಗುತ್ತಿದ್ಧಾರೆ ಕೂಡಾ. ಇದು ಅಂತಹ ಸುದೀಪ್ ಅಭಿಮಾನಿಗಳ ಸಂಘದ ಸೇವೆಯ ಸ್ಟೋರಿ.
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್. ಇದು ಸುದೀಪ್ ಅಭಿಮಾನಿಗಳೇ ಕಟ್ಟಿಕೊಂಡಿರುವ ಟ್ರಸ್ಟ್. ಈ ಟ್ರಸ್ಟ್ ಈಗಾಗಲೇ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ನೆರವಾಗಿದೆ. ಈಗ ಸುದೀಪ್ ನಟಿಸುತ್ತಿರುವ ‘ಮ್ಯಾಕ್ಸ್’ ಸಿನಿಮಾದ ಹೆಸರಿನಲ್ಲೇ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿ ಸಮಾಜಸೇವೆಯ ಮತ್ತೊಂದು ಹೆಜ್ಜೆ ಇಟ್ಟಿದೆ.
ಕಿಚ್ಚ ಸುದೀಪ್ ಅವರ ಮೂಲಕವೇ ಆಂಬುಲೆನ್ಸ್ʻಗೆ ಚಾಲನೆ ಕೊಟ್ಟಿದ್ದು, ಸುದೀಪ್, ಪ್ರಿಯಾ ಸುದೀಪ್ ಅವರಿಂದಲೇ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. ಇದೆಲ್ಲವೂ ಮ್ಯಾಕ್ಸ್ ಸಿನಿಮಾ ಹೆಸರಲ್ಲಿ. ಸದ್ಯಕ್ಕೆ ಮ್ಯಾಕ್ಸ್ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದೆ. . ತಮಿಳಿನ ಖ್ಯಾತ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾಗೆ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ‘ವಿ. ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಕಲೈಪುಲಿ ಎಸ್. ಧಾನು ನಿರ್ಮಾಣದ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಕಾಮರಾಜ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ನಟಿಸಿದ್ದಾರೆ.



