ಕಳೆದ ವರ್ಷ ಅ.28ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ 17.7 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್‌ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿದ್ದರು. ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಕಿಂಚಿತ್ತೂ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಖಾಲಿ ಆದ ಕೆರೆಯಿಂದಾಗಿ ಕಳ್ಳರ ಅಂದರೆ ದರೋಡೆಕೋರರ ಸುಳಿವು ಸಿಕ್ಕು, ದರೋಡೆಕೋರರು ಅರೆಸ್ಟ್ ಆಗಿದ್ದಾರೆ.
ನ್ಯಾಮತಿಯಲ್ಲಿ ವಿಐಪಿ ಸ್ನ್ಯಾಕ್ಸ್ ಅಂಡ್ ಸ್ವೀಟ್ಸ್ ಬೇಕರಿ ನಡೆಸುತ್ತಿದ್ದ ವಿಜಯ್ ಕುಮಾರ್ (30), ಆತನ ಸಹೋದರ ಅಜಯ್ ಕುಮಾರ್ (28), ಸಂಬಂಧಿ ಪರಮಾನಂದ (30), ನ್ಯಾಮತಿ ಶಾಂತಿನಗರ ಶಾಲೆ ಎದುರಿನ ಬೆಳಗುತ್ತಿ ಕ್ರಾಸ್ ನಿವಾಸಿ, ಪೇಟಿಂಗ್ ಕೆಲಸಗಾರ ಅಭಿಷೇಕ್ (23), ಸುರಹೊನ್ನೆ ಶಾಂತಿ ನಗರದ ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು. ಇವರಲ್ಲಿ ವಿಜಯ್ ಕುಮಾರ್ ಮತ್ತು ಅಜಯ್ ಕುಮಾರ್ ಇಬ್ಬರೂ ತಮಿಳುನಾಡಿನ ಮದುರೈ ಮೂಲದವರು. ದಾವಣಗೆರೆಗೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದವರು.
ಖಾಲಿಯಾದ ಕೆರೆಯಲ್ಲಿ ಕಂಡಿತು ನಜ್ಜುಗುಜ್ಜಾದ ಸಿಲಿಂಡರ್..!
ಮೊದಲ ಆರೋಪಿ ವಿಜಯಕುಮಾರ್ ಗ್ಯಾಸ್ ಕಟರ್ ಬಳಸುವುದಕ್ಕೆಂದು ಶಿವಮೊಗ್ಗದಲ್ಲಿ ಸಿಲಿಂಡರ್ ಖರೀದಿಸಿದ್ದ. ಈ ವೇಳೆ ಆಧಾರ್ ಕಾರ್ಡ್ ಕೊಟ್ಟಿದ್ದ. ಆದರೆ ಸಿಲಿಂಡರ್ ವಾಪಸ್ ಕೊಟ್ಟಿರಲಿಲ್ಲ. ಬ್ಯಾಂಕ್ ದರೋಡೆ ಬಳಿಕ ಸಿಲಿಂಡರ್ ಅನ್ನು ನಜ್ಜುಗುಜ್ಜು ಮಾಡಿ ನೀರು ತುಂಬಿದ್ದ ಕೆರೆಗೆ ಎಸೆದಿದ್ದರು. ಬೇಸಿಗೆಯಿಂದಾಗಿ ಕೆರೆ ಒಣಗಿದ್ದರಿಂದ ಸಿಲಿಂಡರ್ ಪತ್ತೆಯಾಗಿತ್ತು.
ಸಾಮಾನ್ಯವಾಗಿ ಸಿಲಿಂಡರನ್ನು ಹಾಗೆ ಎಸೆಯುವುದಿಲ್ಲ. ಸ್ಕ್ರಾಪ್‌ಗೆ ಹಾಕುತ್ತಾರೆ. ಅಥವಾ ಸಿಲಿಂಡರ್ ಏಜೆನ್ಸಿಯವರೇ ಕೊಂಡುಕೊಳ್ಳುತ್ತಾರೆ. ಸಿಲಿಂಡರ್‌ನ್ನು ನಜ್ಜುಗುಜ್ಜು ಮಾಡಿ ಕೆರೆಗೆ ಎಸೆದಿರುವುದನ್ನ ಕಂಡ ಪೊಲೀಸರು, ಯಾವುದಕ್ಕೂ ಇರಲಿ, ಎಂದು ವಿಚಾರಣೆ ನಡೆಸಿದಾಗ.. ನಂಬರ್ ಸಿಕ್ಕಿದೆ. ಆ ನಂಬರ್ ಬೆನ್ನು ಹತ್ತಿದಾಗ.. ವಿಜಯ್ ಕುಮಾರ್ ಅಡ್ರೆಸ್ ಸಿಕ್ಕಿದೆ. ಅಲ್ಲದೆ ಅದು ಬ್ಯಾಂಕ್ ದರೋಡೆಗಿಂತ ಹಿಂದಿನ ದಿನ ಖರೀದಿ ಮಾಡಿದ್ದು ಎಂದು ಗೊತ್ತಾದಾಗ ಪೊಲೀಸರು ಅಲರ್ಟ್ ಆಗಿದ್ದಾರೆ. ಜೊತೆಗೆ ಬ್ಯಾಂಕ್ ದರೋಡೆ ವೇಳೆ ಬಳಸಿದ್ದ ಕಾರದ ಪುಡಿ ಪ್ಯಾಕೇಟ್ ಮೇಲೆ ಇದ್ದ ಒಂದು ಹೆಸರು ಕೂಡಾ ಇದು ಸ್ಥಳೀಯರೇ ಮಾಡಿರುವ ಕೃತ್ಯ ಎಂದು ಗೊತ್ತಾಗಿದೆ. ಏಕೆಂದರೆ ನಾಯಿಗಳಿಗೆ ಸಿಗಬಾರದು ಎಂದು ದರೋಡೆಕೋರರು ಕಾರದ ಪುಡಿ ಎಸೆದು, ಪ್ಯಾಕೆಟ್ ಅಲ್ಲಿಯೇ ಬಿಟ್ಟಿದ್ದರು. ಆ ಪ್ಯಾಕೆಟ್ ದಾವಣಗೆರೆಯ ಲೋಕಲ್ ಬ್ರಾಂಡಿನದ್ದಾಗಿತ್ತು.
ಸಾಲ ಕೊಡಲಿಲ್ಲ ಎಂದು ದರೋಡೆ ಮಾಡಿದರಂತೆ..!
1ನೇ ಆರೋಪಿ ವಿಜಯಕುಮಾರ ಸುರಹೊನ್ನೆ ಶಾಂತಿ ನಗರದ ನಿವಾಸಿ. ಬೇಕರಿ ನಡೆಸುತ್ತಿದ್ದ ವಿಜಯ್ ಕುಮಾರ್ವ್ಯಾ ಪಾರ ಅಭಿವೃದ್ಧಿಪಡಿಸಲು ₹14 ಲಕ್ಷ ಸಾಲಕ್ಕಾಗಿ ಮಾರ್ಚ್ 2023ರಲ್ಲಿ ನ್ಯಾಮತಿ ಎಸ್‌ಬಿಐಗೆ ಅರ್ಜಿ ಸಲ್ಲಿಸಿದ್ದ. ಸಿಬಿಲ್ ಸ್ಕೋರ್ ಇರಲಿಲ್ಲ. ಹೀಗಾಗಿ ಅರ್ಜಿ ರಿಜೆಕ್ಟ್ ಆಗಿತ್ತು. ಅನಂತರ ತಮ್ಮ ಸಂಬಂಧಿಗಳ ಹೆಸರಿನಲ್ಲಿ ಸಾಲಕ್ಕೆ ಅದೇ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದರೂ ಅರ್ಜಿ ತಿರಸ್ಕೃತವಾಗಿದ್ದವು. ಇದೇ ಬ್ಯಾಂಕ್ ದರೋಡೆಗೆ ಕಾರಣವಂತೆ.
ಸಿನಿಮಾ ನೋಡಿ ಸ್ಕೆಚ್..!
6 ತಿಂಗಳ ಮುಂಚೆಯಿಂದಲೇ ಕೃತ್ಯಕ್ಕೆ ಅಗತ್ಯವಾದ ಸಲಕರಣೆಗಳನ್ನು ಶಿವಮೊಗ್ಗ, ನ್ಯಾಮತಿ ಪಟ್ಟಣದಿಂದ ಸಂಗ್ರಹಿಸಿ ತಂದಿಟ್ಟುಕೊಂಡಿದ್ದ ಗ್ಯಾಂಗ್, ಕಳ್ಳತನಕ್ಕೆ ಸಂಬಂಧಿಸಿದ ಅನೇಕ ಸರಣಿ ವಿಡಿಯೋಗಳನ್ನು ಯುಟ್ಯೂಬ್, ವಿವಿಧ ಒಟಿಟಿ ಪ್ಲಾಟ್‌ಫಾರಂ, ನೆಟ್ ಫ್ಲಿಕ್ಸ್‌ನಲ್ಲಿ ಮನಿ ಹೈಸ್ಟ್ ಸೇರಿದಂತೆ ಹಲವನ್ನು ನೋಡಿದ್ದರು. ಮನಿ ಹೈಸ್ಟ್ ಸಿರೀಸ್‌ನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿ ಸ್ಕೆಚ್ ಹಾಕಿದ್ದರಂತೆ.
ಆರೂ ಜನ ಮಂಕಿ ಕ್ಯಾಪ್, ಗ್ಲೌಸ್, ಬ್ಲಾಕ್ ಶರ್ಟ್, ಪ್ಯಾಂಟ್‌ಗಳನ್ನು ಮಾರುಕಟ್ಟೆಯಿಂದ ಖರೀದಿಸಿ, ಆನಂತರ ನಾಶ ಮಾಡಿದ್ದರಂತೆ. ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಚಿನ್ನವನ್ನು ವಿಜಯಕುಮಾರ ತನ್ನ ಮನೆಯಲ್ಲಿದ್ದ ಸಿಲ್ವರ್ ಬಣ್ಣದ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ ಗ್ಯಾಂಗ್, ಇನ್ನುಳಿದ ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಇತರೆ ವಸ್ತುಗಳನ್ನು ಸವಳಂಗ ಕೆರೆ ಎಸೆದಿದ್ದರು. ಎಸ್‌ಬಿಐನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಮೊದಲು ಕಲ್ಲಿನಿಂದ ಜಜ್ಜಿ, ಹಾಳು ಮಾಡಿ, ಕೆರೆಗೆ ಎಸೆದಿದ್ದರು.
ಎಲ್ಲಿತ್ತು ಚಿನ್ನ..?
ವಿಜಯಕುಮಾರ್ ತನ್ನ ಸ್ವಂತ ಊರಾದ ತಮಿಳುನಾಡಿನ ಮದುರೈನ ಮನೆಯ ಪಕ್ಕದ ಬಾವಿಯಲ್ಲಿಟ್ಟಿದ್ದ. ಮಧುರೈನ ಮನೆ, ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿದೆ. ಸುತ್ತಲೂ ದಟ್ಟ ಅರಣ್ಯವಿದೆ. ಅಲ್ಲಿದ್ದ 25-30 ಅಡಿ ಆಳದ ಬಾವಿಗೆ ಒಂದು ಸಣ್ಣ ಲಾಕರ್‌ಗೆ ಚಿನ್ನ ತುಂಬಿ, ಅದಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಯಾರಿಗೂ ಕಾಣದಂತೆ ಇಳಿಬಿಟ್ಟು, ಬಚ್ಚಿಟ್ಟಿದ್ದ. ಕದ್ದ ಚಿನ್ನದಲ್ಲಿ ಸ್ವಲ್ಪ ಭಾಗವನ್ನಷ್ಟೇ ತೆಗೆದುಕೊಂಡು, ಬ್ಯಾಂಕ್‌ಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಅವನ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಅಡವಿಟ್ಟು ಹಣ ಪಡೆದಿದ್ದ. ಅದರಲ್ಲಿ ಅಭಿ, ಚಂದ್ರು, ಮಂಜುನಾಥನಿಗೆ ತಲಾ ₹1 ಲಕ್ಷದಂತೆ ಕೊಟ್ಟು, ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿ, ನಿವೇಶನ ಖರೀದಿಸಿದ್ದ. ತಮ್ಮ ಸಂಬಂಧಿಗಳಿಗೆ ಸ್ವಲ್ಪ ಚಿನ್ನ ಕೊಟ್ಟಿದ್ದ. ಉಳಿದ ಚಿನ್ನ 2-3 ವರ್ಷದವರೆಗೂ ತೆಗೆಯಬಾರದೆಂದು, ಪೊಲೀಸರು ಪ್ರಕರಣದ ತನಿಖೆ ಅಥವಾ ವಿಚಾರಣೆ ನಿಲ್ಲಿಸಿದಾಗ ಅದನ್ನು ತೆಗೆಯುವುದಾಗಿ ಹೇಳಿದ್ದನು. ಬಾವಿಯಲ್ಲಿ ಚಿನ್ನ ಬಚ್ಚಿಟ್ಟಿದ್ದ ವಿಚಾರ ವಿಜಯ ಕುಮಾರನಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಪೊಲೀಸರು ಚಿಕಿತ್ಸೆ ನೀಡಿ ಬಾಯಿ ಬಿಡಿಸಿದ್ದಾರೆ.



