ಬಾಂಗ್ಲಾದೇಶದಲ್ಲಿ ಶ್ರೀಮಂತರು ಸೇಫ್ ಅಲ್ಲ. ರಾಜಕೀಯ ನಾಯಕರು ಸೇಫ್ ಅಲ್ಲ. ವ್ಯಾಪಾರಿಗಳು ಸೇಫ್ ಅಲ್ಲ. ಹಾಗಂತ ಬಡವರು ಸುರಕ್ಷಿತವಾಗಿದ್ದಾರಾ.. ಅದೂ ಇಲ್ಲ. ಅಂಗಡಿಗಳು ಸೇಫ್ ಅಲ್ಲ. ಪೊಲೀಸರೂ ಸೇಫ್ ಅಲ್ಲ. ಇದೀಗ ಆ ಲಿಸ್ಟಿಗೆ ದೇವಸ್ಥಾನಗಳೂ ಸೇರ್ಪಡೆಯಾಗಿವೆ. ಇದು ಈ ಹಿಂದೆಯೂ ಇತ್ತಾದರೂ, ಅದು ದೇವರ ಆಭರಣಗಳನ್ನೇ ಕದ್ದೊಯ್ಯುವ ಮಟ್ಟಕ್ಕೆ ಇರಲಿಲ್ಲ. ಬಾಂಗ್ಲಾದೇಶದ ಸತ್ಖೀರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿದ್ದ ನೀಡಿದ್ದ ಕಾಳಿ ಮಾತೆಯ ಕಿರೀಟವನ್ನೇ ಕದ್ದಿದ್ದಾರೆ ಕಳ್ಳರು.
ಪ್ರಧಾನಿ ನರೇಂದ್ರ ಮೋದಿ ಅವರು 2021ರ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೆಶೋರೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ಕಾಳಿ ಮಾತೆಗೆ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದರು. ಈ ಕಿರೀಟವನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಚಿನ್ನದ ಲೇಪನ ಹೊಂದಿತ್ತು.
ಗುರುವಾರ ಬೆಳಗ್ಗೆ ಪೂಜೆ ಮಾಡಿ ಹೋದ ದೇವಸ್ಥಾನದ ಅರ್ಚಕರು ಸಂಜೆ ಹೊತ್ತಿಗೆ ಬಂದು ಬಾಗಿಲು ತೆರೆದಾಗ ಕಿರೀಟ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಕಿರೀಟ ಕಳವಿಗೆ ಕಳವಳ ವ್ಯಕ್ತಪಡಿಸಿದೆ. ಕೂಡಲೇ ಪ್ರಕರಣದ ತನಿಖೆ ನಡೆಸುವಂತೆ ಮತ್ತು ಕಳುವಾದ ಕಿರೀಟವನ್ನು ಪತ್ತೆ ಮಾಡುವಂತೆ ಬಾಂಗ್ಲಾದೇಶ ಸರ್ಕಾರಕ್ಕೆ ಮನವಿ ಮಾಡಿದೆ.
ದೇವಸ್ಥಾನದಲ್ಲಿ ಬಹು ಉದ್ದೇಶದ ಸಮುದಾಯ ಸಭಾಂಗಣವನ್ನು ಭಾರತ ನಿರ್ಮಿಸಿ ಕೊಡಲಿದೆ ಎಂದು ದೇಗುಲ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಸಭಾಂಗಣವನ್ನು ಸ್ಥಳೀಯ ಜನರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಆಗಬೇಕು. ಅಲ್ಲದೆ, ಅದು ಸೈಕ್ಲೋನ್‌ನಂತಹ ಪ್ರಕೃತಿಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಎಲ್ಲ ಜನರಿಗೂ ಆಶ್ರಯ ಕಲ್ಪಿಸುವಂತೆ ಇರಬೇಕು ಎಂದು ಮೋದಿ ಹೇಳಿದ್ದರು.
51 ಶಕ್ತಿಪೀಠಗಳಲ್ಲಿ ಒಂದು ಜೇಶೋಶ್ವರಿ ದೇವಾಲಯ :
ಜೇಶೋಶ್ವರಿ ದೇವಾಲಯ 12ನೇ ಶತಮಾನದ್ದು. ಭಾರತ ಹಾಗೂ ನೆರೆಯ ದೇಶಗಳಲ್ಲಿ ಈ ದೇವಿಯ ಹೆಸರಿನ 51 ದೇವಸ್ಥಾನಗಳಿವೆ. ದೇವಸ್ಥಾನವನ್ನು ಒಬ್ಬ ಬ್ರಾಹ್ಮಣ ಕಟ್ಟಿಸಿದ್ದನೆಂಬ ಪ್ರತೀತಿಯಿದೆ. 13ನೇ ಶತಮಾನದಲ್ಲಿ ಆ ಪ್ರಾಂತ್ಯವನ್ನು ಆಳುತ್ತಿದ್ದ ಮಹಾರಾಜ ಲಕ್ಷ್ಮಣಸೇನ್ ಎಂಬಾತ ಇದರ ಜೀರ್ಣೋದ್ಧಾರ ಮಾಡಿದ್ದ. ಪುನಃ 16ನೇ ಶತಮಾನದಲ್ಲಿ ಆಗಿನ ಮಹಾರಾಜ ರಾಜಾ ಪ್ರತಾಪಾದಿತ್ಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದ. ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇವಸ್ಥಾನವನ್ನು ಭಾರತ ಹಾಗೂ ನೆರೆಯ ದೇಶಗಳ ವಿವಿಧೆಡೆ ಸ್ಥಾಪಿಸಲಾಗಿರುವ 51 ಶಕ್ತಿ ಪೀಠಗಳ ಪೈಕಿ ಒಂದು ಎಂದು ಪೂಜಿಸಲಾಗುತ್ತಿದೆ.
ಘಟನೆ ಆಕಸ್ಮಿಕವಲ್ಲ. ಸಂಚು : ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ಕಳವು ಮಾಡಲಾಗಿರುವ ಬೆನ್ನಲ್ಲೇ ನವರಾತ್ರಿ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ದುರ್ಗಾಪೂಜೆ ಪೆಂಡಾಲ್‌ಗಳ ಮೇಲೆ 35ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇದರ ಬೆನ್ನಲ್ಲೇ ಬೆಳವಣಿಗೆಯನ್ನು ಅತ್ಯಂತ ಗಂಭೀರ ಮತ್ತು ವ್ಯವಸ್ಥಿತ ರೀತಿಯ ದಾಳಿ ಎಂದು ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಹಿಂದೂಗಳ ಭದ್ರತೆ ಮತ್ತು ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದೆ.
ಈ ನಡುವೆ ಅ.1ರಿಂದ ಬಾಂಗ್ಲಾದೇಶದಾದ್ಯಂತ ದುರ್ಗಾ ಪೂಜೆ ಪೆಂಡಾಲ್‌ಗಳ ಮೇಲೆ ದಾಳಿಯ 35 ಘಟನೆಗಳು ನಡೆದಿವೆ. ಘಟನೆಗಳ ಸಂಬಂಧ 11 ಪ್ರಕರಣ ದಾಖಲಾಗಿದ್ದು, 17 ಜನರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ.



