ನಮ್ಮ ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರವನ್ನು ಮೆಚ್ಚಿಕೊಳ್ತಿದ್ದಾರೆ. ಎಲ್ಲ ಭಾಷೆಗಳಲ್ಲೂ ಒಳ್ಳೆಯ ರಿಪೋರ್ಟ್ ಬರ್ತಾ ಇದೆ. ಸಿನಿಮಾ ಬಿಡುಗಡೆ ದಿನವೇ ಚಿತ್ರದ ಬಗ್ಗೆ ಕೆಲವರು ಸುಳ್ಳು ಸುಳ್ಳೇ ಮಾತನಾಡಿ, ಚಿತ್ರದ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿದರು. ಅವರು ಯಾರೇ ಆಗಿರಲಿ, ಬೇರೆ ಹೀರೋ ಅಭಿಮಾನಿಗಳೇ ಆಗಿರಲಿ.. ನನ್ನನ್ನು ದ್ವೇಷಿಸುವವರಿಗೂ ನಾನಂದ್ರೆ ತುಂಬಾ ಇಷ್ಟ. ಅವರು ಬಂದು ನನ್ನ ಸಿನಿಮಾ ನೋಡಿದ್ದಾರೆ. ದುಡ್ಡು ಖರ್ಚು ಮಾಡಿ ಸಿನಿಮಾ ನೋಡಿದ್ದಾರೆ. ಟ್ರೋಲ್ ಮಾಡ್ತಿದ್ದಾರೆ. ಆದರೆ ಸಿನಿಮಾ ಹೇಗಿದೆ ಅನ್ನೋದು ಜನಕ್ಕೆ ಗೊತ್ತಾಗಿದೆ ಎಂದಿದ್ದಾರೆ ಧ್ರುವ ಸರ್ಜಾ.
ನಾನು ಆಗಲೇ ಸೂಕ್ಷ್ಮವಾಗಿ ಹೇಳಿದೆ. ಕರ್ನಾಟಕದ ಜನರಿಗೆ ಸ್ವಂತ ಬುದ್ಧಿಯಿದೆ. ಸಿನಿಮಾ ಎಲ್ಲರೂ ನೋಡುತ್ತಿದ್ದಾರೆ. ಅವರು ಆಶೀರ್ವಾದ ಮಾಡುತ್ತಿದ್ದಾರೆ. ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ತುಂಬಾ ಸಮಯದ ಸ್ಪೆಂಡ್ ಮಾಡಿ, ಪೆಟ್ರೋಲ್ ಹಾಕಿಸಿಕೊಂಡು, ಟೈಮ್ ಕೊಟ್ಟು ಚೆನ್ನಾಗಿಲ್ಲ ಅಂತ ಹೇಳುವುದಕ್ಕೆ ನಮಗೋಸ್ಕರ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ ಅಂದರೆ, ಅವರಿಗೆ ಅವರ ಹೀರೋಗಿಂತ ನಾನು ಅಂದರೇನೆ ಇಷ್ಟ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಎಂದಿದ್ದಾರೆ ಧ್ರುವ.
ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಚಿತ್ರ ಹಲವು ಭಾಷಗಳಲ್ಲಿ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಜೊತೆಗೆ ಚಿತ್ರದ ಬಗ್ಗೆ ನೆಗೆಟಿವ್ ಪ್ರಚಾರವೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರ ಪ್ರೆಸ್ ಮೀಟ್ ಕರೆದು ಮಾಹಿತಿ ಹಂಚಿಕೊಂಡಿದೆ. ಹೀರೋ ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್, ನಾಯಕಿ ವೈಭವಿ ಶಾಂಡಿಲ್ಯ, ಉದಯ್ ಕೆ ಮೆಹ್ತಾ ಅವರ ಪುತ್ರ ಸೂರಜ್ ಮೆಹ್ತಾ, ಛಾಯಾಗ್ರಹಕ ಸತ್ಯ ಹೆಗಡೆ ಸೇರಿದಂತೆ ಇಡೀ ಚಿತ್ರತಂಡವೇ ಪತ್ರಕರ್ತರ ಎದುರು ಹಾಜರಾಗಿ ಮಾರ್ಟಿನ್ ಚಿತ್ರದ ಕಲೆಕ್ಷನ್ ಇತ್ಯಾದಿಗಳ ಬಗ್ಗೆ ಹೇಳಿಕೊಂಡಿದ್ದಾರೆ.
‘ಮಾರ್ಟಿನ್’ ವಿಮರ್ಶೆ ಬಗ್ಗೆ ಹೇಳಿಕೊಂಡಿರುವ ಧ್ರುವ ಸರ್ಜಾ ತುಂಬಾ ಚೆನ್ನಾಗಿ ವಿಮರ್ಶೆ ಬರೆದರೆ ಮಾತ್ರ ಗುಡ್. ಕೆಟ್ಟದಾಗಿ ವಿಮರ್ಶೆ ಬರೆದರೆ ಬ್ಯಾಡ್ ಅಂತ ಹೇಳುವ ಕ್ಯಾಟಗರಿ ನಮ್ಮದಲ್ಲ. ಪಾಸಿಟಿವ್ ಆಗಿದ್ದರೂ ತಗೋತೀವಿ. ನೆಗೆಟಿವ್ ಆಗಿದ್ದರೂ ತಗೋತಿವಿ. ಆದರೆ, ಬೇಕು ಬೇಕು ಅಂತಾನೇ ಮಾಡುತ್ತಾರಲ್ಲ. ಅದನ್ನು ತೆಗೆದುಕೊಳ್ಳುವುದಿಲ್ಲ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಎಂದಿದ್ದಾರೆ. ಆಯುಧಪೂಜೆಯ ದಿನ ರಿಲೀಸ್ ಆದ ಮಾರ್ಟಿನ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆಯೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಎಂಬ ಸುದ್ದಿಯಂತೂ ಇದೆ.



