ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಟ್ಟರೂ, ಡಿಕೆಶಿ (DK shivakumar) ಸಿಎಂ ಆಗುವುದು ಸುಲಭ ಅಲ್ಲ. ಹಾಗಿದೆ ಪರಿಸ್ಥಿತಿ. ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿರುವಾಗಲೇ, ಸಿದ್ದರಾಮಯ್ಯ ನಿರ್ಗಮನದ ಮಾತು ಜೋರಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಅರ್ಧ ವರ್ಷವೂ ಆಗಿಲ್ಲ. ಆಗಲೇ ಡಿಕೆ ಶಿವಕುಮಾರ್ ಅವರಿಗೆ ಕಾರ್ಯಕರ್ತರು ಮುಖ್ಯಮಂತ್ರಿ ಪಟ್ಟ ಕಟ್ಟಿದ್ದಾರೆ. ಡಿಕೆ ಪರ ಬೆಂಬಲಿಗರು ಡಿಕೆ ಶಿವಕುಮಾರ್ ಸಿಎಂ ಆಗಲಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಪರ ಬೆಂಬಲಿಗರು ಐದೂ ವರ್ಷ ನಮ್ಮ ಸಿದ್ದರಾಮಣ್ಣನೇ ಸಿಎಂ ಎನ್ನುತ್ತಿದ್ದಾರೆ. ಸಿದ್ದು ಬಣದ ಕೆಲವರು ಆದಾಗಲೇ ಪರಮೇಶ್ವರ್ ಹೆಸರು ತೇಲಿಬಿಟ್ಟಿದ್ದಾರೆ. ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ.. ಹೀಗೆ ಇನ್ನೂ ಹಲವರು ಸಿದ್ಧರಿದ್ದಾರೆ. ಸೌಂಡ್ ಮಾತ್ರ ಬೊಂಬಾಟ್ ಆಗಿದೆ. ಪಟಾಕಿ ಸುರ್ ಸುರ್ ಅಂತಿದೆ. ಆದರೆ ಸಿಡಿಯುವ ಲಕ್ಷಣಗಳಿಲ್ಲ. ಹಾಗಂತ.. ಸುಮ್ಮನೆ ಇದ್ದರೂ.. ಎಲ್ಲಿಯೂ ಅಡಗಿರುವ ಮದ್ದು ಸ್ಫೋಟಿಸಿದರ್ ಆಶ್ಚರ್ಯವಿಲ್ಲ.
ಸಿದ್ದರಾಮಯ್ಯ (ಬಳ್ಳಾರಿಯಲ್ಲಿ) : ಮಾಡುವುದಕ್ಕೆ ಕೆಲಸ ಇಲ್ಲದವರು ಸಿಎಂ ಬದಲಾವಣೆ ಮಾತು ಹೇಳ್ತಿದ್ದಾರೆ. ಐದೂ ವರ್ಷ ನಮ್ಮದೇ ಸರ್ಕಾರ ಇರುತ್ತೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ.
ಸಿದ್ದರಾಮಯ್ಯ (ಗದಗ್ʻನಲ್ಲಿ) : ನಾನು ಹೇಳಿದ್ದೇ ಬೇರೆ. ಮಾಧ್ಯಮಗಳು ತಿರುಚಿ ವರದಿ ಮಾಡಿವೆ. ಹೈಕಮಾಂಡ್ ಒಪ್ಪಿದರೆ ನಾನು 5 ವರ್ಷ ಸಿಎಂ ಆಗಿರುತ್ತೇನೆ.
ಡಿಕೆ ಶಿವಕುಮಾರ್ : ಯಾರು ಏನು ಹೇಳ್ತಾರೊ..ಎಲ್ಲರಿಗೂ ಒಳ್ಳೆಯದಾಗಲಿ.
ಕೆಎನ್ ರಾಜಣ್ಣ : KN Rajanna ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ನಾನು ಸಿದ್ದರಾಮಯ್ಯ ಬೆಂಬಲಿಗ. ಸಿದ್ದರಾಮಯ್ಯ ಬದಲಾವಣೆ ಆದರೆ ನಾನು ಪರಮೇಶ್ವರ್ ಸಿಎಂ ಅಗುವುದಕ್ಕೆ ಬೆಂಬಲ ಕೊಡುತ್ತೇನೆ.
ಪರಮೇಶ್ವರ್ : parameshwar ರಾಜಣ್ಣ ಅವರ ಮಾತಿನಿಂದ ಸಂತೋಷವಾಗಿದೆ. ಕಾಲ ಕೂಡಿ ಬಂದಾಗ ಆಗಿಯೇ ಆಗುತ್ತದೆ. ಆದರೆ ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ.
ಪ್ರಿಯಾಂಕ್ ಖರ್ಗೆ : Priyank kharge ಹೈಕಮಾಂಡ್ ಯಾರು ಸಿಎಂ ಆಗಬೇಕು, ಮುಂದುವರೆಯಬೇಕು ಎಂಬುದನ್ನ ನಿರ್ಧರಿಸುತ್ತೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೂ ನಾನು ಸಿದ್ಧನಿದ್ದೇನೆ .
ಕೆಎಂ ಉದಯ್ : KM uday ಸಿಎಂ ಬದಲಾವಣೆ ಆದರೆ ಡಿಕೆಶಿಗೆ ನನ್ನ ಬೆಂಬಲ
ಇಕ್ಬಾಲ್ ಹುಸೇನ್ : Iqbal Hussain ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ ಯಾವ ಅಸಮಾಧಾನವೂ ಇಲ್ಲ. ನಮ್ಮ ನಾಯಕರೂ ಬೆವರು ಸುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ನಾವೆಲ್ಲರು ಅವಕಾಶ ಕೊಡಬೇಕೆಂದು ಕೇಳುವುದರಲ್ಲಿ ತಪ್ಪೇನಿದೆ. ಒಂದೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗಲಿ.
ಮಧು ಬಂಗಾರಪ್ಪ : Madhu Bangarappa ಯಾವಾಗ ಯಾರು ಮುಖ್ಯಮಂತ್ರಿಗಳಾಗಬೇಕು,ಯಾರು ಸಚಿವರಾಗಬೇಕು ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಈ ವಿಷಯದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
ಹೆಚ್.ಸಿ.ಮಹದೇವಪ್ಪ : HC Mahadevappa ಮುಂದೆ ಏನಾಗಬೇಕು, ಏನಾಗಬಾರದು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡತ್ತೆ. ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಹುದ್ದೆ ಖಾಲಿ ಇಲ್ಲ.
ಜಮೀರ್ ಅಹ್ಮದ್ : Zameer Ahmad ಪವರ್ ಶೇರಿಂಗ್ ಬಗ್ಗೆ ಯಾವುದೇ ಚರ್ಚೆ ಅಗಿಲ್ಲ. ಇದು ಮಾಧ್ಯಮಗಳ ಸೃಷ್ಟಿ, ನಾನು ಯಾವತ್ತೂ ಸಿದ್ದರಾಮಯ್ಯ ಪರವಾಗಿ ಇರುತ್ತೇನೆ. ಇವತ್ತು ನಾನು ಸಿದ್ದರಾಮಯ್ಯ ಪರನೇ ಇದ್ದೇನೆ. ನಾನು ತೀರ್ಮಾನ ತೆಗೆದುಕೊಳ್ಳಲು ಆಗುತ್ತದೆಯೇ? ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ನಾವು ಬದ್ಧ.
ಹೀಗೆ ಹೇಳಿಕೆಗಳಮೇಲೆ ಹೇಳಿಕೆಗಳು ಬರುತ್ತಿವೆ. ಮೇಲ್ನೋಟಕ್ಕೆ ರಾಜಕೀಯ ಪಂಡಿತರ ಪ್ರಕಾರ ಇದೆಲ್ಲದರ ಹಿಂದೆ ಚದುರಂಗವೇ ನಡೆಯುತ್ತಿದೆ. ಆದರೆ ಚೆಕ್ ಮೇಟ್ ಯಾರ್ ಇಡ್ತಾರೆ ಅನ್ನೋದು ಸುಲಭಕ್ಕೆ ಗೊತ್ತಾಗುತ್ತಿಲ್ಲ.



