ಒಂದು ಘಟನೆ.. ಹಲವರ ಬದುಕು ತಿದ್ದಿಕೊಳ್ಳೋಕೆ ಕಾರಣವಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಇಂತಹವು ನಡೆಯುತ್ತಿರುತ್ತವೆ. ಕೆಲವರು ಎಚ್ಚೆತ್ತುಕೊಳ್ಳುತ್ತಿರುತ್ತಾರೆ. ಕೆಲವರು ಇನ್ನಷ್ಟು ಹುಮ್ಮಸ್ಸಿನಿಂದ ಮುನ್ನುಗ್ಗುತ್ತಾರೆ. ದರ್ಶನ್ ಹಲವು ಬಾರಿ ತಪ್ಪುಗಳಾದಾಗಲೂ.. ತಿದ್ದಿಕೊಳ್ಳುವ ಬದಲು ಹುಂಬ ಧೈರ್ಯವನ್ನೇ ತೋರಿಸಿಕೊಂಡು.. ಮಾಡುತ್ತಿದ್ದ ತಪ್ಪುಗಳನ್ನೇ ದೊಡ್ಡದಾಗಿ ಹೇಳಿಕೊಂಡವರು. ಈಗ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ. ಬಿಡುಗಡೆ ಸುಲಭವಲ್ಲ.
ದರ್ಶನ್ ಅವರಿಗೆ ಜೈಲು ಹೊಸದಲ್ಲ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿಯ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು. ಸರಿಯಾಗಿ 13 ವರ್ಷಗಳ ನಂತರ ಮತ್ತೊಮ್ಮೆ ಜೈಲು ಸೇರಿದ್ದಾರೆ. ಚಿತ್ರದುರ್ಗದ ವ್ಯಕ್ತಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 13 ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಆಪ್ತೆ ಎನಿಸಿಕೊಂಡಿರುವ ಪವಿತ್ರಾ ಗೌಡ ಕೂಡ ಈ ಪ್ರಕಣದಲ್ಲಿ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2. ಕೋರ್ಟು ದರ್ಶನ್ ಸೇರಿದಂತೆ ಎಲ್ಲ 13 ಜನರನ್ನೂ ಪೊಲೀಸ್ ಕಸ್ಟಡಿಗೆ ಕೊಟ್ಟಿದೆ. ಪವಿತ್ರ ಗೌಡ ಅವರು ಮಾತ್ರ ಮಹಿಳೆ ಎಂಬ ಕಾರಣಕ್ಕೆ ಸಾಂತ್ವನ ಕೇಂದ್ರದಲ್ಲಿದ್ದಾರೆ.
ಜೈಲಿನಲ್ಲಿ ನಿದ್ದೆ ಬರಲಿಲ್ಲ. ಬಿರಿಯಾನಿ ಕೊಟ್ಟರೂ ಊಟ ಸೇರಲಿಲ್ಲ..!
ಜೈಲ್ ಸೆಲ್ನಲ್ಲಿರೋ ದರ್ಶನ್ ರಾತ್ರಿಯೆಲ್ಲ ನಿದ್ದೆ ಮಾಡಿಲ್ಲವಂತೆ. ರಾತ್ರಿ ದರ್ಶನ್ ಅವರಿಗೆ ಹೋಟೆಲ್ನಿಂದ ದೊನ್ನೆ ಬಿರಿಯಾನಿ ತರಿಸಿ ಕೊಡಲಾಗಿದೆ. ಬಿರಿಯಾನಿ ಕೊಡಿಸಿರುವುದು ಪೊಲೀಸರಲ್ಲ. ಕಸ್ಟಡಿಯಲ್ಲಿಯೇ ಇರುವುದರಿಂದ ಮನೆಯವರು ಅಥವಾ ಬೇರೆಯವರು ಊಟ ಕೊಡಿಸಬಹುದು. ಲಾಕಪ್ಪಿನಲ್ಲಿರುವ ದರ್ಶನ್ ಅವರು ರಾತ್ರಿಯೆಲ್ಲ ಎದ್ದು ಕುಳಿತೇ ಇದ್ದರಂತೆ. ಕ್ಷಣವೂ ಕಣ್ಣು ಮುಚ್ಚಿಲ್ಲವಂತೆ.
ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾ ಸ್ವಾಮಿ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಲಾಕಪ್ ಸೇರಿದ್ದಾರೆ.
ಇಂದಿನಿಂದ ಸ್ಥಳದ ಮಹಜರು, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆದು ತಂದ ವಾಹನ, ಮೊಬೈಲ್, ಕೊಲೆಗೆ ಬಳಸಿದ ಆಯುಧಗಳು ಎಲ್ಲವನ್ನೂ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಲಿದ್ದಾರೆ.
ಕೊಲೆ ನಡೆದ ವೇಳೆ ದರ್ಶನ್ ಅವರು ಇದ್ದ ಬಗ್ಗೆ ಸಿಸಿಟಿವಿಗಳು ಸಾಕ್ಷಿ ಹೇಳುತ್ತಿವೆ. ರೇಣುಕಾಸ್ವಾಮಿ ಕೊಲೆಯಾದ ಸಂದರ್ಭದಲ್ಲಿ ದರ್ಶನ್ ಅವರ ಲೊಕೇಷನ್ ಕೂಡಾ ಅಲ್ಲೇ ಇದ್ದರೆ, ದರ್ಶನ್ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚು. ದರ್ಶನ್ ಸ್ನೇಹಿತ ವಿನಯ್ ಅವರ ಮಾವ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಸೀಜ್ ಆಗಿದೆ.
ಇನ್ನು ದರ್ಶನ್ ಅವರು ಈ ಹಿಂದೆ ಜೈಲು ಸೇರಿದ್ದಾಗಲೂ ಹಲ್ಲೆಯಷ್ಟೇ ಅಲ್ಲ, ಚಿತ್ರರಂಗದ ಇನ್ನೊಬ್ಬ ನಟಿ ನಿಕಿತಾ ತುಕ್ರಾಲ್ ಅವರ ಹೆಸರು ಕೇಳಿ ಬಂದಿತ್ತು. ನಿಕಿತಾ ಅವರನ್ನು ಫಿಲ್ಮ್ ಚೇಂಬ್ ಬ್ಯಾನ್ ಕೂಡಾ ಮಾಡಿತ್ತು. ಆಗ ಪಾರ್ವತಮ್ಮ ರಾಜಕುಮಾರ್ ಅವರ ಮಧ್ಯಪ್ರವೇಶದಿಂದಾಗಿ ನಟಿಯ ನಿಷೇಧ ತೆರವಾಗಿತ್ತು.
ಪವಿತ್ರ ಗೌಡಗೂ ಬಿದ್ವು ಏಟು..
ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಮೇಲೂ ದರ್ಶನ್ ಹಲ್ಲೆ ಮಾಡಿದ್ದಾರಂತೆ. ಇಷ್ಟಕ್ಕೆಲ್ಲ ನೀನೇ ಕಾರಣ ಎಂದು ಹೇಳಿ ಪವಿತ್ರಾ ಗೌಡಗೆ ದರ್ಶನ್ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ ಎಂಬ ಕಥೆ ಹಬ್ಬಿದೆ. ಗಾಯಗೊಂಡಿದ್ದ ಪವಿತ್ರಾ ಗೌಡ ಆಸ್ಪತ್ರೆಗೆ ದಾಖಲಾಗಿ, ಆನಂತರ ಡಿಸ್ ಚಾರ್ಜ್ ಆಗಿದ್ದಾರಂತೆ.
ದರ್ಶನ್ ಅವರಿಗೆ ಧರ್ಮಪತ್ನಿ ವಿಜಯಲಕ್ಷ್ಮಿ. ಅವರಿಗೊಬ್ಬ ಮಗನೂ ಇದ್ದಾನೆ. ಆದರೆ, ಸುಮಾರು 10 ವರ್ಷಗಳಿಂದಲೂ ಪವಿತ್ರ ಗೌಡ ಅವರೊಂದಿಗೆ ರಿಲೇಷನ್ʻಶಿಪ್ ಇದೆ. ಇದು ಪವಿತ್ರ ಗೌಡ ಮತ್ತು ವಿಜಯಲಕ್ಷ್ಮಿ ಅವರ ಸೋಷಿಯಲ್ ಮೀಡಿಯಾ ವಾರ್ʻಗೂ ಕಾರಣವಾಗಿದೆ. ಪವಿತ್ರ ಅವರ ವಿಷಯಕ್ಕೆ ದರ್ಶನ್ ಮನೆಯಲ್ಲಿ ಹಲವು ಬಾರಿ ಗಲಾಟೆ ನಡೆದಿವೆ. ಆದರೆ, ದರ್ಶನ್ ಕೇಳಿದವರಿಗೆಲ್ಲ ಪ್ರಶ್ನಿಸಿದವರಿಗೆಲ್ಲ ಹೊಡೆದು ಬಡಿದು ಬಾಯ್ಮುಚ್ಚಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಮುಂದೆ ‘ನಾನೇನೂ ಮಾಡಿಲ್ಲ. ನಂಗೇನೂ ಗೊತ್ತಿಲ್ಲ’ ಎಂದು ದರ್ಶನ್ ಹೇಳಿಕೆ ಕೊಟ್ಟಿದ್ದಾರಂತೆ. ಪತ್ನಿ ವಿಜಯಲಕ್ಷ್ಮೀ ಹಾಗೂ ವಿನೀಶ್ ಜೊತೆ ಫೋನ್‌ನಲ್ಲಿ ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದೆ. ಪತ್ನಿ ಹಾಗೂ ಮಗನ ಜೊತೆಗೂ ‘ನಾನೇನೂ ಮಾಡಿಲ್ಲ’ ಅಂತಲೇ ಹೇಳಿದ್ದಾರಂತೆ. ಪ್ರಕರಣದಲ್ಲಿ ಒಟ್ಟು 13 ಮಂದಿ ಆರೋಪಿಗಳು.
ರೇಣುಕಾ ಸ್ವಾಮಿ ಹತ್ಯೆ ಕೇಸ್‌ನಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2. ಉಳಿದ 11 ಆರೋಪಿಗಳ ಪಟ್ಟಿ ಹೀಗಿದೆ – ವಿ.ವಿನಯ್, ಆರ್.ನಾಗರಾಜು, ಎಂ.ಲಕ್ಷ್ಮಣ್, ಎಸ್.ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕೋರ್ಟ್ ಸೂಚನೆ ನೀಡುವ ವೇಳೆ ದರ್ಶನ್ ಮತ್ತು ಪವಿತ್ರಾ ಕಟಕಟೆಯಲ್ಲೇ ಕಣ್ಣೀರಿಟ್ಟಿದ್ದಾರೆ.



