ಇದನ್ನು ವಿಚಿತ್ರ ಎನ್ನದೆ ವಿಧಿಯಿಲ್ಲ. ಒಂದು ಕಡೆ ಮಳೆ ಇಲ್ಲ. ಮಳೆಗಾಲವಾದರೂ ಮಳೆ ಸುರಿಯುತ್ತಿಲ್ಲ. ಇನ್ನೊಂದೆಡೆ ಇದೇ ದೇಶದ ಇನ್ನೊಂದು ಭಾಗ ರಾಜಸ್ತಾನ, ಗುಜರಾತ್`ನಲ್ಲಿ ಪ್ರವಾಹವಾಗುತ್ತಿದೆ. ಆ ರಾಜ್ಯದ ಪಕ್ಕದ ರಾಜ್ಯ ಉತ್ತರ ಪ್ರದೇಶ, ಬಿಹಾರದಲ್ಲಿ ಬಿಸಿ ಗಾಳಿ. ಬಿಸಿಗಾಳಿಗೆ ಸತ್ತವರ ಸಂಖ್ಯೆಯೇ ಸುಮಾರು 100ರ ಗಡಿಯಲ್ಲಿದೆ.
ವಾಯುಭಾರ ಕುಸಿತವಾಗಿ ಬದಲಾಗಿರುವ ಬಿಪೊರ್ಜೊಯ್ ಚಂಡಮಾರುತ, ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದರೆ, ಉತ್ತರ ಗುಜರಾತ್ನ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಿದೆ. ತ ಕಳೆದ 3 ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆ ಸುರಿಸುತ್ತಿದ್ದು, ಜಲೋರ್, ಸಿರೋಹಿ ಮತ್ತು ಬಾಢ್ಮೇರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಪಾಲಿ ಜಿಲ್ಲೆಯಲ್ಲಿ ನೀರಿನಲ್ಲಿ ಸಿಕ್ಕಿಬಿದ್ದಿದ್ದ 6 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ. ಆದರೆ ಇದುವರೆಗೆ ರಾಜ್ಯದಲ್ಲಿ ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿ.
ಉತ್ತರ ಗುಜರಾತ್ನ ಎರಡು ಜಿಲ್ಲೆಗಳಲ್ಲಿ ಇನ್ನೂ ತನ್ನ ಪ್ರಭಾವ ಮುಂದುವರೆಸಿದೆ. ಬನಾಸ್ಕಂಠಾ ಮತ್ತು ಪಾಟಣ್ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆ ಸುರಿದಿದೆ. ಬನಸ್ಕಂಠಾ ಜಿಲ್ಲೆಯ ಅಮೀರ್ಗಢ ತಾಲೂಕಿನಲ್ಲಿ 24 ಗಂಟೆ ಅವಧಿಯಲ್ಲಿ 20.6 ಸೆ.ಮೀ, ದಂತಾ, ಧನೇರಾ ತಾಲೂಕಿನಲ್ಲಿ ಕ್ರಮವಾಗಿ 16.8, 16.4 ಸೆ.ಮೀ ಪೊಸಿನಾದಲ್ಲಿ 15.1 ಸೆ.ಮೀ, ದಂತೀವಾಡಾದಲ್ಲಿ 15 ಸೆ.ಮೀ.,ಪಾಲನ್ಪುರದಲ್ಲಿ 13.6 ಸೆ.ಮೀ ಮಳೆ ಸುರಿದಿದೆ.
ಇತ್ತ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಭಾರಿ ಪ್ರಮಾಣದ ಬಿಸಿಗಾಳಿಗೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಸತ್ತವರ ಸಂಖ್ಯೆ 100ಕ್ಕೂ ಹೆಚ್ಚು. 5 ಸಾವಿರಕ್ಕೂ ಹೆಚ್ಚು ಕೇವಲ ಬಿಸಿಲಾಘಾತದಿಂದಾಗಿಯೇ ಆಸ್ಪತ್ರೆ ಸೇರಿದ್ದಾರೆ. ಇಲ್ಲಿನ ಸಾಮಾನ್ಯ ಉಷ್ಣಾಂಶವೇ 44 ಡಿಗ್ರಿಗೂ ಹೆಚ್ಚು. ವಯಸ್ಸಾದವರಂತೂ ಬಿಸಿಲಾಘಾತಕ್ಕೆ ತಡೆಯುತ್ತಿಲ್ಲ. ಮೃತಪಟ್ಟವರಲ್ಲಿ 60 ವರ್ಷ ದಾಟಿದವರೇ ಹೆಚ್ಚು. ಈ ಬಿಸಿಲುಗಾಳಿ ಇನ್ನೂ ಕೆಲವು ದಿನ ಇರಲಿದೆ. ಕೇಂದ್ರ ಸರ್ಕಾರ ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪ.ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಗೆ ಎಚ್ಚರಿಕೆ ನೀಡಿದೆ. ಕೆಲವು ರಾಜ್ಯಗಳಲ್ಲಿ ಬೇಸಿಗೆ ರಜೆ ಅವಧಿ ವಿಸ್ತರಿಸಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಹಗಲು ಹೊತ್ತಿನ ಕೆಲಸದ ಅವಧಿಯನ್ನೇ ಕಡಿತ ಮಾಡಲಾಗಿದೆ.
ಇನ್ನು ಕರ್ನಾಟಕದಲ್ಲಿ ಮಳೆಗಾಲ ಆರಂಭವಾಗಿದ್ದರೂ, ಮಳೆಯ ಪ್ರಮಾಣ ಅತ್ಯಂತ ಕಡಿಮೆ ಇದೆ. ಕಳೆದ 28 ವರ್ಷಗಳ ಹಿಂದೆ ಇದೇ ಪರಿಸ್ಥಿತಿ ಇತ್ತು. ಮುಂಗಾರು ತಡವಾಗಿ ಆಗಮಿಸಿದ್ದರೂ ದೊಡ್ಡ ಮಟ್ಟದ ಮಳೆ ಆಗಿಲ್ಲ. ಈಗಲೂ ಮುಂಗಾರಿನ ಶಕ್ತಿ ಕಡಿಮೆಯೇ ಇದೆ. ಈ ಎರಡು ವಾರದಲ್ಲೇ ಆಗಿರುವ ಮಳೆಯ ಪ್ರಮಾಣ ಸರಾಸರಿಗಿಂತ ಶೇ.72ಕ್ಕಿಂತಲೂ ಕಡಿಮೆ. ಮುಂಗಾರು ಮಾರುತಗಳು ಎಂಟ್ರಿ ಕೊಡುವಾಗ ಪ್ರಬಲವಾಗಿಯೇ ಇತ್ತಾದರೂ, ಕ್ರಮೇಣ ದುರ್ಬಲವಾದವು. ಇದರಿಂದಾಗಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ.



