”ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಬಯಕೆ ಇತ್ತು. ಆದರೆ, ಹಿತೈಷಿಗಳು ಮತ್ತು ಬೆಂಬಲಿಗರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲು ಒತ್ತಡ ತರುತ್ತಿದ್ದಾರೆ. ಜನರ ಮಧ್ಯೆ ಇರುವುದೇ ನನಗೆ ಇಷ್ಟ,”
ಸಿಎಂ ಸಿದ್ದರಾಮಯ್ಯ ಪಬ್ಲಿಕ್ ಟಿವಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡುತ್ತಿದ್ದಂತೆಯೇ ರಾಜಕೀಯ ಬಿರುಗಾಳಿ ಎದ್ದಿದೆ. ಚಂಡಮಾರುತವೇ ಸೃಷ್ಟಿಯಾಗ್ತಿದೆ.
ಸಿದ್ದರಾಮಯ್ಯ ಅವರು ಈ ಅವಧಿಯನ್ನು ಪೂರ್ಣಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆಯೇ? 2028ರ ಚುನಾವಣೆಯಲ್ಲೂ ಸ್ಪರ್ಧಿಸಿ ದಾವೆ ಹೂಡಲಿದ್ದಾರೆಯೇ? ಹಾಗಾದರೆ ಮುಂದಿನ ಬಾರಿಯಾದರೂ ತಾನು ಸಿಎಂ ಆಗುತ್ತೇನೆ ಎಂಬ ಡಿಕೆ ಶಿವಕುಮಾರ್ ಅವರ ಕನಸು, ಕನಸಾಗಿಯೇ ಉಳಿಯಲಿದೆಯೇ.. ತಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂಬ ತಮ್ಮದೇ ಹೇಳಿಕೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆಯೇ.. ಎಂಬೆಲ್ಲ ಚರ್ಚೆಗಳು ಶುರುವಾಗಿವೆ.
ಇನ್ನು ಇದೇ ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ”ಅರಸು ಅವರು 7 ವರ್ಷ 7 ತಿಂಗಳು ರಾಜ್ಯದ ಸಿಎಂ ಆಗಿದ್ದರು. ನನಗೆ ದಾಖಲೆಗಳಲ್ಲಿ ನಂಬಿಕೆ ಇದೆʼʼ ಎಂದಿದ್ದಾರೆ ಸಿದ್ದರಾಮಯ್ಯ. ಅರಸು ಅವರ ದಾಖಲೆ ಸರಿಗಟ್ಟಲು ಸಿದ್ದರಾಮಯ್ಯ ಅವರು ಡಿಸೆಂಬರ್ ಅಂತ್ಯದವರೆಗೂ ಸಿಎಂ ಆಗಿರಲೇಬೇಕು. ಅಂದರೆ ಎರಡೂವರೆ ವರ್ಷಗಳ ನಂತರವೂ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸೂಚನೆ ಕೊಟ್ಟಿದ್ದಾರೆ.
ಇನ್ನು ಇದೇ ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ʻʻ ಪಕ್ಷ ನಿಷ್ಠರಿಗೆ ಒಳ್ಳೆಯ ದಿನಗಳು ಬರಲಿವೆ. ನಮ್ಮ ನೆರಳನ್ನೂ ನಾವು ನಂಬಬಾರದು” ಎಂದೆಲ್ಲ ಒಗಟು ಒಗಟಾಗಿ ಮಾತನಾಡಿದ್ದಾರೆ. ಆ ಒಗಟು ಅವರಿಗೆ ಮಾತ್ರವೇ ಅರ್ಥವಾಗುವಂಥದ್ದು.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿ ದಿನಕ್ಕೊಂದು ಸ್ವರೂಪ, ತಂತ್ರಗಾರಿಕೆ, ಕ್ಷಣಕ್ಕೊಂದು ತಿರುವು ಪಡೆಯುತ್ತಲೇ ಇದೆ. ಹಳ್ಳಿಯಿಂದ ಹಿಡಿದು ದೆಹಲಿಯ ತನಕ ಪಟ್ಟದ ರಾಜಕಾರಣ ಜೋರಾಗಿ ನಡೆಯುತ್ತಿದೆ. ಕಳೆದ ಹತ್ತು ದಿನಗಳಿಂದ ಮಂಡಿ ನೋವಿನಿಂದ ಓಡಾಡಲು ಅಸಾಧ್ಯವಾದರೂ ಕುಳಿತಲ್ಲೇ ಇರುವಂತಾಗಿದ್ದರೂ ಸಿಎಂ ಸಿದ್ದರಾಮಯ್ಯ ಉರುಳಿಸುತ್ತಿರುವ ದಾಳ ಅಸಾಧ್ಯವಾದ್ದು. ಸಿದ್ದರಾಮಯ್ಯ ಹೀಗೆ ದಾಖಲೆಯ ಅವಧಿಯ ಬಗ್ಗೆ ಪ್ತಸ್ತಾಪ ಮಾಡುತ್ತಿದ್ದಂತೆಯೇ ಸಿದ್ದರಾಮಯ್ಯ ಆಪ್ತ ಸಚಿವರು ಹಿತೈಷಿಗಳು ಜೈ ಎಂದಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್, ಎಂಬಿ ಪಾಟೀಲ್, ಎಚ್ಸಿ ಮಹದೇವಪ್ಪ ಮೊದಲಾದವರೆಲ್ಲ ಸಿದ್ದರಾಮಯ್ಯ ಅವರೇ ಅವಧಿ ಪೂರೈಸುತ್ತಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಅವರೇ ಕಂಟಿನ್ಯೂ ಆಗ್ತಾರೆ ಅನ್ನೋ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಪರಮೇಶ್ವರ್ : ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವಾಗ ಎರಡೂವರೆ ವರ್ಷಕ್ಕೆ ಎಂದು ಹೈಕಮಾಂಡ್ ನಮಗೆ ಹೇಳಿಲ್ಲ. ಹಾಗಾಗಿ ಅವರು 5 ವರ್ಷ ಸಿಎಂ ಆಗಿರುತ್ತಾರೆ ಎಂದೇ ಭಾವಿಸಿದ್ದೇವೆ. ಅವರು 5 ವರ್ಷ ಪೂರ್ಣಗೊಳಿಸಿದರೆ ಸಹಜವಾಗಿ ಅದು ದಾಖಲೆಯೇ ಆಗಲಿದೆ. ಸಿದ್ದರಾಮಯ್ಯ ಅವರು ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿರಲಿ. ಜತೆಗೆ ದಾಖಲೆ ಮಾಡಲಿ ಎಂದು ಹಾರೈಸುತ್ತೇನೆ.
ಎಂಬಿ ಪಾಟೀಲ್ : ಹೈಕಮಾಂಡ್‌ನವರು ಸಿದ್ದರಾಮಯ್ಯ ಅವರಿಗೆ ಸಿಎಂ ಮಾಡಿದ್ದಾರೆ. ಅವರು ಪೂರ್ಣಾವಧಿಗೆ ಇರುತ್ತಾರೆ. ಹಾಗಾಗಿ ಸಿಎಂ ಕುರ್ಚಿ ಖಾಲಿಯಿಲ್ಲ. ಹಾಲಿ ಅವಧಿ ಪೂರೈಸಿದ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ದೇವರಾಜ ಅರಸರು 7 ವರ್ಷ ಸಿಎಂ ಆಗಿದ್ದರು. ಸಿದ್ದರಾಮಯ್ಯ ಅವರು 7 ವರ್ಷವಲ್ಲ, 10 ವರ್ಷ ಸಿಎಂ ಆಗಿರುತ್ತಾರೆ.
ಸಿದ್ದರಾಮಯ್ಯ ಅವರೇ ದಾಖಲೆಯ ಅವಧಿಗೆ ತಾವು ಮುಂದುವರಿಯುತ್ತೇನೆ ಎನ್ನುವ ಮೂಲಕ ಪವರ್ ಶೇರಿಂಗ್ ಅಷ್ಟು ಸುಲಭದ ವಿಷಯವಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ನಾಯಕತ್ವ ಬದಲಾವಣೆಯ ಸಂದರ್ಭ ಬಂದರೆ ಅವಕಾಶದ ನಿರೀಕ್ಷೆಯಲ್ಲಿ ಪರಮೇಶ್ವರ ಇದ್ದಾರೆ. ಎಂ.ಬಿ.ಪಾಟೀಲ್ ಅವರೂ ಪ್ರಮೋಷನ್ ಬಯಸಿದ್ದಾರೆ. ಡಿ.ಕೆ.ಶಿವಕುಮಾರ್ ಪಟ್ಟ ಏರುತ್ತಾರೆಂದರೆ ತಾವೂ ರೆಡಿ ಎಂದು ಹೇಳಲು ಕಾಂಗ್ರೆಸ್‌ನಲ್ಲಿ ಈಗ ಹಲವರಿದ್ದಾರೆ.



