ಹೊಸ ಬಿಪಿಎಲ್ (BPL Card) ಕಾರ್ಡ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಹಲವು ತಿಂಗಳುಗಳಿಂದ ಅರ್ಜಿ ಸ್ವೀಕಾರವಾಗದೆ ಪರದಾಡುತ್ತಿದ್ದಾರೆ. ಬಿಪಿಎಲ್ (BPL Card) ಅಥವಾ ಎಪಿಎಲ್ (APL Card) ಯಾವ ಕಾರ್ಡುಗಳೂ ಹೊಸದಾಗಿ ಲಭ್ಯವಾಗುತ್ತಿಲ್ಲ. ಇದೀಗ ರಾಜ್ಯ ಪಡಿತರ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಹೊಸ ಕಾರ್ಡ್ ಸ್ವೀಕಾರ ಇಲ್ಲ. ಈಗಂತೂ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸದಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಸರ್ಕಾರ ಅವಕಾಶ ನೀಡಿಲ್ಲ. ಮುಂದಿನ ದಿನದಲ್ಲಿ ಯಾವ ಕಾರಣಕ್ಕಾಗಿ ಹೊಸದಾಗಿ ಕಾರ್ಡ್ (Ration Card) ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ ಎಂಬುದನ್ನು ತಿಳಿಸಲಾಗುವುದು. ಸದ್ಯಕ್ಕಂತೂ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮುಂದಿನ ತಿಂಗಳು ಕೂಡ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ನಗದು ಹಣ ನೀಡುವುದನ್ನೇ ಮುಂದುವರೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ಕಾರ್ಡ್ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೇ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದರು. ಅಂದರೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಮುಗಿದ ನಂತರ ಹೊಸ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಲಿದೆ. ಅಷ್ಟೇ ಅಲ್ಲ, ಈಗಾಗಲೇ ಇರುವ ಬಿಪಿಎಲ್ ಕಾರ್ಡುಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳು ಬೋಗಸ್ ಆಗಿದ್ದು, ಅವುಗಳನ್ನು ಮಾನದಂಡಗಳ ಆಧಾರದ ಮೇಲೆ ರದ್ದು ಮಾಡುವಂತೆಯೂ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳೂ ಮುಗಿದ ನಂತರವೇ ಹೊಸ ಕಾರ್ಡುಗಳ ಸ್ವೀಕಾರ ಶುರುವಾಗಲಿದೆ.
ಸೆಪ್ಟೆಂಬರ್ ತಿಂಗಳಿಂದ ಪಡಿತರದಲ್ಲಿ ಐದು ಕೆಜಿ ಅಕ್ಕಿ ನೀಡಲು ನಿರ್ಣಯಿಸಲಾಗಿತ್ತು. ಆದರೆ, ಅಕ್ಕಿ ಲಭ್ಯವಿಲ್ಲದ ಕಾರಣ ಅಕ್ಕಿಯ ಬದಲಿಗೆ ನಗದು ಹಣವನ್ನೇ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಅಕ್ಕಿ ನೀಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮುಂದೆ ಬಂದಿವೆ. ದರದ ಬಗ್ಗೆ ಎರಡು ರಾಜ್ಯಗಳ ಅಧಿಕಾರಿಗಳ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ 10 ದಿನದಲ್ಲಿ ಎಲ್ಲವೂ ಅಂತಿಮವಾಗಲಿದೆ. ಆದರೂ ಅಕ್ಕಿ ವಿತರಣೆ ಕುರಿತು ಈಗಲೇ ಸ್ಪಷ್ಟವಾಗಿ ತಿಳಿಸಲಾಗುವುದಿಲ್ಲ ಎಂದು ಹೇಳಿದರು.
ಕಳೆದ ತಿಂಗಳು ಖಾತೆಗಳ ಮಾಹಿತಿ ಇಲ್ಲದೆ ಅವಕಾಶ ವಂಚಿತ 25 ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಬಾರಿ ಅನ್ನಭಾಗ್ಯ ಯೋಜನೆಯಡಿ ಹಣ ಸಂದಾಯ ಮಾಡಲಾಗುವುದು. ಈ ತಿಂಗಳ 26ರೊಳಗೆ ಫಲಾನುಭವಿಗಳ ಖಾತೆಗಳಿಗೆ ಹಣ ಸಂದಾಯ ಮಾಡಲಾಗುತ್ತದೆ. ರಾಜ್ಯದಲ್ಲಿ 1.28 ಕೋಟಿ ಕಾರ್ಡ್ಗಳ ಪೈಕಿ 1 ಕೋಟಿ ಕಾರ್ಡ್ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಉಳಿದ ಸುಮಾರು 21 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆ ಹೊಂದಾಣಿಕೆಯಾಗುತ್ತಿಲ್ಲ. ಈ ಪೈಕಿ ಏಳು ಲಕ್ಷ ಕಾರ್ಡ್ಗಳ ಸಮಸ್ಯೆ ಸರಿಪಡಿಸಲಾಗಿದೆ. ಉಳಿದ 14 ಲಕ್ಷ ಕಾರ್ಡ್ಗಳನ್ನು ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.



