ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಗಳ ಬೆನ್ನಲ್ಲೇ ಸೂರಜ್ ರೇವಣ್ಣ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಪ್ರಜ್ವಲ್ ಹೆಣ್ಣು ಮಕ್ಕಳ ಪೀಡಕ ಎಂದು ಆರೋಪಿಸಲಾಗಿದ್ದರೆ, ಸೂರಜ್ ವಿರುದ್ಧದ ಆರೋಪ ಗಂಡಸರ ಮೇಲೆ ಲೈಂಗಿಕ ದೌರ್ಜನ್ಯ ಎಂಬುದಾಗಿತ್ತು. ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಸೂರಜ್ ರೇವಣ್ಣ ವಿರುದ್ಧ ದೂರು ಕೊಟ್ಟಿದ್ದರು. ಸೂರಜ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು. ಜೂನ್ 23ರಂದು ಅರೆಸ್ಟ್ ಆಗಿದ್ದ ಸೂರಜ್ ರೇವಣ್ಣ, ಜುಲೈ 23ರಂದು ಬಿಡುಗಡೆಯಾಗಿದ್ದರು. ಇದೀಗ ಪ್ರಕರಣದಲ್ಲಿ ಸೂರಜ್ ರೇವಣ್ಣ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ʻʻನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಶಿವಕುಮಾರ್ ಹೆಸರಿನ ನನ್ನ ಕಾರು ಚಾಲಕ ಅಥವಾ ಅಪ್ತ ಯಾರೂ ಇಲ್ಲ. ನಮ್ಮ ಕುಟುಂಬದ ಮೇಲೆ ಷಡ್ಯಂತ್ರ ನಡೆಸಲಾಗಿದೆʼʼ ಎಂದು ಹೇಳಿದ್ದರು ಸೂರಜ್ ರೇವಣ್ಣ. ಅದು 2024ರ ಜುಲೈ ತಿಂಗಳ ಮಾತು. ಇದೀಗ ಸೂರಜ್ ರೇವಣ್ಣ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಆರೋಪ ಏನಿತ್ತು..?
ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಶಿವಕುಮಾರ್ ಎಂಬ ಹೆಸರಿನ ವ್ಯಕ್ತಿ ಗನ್ನಿಗಡದ ತೋಟದ ಮನೆಗೆ ಮಾತನಾಡುವ ಸಲುವಾಗಿ ಕರೆಸಿಕೊಂಡು, ತಮ್ಮ ಮೇಲೆ ದೌರ್ಜನ್ಯ ಮಾಡಿದ್ದರು. ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ವಿಚಾರ ಎಲ್ಲಿಯೂ ಬಾಯ್ಬಿಡದಂತೆ ಜೀವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತ ಜೂನ್ 23 ರಂದು ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸೂರಜ್ ಅಧಿವರನ್ನು ಪೊಲೀಸರು ಬಂಧಿಸಿದ್ದಧಿರು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.
ಸೂರಜ್ ಬಂಧನವಾಗುವ ವೇಳೆಗೆ ಸೋದರ ಪ್ರಜ್ವಲ್ ಜೈಲಿನಲ್ಲಿದ್ದರು. ತಂದೆ ರೇವಣ್ಣ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಬಂದಿದ್ದರು. ತಾಯಿ ಭವಾನಿ ರೇವಣ್ಣ ಅರೆಸ್ಟ್ ಆಗುವ ಭೀತಿ ಎದುರಿಸಿ, ಜಾಮೀನು ಪಡೆದುಕೊಂಡಿದ್ದರು. ಇಷ್ಟೆಲ್ಲ ಆಗುವ ಹೊತ್ತಿಗೆ ಸೂರಜ್ ರೇವಣ್ಣ ಕೂಡಾ ಜೈಲು ಸೇರಿದ್ದರು. ಇದೀಗ ರೇವಣ್ಣ ಕುಟುಂಬದಲ್ಲಿ ಆರೋಪ ಎದುರಿಸಿದ್ದ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಆರೋಪ ಮುಕ್ತರಾದಂತಾಗಿದೆ.
ಬಿ ರಿಪೋರ್ಟ್ ಹೇಳಿದ್ದೇನು..?
ಸೂರಜ್ ರೇವಣ್ಣ ಅವರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಆಗಿಲ್ಲ ಎಂದು ಹೇಳಿರುವ ಸಿಐಡಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.
ಗೊಂದಲ ಏನು..?
ವಿಶೇಷ ಎಂದರೆ ಇದೇ ಪ್ರಕರಣದಲ್ಲಿ ಹೊಳೆ ನರಸೀಪುರ ಪೊಲೀಸರು ಸೂರಜ್ ರೇವಣ್ಣ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ ಸಿಐಡಿ ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಹೊಳೆ ನರಸೀಪುರ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರುವುದು ವಿಶೇಷ ನ್ಯಾಯಾಲಯದಲ್ಲಿ. ಸಿಐಡಿ ಬಿ ರಿಪೋರ್ಟ್ ಸಲ್ಲಿಸಿರುವುದು ಜನಪ್ರತಿನಿಧಿಗಳ ಕೋರ್ಟಿನಲ್ಲಿ. ಈಗ ಎರಡೂ ಒಂದೇ ಪ್ರಕರಣವಾ.. ಅಥವಾ ಬೇರೆ ಬೇರೆ ಪ್ರಕರಣಗಳಾ ಎಂಬ ಕುರಿತು ಜಿಜ್ಞಾಸೆ ಆರಂಭವಾಗಿದೆ.



