ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಏನು ನಿಲುವು ತಗೋತಿದೆ..? ಇಂಥಾದ್ದೊಂದು ಪ್ರಶ್ನೆ ಕಿಚ್ಚ ಸುದೀಪ್ ಅವರಿಗೆ ಎದುರಾದಾಗ ಗರಂ ಆಗಿಬಿಟ್ಟರು ಕಿಚ್ಚ ಸುದೀಪ್. ಚಿತ್ರೋದ್ಯಮಕ್ಕೆ ಏನು ನಿಲುವು ತಗೋತೀರಾ ಅಂತ ಕೇಳಬೇಡಿ ಎಂದ ಸುದೀಪ್, 2011ರ ಕಥೆ ನೆನಪಿಸಿದ್ರು..!
ಕನ್ನಡ ಚಿತ್ರರಂಗದ ಸ್ಟಾರ್ ಹೀರೋ.. ಕಿಚ್ಚ ಸುದೀಪ್ ʻದರ್ಶನ್ ಪ್ರಕರಣʼದ ಬಗ್ಗೆ ರಿಯಾಕ್ಟ್ ಮಾಡಿದ್ದು ಮಾರ್ಮಿಕವಾಗಿ. ಸುದೀರ್ಘವಾಗಿ ಮಾತನಾಡಿದ ಸುದೀಪ್ ಅಪ್ಪಿ ತಪ್ಪಿಯೂ ದರ್ಶನ್ ಹೆಸರು ಹೇಳಲಿಲ್ಲ. ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರೋದು ಬೇಡ. ನಾನು ಯಾರ ಪರ ವಿರೋಧವೂ ಮಾತನಾಡೋದಿಲ್ಲ. ಒಬ್ಬರಿಂದ ಚಿತ್ರರಂಗ ಇಲ್ಲ, ಎಲ್ಲರಿಂದ ಚಿತ್ರರಂಗ. ನಾವು ಹೀರೋಗಳು. ಸೆಲಬ್ರಿಟಿಗಳೇ ಹೊರತು ದೇವರಲ್ಲ ಎಂದಿರುವ ಸುದೀಪ್ ಅವರಿಗೆ ಆಗ ಎದುರಾದ ಪ್ರಶ್ನೆಯೇ ಇಂಡಸ್ಟ್ರಿಯಲ್ಲಿ ದರ್ಶನ್ ಅವರನ್ನು ಬ್ಯಾನ್ ಮಾಡಲಾಗುತ್ತಾ? ಇಂಡಸ್ಟ್ರಿಯ ನಿಲುವು ಏನು ಎಂಬ ಪ್ರಶ್ನೆ.
ದಯವಿಟ್ಟು ಇಂಡಸ್ಟ್ರಿ ಏನ್ ಡಿಸಿಷನ್ ತಗೊಳ್ಬೇಕು ಅಂತಾ ಕೇಳಬೇಡಿ ಸರ್, ಹಾಗೆ ನಿಲುವು ತೆಗೆದುಕೊಂಡಾಗಲೆಲ್ಲ ನಾವು ಜೋಕರ್ʻಗಳಾಗಿದ್ದೇವೆ ಎಂದ ಸುದೀಪ್ ʻಯಾರೋ ಒಬ್ಬರು ಬರ್ತಾರೆ. ನನಗೆ ಸಿಕ್ಕಾಪಟ್ಟೆ ಹೊಡೀತಿದ್ದಾರೆ ಮನೆಯಲ್ಲಿ ಅಂತಾ ಇನ್ನೊಬ್ರ ಮನೆಗೆ ಹೋಗ್ತಾರೆ. ಅವರಿಗೆ ಸಪೋರ್ಟ್ ಕೇಳ್ತಾರೆ. ಅವರು ಅವರಿಗೆ ಸಪೋರ್ಟ್ ಮಾಡ್ತಾರೆ. ಫೈನಲ್ ಆಗಿ ಅವರಿಬ್ರೂ ಒಂದಾಗ್ತಾರೆ. ಸಪೋರ್ಟ್ ಮಾಡಿದವರು.. ದೂರ ಆಗ್ತಾರೆ..ʼ ಎಂದಿದ್ದಾರೆ.
ಸುದೀಪ್ ಅವರು ನೆನಪು ಮಾಡುತ್ತಿರುವುದು 2011ರ ಆ ಘಟನೆಯನ್ನ. ಅಂದರೆ 2011ರಲ್ಲಿ ಇದೇ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದರು. ಮುಖವನ್ನು ಜಜ್ಜಿದ್ದರು. ಸಿಗರೇಟಿಂದ ಸುಟ್ಟಿದ್ದರು. ಮುಖ ಎಷ್ಟೋ ದಿನಗಳ ಕಾಲ ಊದಿಕೊಂಡೇ ಇತ್ತು. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ವಿಜಯಲಕ್ಷ್ಮಿ ನಂತರ ಡಿಸ್ ಚಾರ್ಜ್ ಆಗಿದ್ದರು. ಆಗ ದರ್ಶನ್ ಅವರ ಅಟೆಂಪ್ಟ್ ಟು ಮರ್ಡರ್ ಕೇಸ್ ಬುಕ್ ಆಗಿತ್ತು.
ಆಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ನೆರವು ಮತ್ತು ರಕ್ಷಣೆ ಕೇಳಿ ಹೋಗಿದ್ದುದು ಶಿವ ರಾಜ್ ಕುಮಾರ್ ಮನೆಗೆ. ಆಗ ಮನೆಯಲ್ಲಿಯೇ ಇದ್ದ ಗೀತಾ ಮತ್ತು ಶಿವಣ್ಣ ಇಬ್ಬರೂ ವಿಜಯಲಕ್ಷ್ಮಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ ವಿಜಯಲಕ್ಷ್ಮಿಯವರ ಜೊತೆ ಗಟ್ಟಿಯಾಗಿ ನಿಂತಿದ್ದರು.
ಆದರೆ.. ಕೊನೆಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರೂ ಒಂದಾದರು. ಕೊನೆಗೆ ಶಿವಣ್ಣ ಕುಟುಂಬ, ತೂಗೂದೀಪ ಫ್ಯಾಮಿಲಿಯಿಂದ ದೂರವಾಯ್ತು. ಆಗ ʻಗಂಡ ಹೆಂಡತಿ ಸರಿ ಹೋಗ್ತಾರೆ ಬಿಡು, ವಿಚಾರಣೆಯಲ್ಲಿ ಸ್ವಲ್ಪ ಉದಾರತೆ ತೋರಿಸುʼ ಎಂದು ಶಿವಣ್ಣ ಅವರಿಗೆ ಹೇಳಿದ್ದರಂತೆ ಅಂಬರೀಷ್. ಅಂಬರೀಷ್ ಮೇಲಿನ ಗೌರವದಿಂದ ಹಾಗೆಯೇ ನಡೆದುಕೊಂಡಿದ್ದರು ಶಿವಣ್ಣ. ಸುದೀಪ್ ಹೇಳಿರುವ ಕಥೆ.. ಅದೇ.
ಅಷ್ಟೇ ಅಲ್ಲ, ಆಗ ಫಿಲ್ಮ್ ಚೇಂಬರ್ʻನವರು ನಟಿ ನಿಖಿತಾ ಅವರನ್ನು ಬ್ಯಾನ್ ಮಾಡಿದ್ದರು. ನಿಖಿತಾ ಅವರನ್ನು ನಿರ್ಮಾಪಕರ ಸಂಘ ಬ್ಯಾನ್ ಮಾಡಿತ್ತಾದರೂ, ಪಾರ್ವತಮ್ಮ ರಾಜಕುಮಾರ್ ಮಧ್ಯ ಪ್ರವೇಶಿಸಿ ನಿಷೇಧ ತೆರವು ಮಾಡಿಸಿದ್ದರು. ಅದಾದ ಮೇಲೆ ಸಂಗೊಳ್ಳಿ ರಾಯಣ್ಣ ಚಿತ್ರದ ಕಾರ್ಯಕ್ರಮದಲ್ಲಿ ನಿಖಿತಾ ಅವರನ್ನು ಅಪ್ಪಿಕೊಂಡು ಆಗಲೂ ಡೈಲಾಗ್ ಹೊಡೆದಿದ್ದರು ನಟ ದರ್ಶನ್.
ಅಂದ ಹಾಗೆ.. ರಾಜ್ ಕುಟುಂಬದ ಬಗ್ಗೆ ಸಿಟ್ಟು, ಅಸಹನೆ, ಆಕ್ರೋಶ ಅಸಹ್ಯಗಳನ್ನೆಲ್ಲ ದರ್ಶನ್ ಹೊರಕಾಕಲು ಶುರು ಮಾಡಿದ್ದು ವಿಜಯಲಕ್ಷ್ಮಿ ದರ್ಶನ್ ಪ್ರಕರಣ ಅದ ಮೇಲೆ.



