ಸಿದ್ಧರಾಮಯ್ಯ ಸಿಎಂ ಆಗಿ ಕಂಟಿನ್ಯೂ ಆಗ್ತಾರೆ. ಡಿಕೆ ಶಿವಕುಮಾರ್ ಕೂಡಾ ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಕಂಟಿನ್ಯೂ ಆಗ್ತಾರೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆ ಮಾತ್ರ. ಪುನಾರಚನೆ ಅಲ್ಲ. ಅದರ ಅರ್ಥ ಮತ್ತು ಸಂದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರು ಸದ್ಯಕ್ಕೆ ಎಲ್ಲಿಯೂ ಇಲ್ಲ. ರಾಜಕೀಯದಲ್ಲಿ ಆಸಕ್ತಿ ಇದ್ದವರೂ.. ಎಲ್ಲವನ್ನೂ ಅಬ್ಸರ್ಸ್ ಮಾಡುತ್ತಿದ್ದವರೂ.. ಕುತೂಹಲ ಪಟ್ಟುಕೊಳ್ಳುವಂತೆ ಒಂದಿಷ್ಟು ಚಟುವಟಿಕೆಗಳು ನಡೆಯುತ್ತಿವೆ.
ಮೊದಲನೆಯದಾಗಿ ಸಿದ್ಧರಾಮಯ್ ಸೇಫ್ ಸಂದೇಶದ ಸುತ್ತ :
ಸಂಪುಟ ಪುನಾರಚನೆಗೆ ಸಂಬಂಧಿಸಿ ಹೈಕಮಾಂಡ್‌ನಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರಂತೆ ಸಿದ್ಧರಾಮಯ್ಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಖರ್ಗೆ ಭೇಟಿಗೆ ಮೊದಲೇ ರಾಹುಲ್ ಗಾಂಧಿ ʻಯೆಸ್ʼ ಎಂದಿರುವ ಕಾರಣ ಖರ್ಗೆಯವರು ನೋ ಎಂದು ಹೇಳಿಲ್ಲ. ರಾಹುಲ್ ಗಾಂಧಿಯವರೂ ಹೇಳಿರೋದು ಇಷ್ಟೇ. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಖರ್ಗೆ ಜೊತೆ ಚರ್ಚೆ ಮಾಡಿ ಎಂದಷ್ಟೇ.
ಇದು ಗೊತ್ತಾಗ್ತಿದ್ದಂತೆಯೇ ಗೃಹ ಸಚಿವ ಪರಮೇಶ್ವರ್ ಕೂಡಾ ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದರೆ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ. ಸಂಪುಟ ಪುನರಾಚನೆಯಾದರೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಸಂಪುಟ ಪುನಾರಚನೆಯಾದರೆ ಒಳ್ಳೆಯದು. ಬಹಳ ದಿನಗಳಿಂದ ಈ ಕುರಿತು ಶಾಸಕರ ಬೇಡಿಕೆ ಇದೆ. ಹಲವರಿಗೆ ಸಚಿವರಾಗಬೇಕು ಎಂಬ ಆಪೇಕ್ಷೆ ಇದೆ. ಸಂಪುಟ ಪುನಾರಚನೆಗೆ ಅವಕಾಶ ನೀಡಿದ್ದಾರೆಂದರೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನೀವೇ ಊಹೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ ಪರಮೇಶ್ವರ್.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ :
ಇನ್ನು ಮತ್ತೊಂದು ವಿಷಯ ಎಂದರೆ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಇಲ್ಲ ಎನ್ನುವುದು. ಸತೀಶ್ ಜಾರಕಿಹೊಳಿ ಅವರ ತಂಡವೇನೋ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಒಂದು ಕಣ್ಣಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಡಿಕೆ ಶಿವಕುಮಾರ್ ಕೆಳಗಿಳಿದರೆ ಆಗ ಸಹಜವಾಗಿಯೇ ದೆಹಲಿಯ ಹೈಕಮಾಂಡ್ ಲಿಂಕ್ ದುರ್ಬಲವಾಗಲಿದೆ ಎನ್ನುವುದು ಅವರ ಲೆಕ್ಕಾಚಾರ. ಇದು ಗೊತ್ತಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ಕೊಡಲಿ?. ನನಗೆ ಮೆಂಟಲಿ, ಫಿಜಿಕಲಿ, ಪೊಲಿಟಿಕಲಿ ಹೆಲ್ತ್ ಕರೆಕ್ಟಾಗಿದೆ. ಎಲ್ಲಿಯತನಕ ಕಾಂಗ್ರೆಸ್ ಪಕ್ಷ ನನಗೆ ಯಾವ ಹುದ್ದೆಯಲ್ಲಿ ಕೆಲಸ ಮಾಡು ಎಂದು ಹೇಳುತ್ತೋ, ಅಲ್ಲಿಯತನಕ ಆ ಹುದ್ದೆಯಲ್ಲಿ ಇರುತ್ತೇನೆ. ಒಬ್ಬ ಶಿಸ್ತಿನ ಸಿಪಾಯಿ ತರಹ ಕೆಲಸ ಮಾಡುತ್ತೇನೆ. ಯಾವ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡೋಲ್ಲ. ಹಗಲು-ರಾತ್ರಿ ಶ್ರಮವಹಿಸಿ ಪಕ್ಷ ಕಟ್ಟಿದವನು ನಾನು. ಪಕ್ಷಕ್ಕಾಗಿ ದುಡಿದಿದ್ದೇನೆ, ಮುಂದೆಯೂ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಅತ್ತ ತಮ್ಮ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಜೊತೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಏನೇನಾಯ್ತು ಎಂಬ ಕುರಿತು ಮೂವರೂ ನಾಯಕರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ಕೆಪಿಸಿಸಿ ನಾಯಕತ್ವ ಸೇರಿದಂತೆ ವಿವಿಧ ರಾಜಕೀಯ ವಿಷಯಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸೋದರ ಡಿ.ಕೆ. ಸುರೇಶ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



