ಅಭಿಮಾನ್ ಸ್ಟುಡಿಯೋ. ಹಿರಿಯ ನಟ ಬಾಲಕೃಷ್ಣ ಅವರ ಕನಸು. ಆ ಕನಸಿನ ಸ್ಟುಡಿಯೋ ಕಟ್ಟುವುದಕ್ಕೆ ಬಾಲಣ್ಣ ನಡೆಸಿದ ಹೋರಾಟದ ಕಥೆ ಕೇಳಿದರೆ.. ಕಣ್ಣಲ್ಲಿ ನೀರು ಬರುತ್ತದೆ. ಬಾಲಕೃಷ್ಣ ಅವರು ಬದುಕಿದ್ದಾಗ ಹಾಗೋ ಹೇಗೋ ಉಸಿರಾಡುತ್ತಿದ್ದ ಸ್ಟುಡಿಯೋ, ಅವರ ನಿಧನದೊಂದಿಗೆ ಇನ್ನಷ್ಟು ಪಾತಾಳಕ್ಕೆ ಬಿತ್ತು. ಈಗ ಆ ಸ್ಟುಡಿಯೋ ಸುದ್ದಿಯಲ್ಲಿರುವುದು ವಿಷ್ಣುವರ್ಧನ್ ಅವರ ಸಮಾಧಿ ನೆಲಸಮವಾಗಿರುವ ಕಾರಣಕ್ಕೆ.
ಅಭಿಮಾನ್ ಸ್ಟುಡಿಯೋ ಇರುವುದು ಕೆಂಗೇರಿ ಹತ್ತಿರ. ಸ್ಟುಡಿಯೋಗಾಗಿ ಸರ್ಕಾರದಿಂದ ಪಡೆದಿದ್ದ 20 ಎಕರೆ ಜಾಗದಲ್ಲಿ 10 ಎಕರೆಯಷ್ಟೇ ಉಳಿದಿತ್ತು. ಬಾಲಣ್ಣ ಅವರಿಗೆ ಒಟ್ಟು ನಾಲ್ವರು ಮಕ್ಕಳು. ಈಗ ಇರುವುದು ಗೀತಾ ಮತ್ತು ಕಾರ್ತಿಕ್ ಮಾತ್ರ. ಇನ್ನಿಬ್ಬರು ಈಗಿಲ್ಲ.
ನಾಲ್ವರು ಮಕ್ಕಳಲ್ಲಿ ಗೀತಾ ಅವರು 2004ರಲ್ಲಿಯೇ ಆಸ್ತಿಯಲ್ಲಿ ಪಾಲು ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ವಿಷ್ಣುವರ್ಧನ್ ನಿಧನರಾಗಿದ್ದು 2009ರಲ್ಲಿ. ಇನ್ನು ಸ್ಟುಡಿಯೋ ಒಡೆತನ ಹೊಂದಿದ್ದ ಬಾಲಕೃಷ್ಣ, 1995ರಲ್ಲಿ ನಿಧನರಾಗಿದ್ದರು. ಬಾಲಕೃಷ್ಣ ಅವರ ಸಮಾಧಿಯೂ ಅಲ್ಲಿಯೇ ಇತ್ತು. ಈಗ ನೆಲಸಮವಾಗಿರುವುದು ವಿಷ್ಣುವರ್ಧನ್ ಅವರ ಸಮಾಧಿಯಷ್ಟೇ ಅಲ್ಲ, ಯಾವ ಸ್ಟುಡಿಯೋವನ್ನೇ ತಮ್ಮ ಜೀವ, ಉಸಿರು ಎಂದು ಹೋರಾಡಿದ್ದರೋ.. ಆ ಜಾಗದಲ್ಲಿ ಈಗ ಬಾಲಕೃಷ್ಣ ಅವರ ಸಮಾಧಿಯೂ ಇಲ್ಲ. ವಿಷ್ಣುವರ್ಧನ್ ಅವರ ಸ್ಮಾರಕದ ಸಮೀಪದಲ್ಲಿಯೇ ಒಂದು ಪುಟ್ಟ ಗಣಪತಿ ದೇವಸ್ಥಾನವಿತ್ತು. ಆ ದೇವಸ್ಥಾನವೂ ಇಲ್ಲ.
ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಕ್ಕೆ ಎರಡು ಎಕರೆ ಜಾಗ ಕೊಡುವುದಕ್ಕೆ ಬಾಲಕೃಷ್ಣ ಅವರ ಮಗಳಾದ ಗೀತಾ ಬಾಲಿ ಒಪ್ಪಿದ್ದರಂತೆ. ಆದರೆ, ಸರ್ಕಾರ, ಅಭಿಮಾನಿಗಳು ಹಾಗೂ ಕುಟುಂಬ.. ಒಂದೊಂದು ಒಂದು ದಿಕ್ಕಾಗಿ ಈಗ ವಿಷ್ಣುವರ್ಧನ್ ಅವರಿಗೆ ಅಗ್ನಿಸ್ಪರ್ಶ ಮಾಡಿದ್ದ ಸ್ಥಳದಲ್ಲಿ ಈಗ ಏನೂ ಇಲ್ಲ.
ಸಮಾಧಿ ತೆರವು ಮಾಡಿದ್ದು ಕಾನೂನು ಪ್ರಕಾರ ಸರಿಯಾಗಿಯೇ ಇದೆ. ಏಕೆಂದರೆ ರಾತ್ರೋರಾತ್ರಿ ಹೊಡೆದರು ಎನ್ನಲಾದರೂ.. ಅದನ್ನು ಮಾಡಿರುವುದು ಹೈಕೋರ್ಟ್ ಆದೇಶದ ಮೇಲೆ. ಇನ್ನು ಸಮಾಧಿ ಇದ್ದ ಜಾಗದ ಮೇಲೆ ಮಾಲ್ ತಲೆ ಎತ್ತಲಿದೆ.
ಅಂದಹಾಗೆ.. ವಿಷ್ಣುವರ್ಧನ್ ಅವರು ನೆಮ್ಮದಿಯಾಗಿದ್ದಾರೆ. ಏಕೆಂದರೆ ಅವರದ್ದು ತುತ್ತು ಅನ್ನ ತಿನ್ನೋಕೆ.. ಬೊಗಸೆ ನೀರು ಕುಡಿಯೋಕೆ.. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಎನ್ನುವ ಮನಸ್ಥಿತಿಯವರು. ಅವರಿಗೆ ಇವೆಲ್ಲ ತಟ್ಟೋದೂ ಇಲ್ಲ. ಅವರ ಕುಟುಂಬವೂ ಅಷ್ಟೇ. ಮೈಸೂರಿನಲ್ಲಿ ಎರಡೂವರೆ ಎಕರೆ ಜಾಗ ಸಿಕ್ಕಿದೆ. ಅಲ್ಲಿ ಅವರು ಸ್ಟುಡಿಯೋ.. ಅದೂ ಇದೂ ಮಡಿಕೊಂಡು ಆರಾಮಾಗಿದ್ದಾರೆ. ಇತ್ತ ಬಾಲಕೃಷ್ಣ ಮಕ್ಕಳಿಗೂ ಹಣ ಸಿಕ್ಕಿದೆ.
ನೆಮ್ಮದಿ ಕಳೆದುಕೊಂಡಿದ್ದು ಬಾಲಕೃಷ್ಣ ಮಾತ್ರ. ಅವರದ್ದು ಹುಟ್ಟಿನಿಂದ ಸಾಯುವವರೆಗೆ ಹೋರಾಟ. ಸತ್ತ ಮೇಲೂ ಹೋರಾಟ. ಬದುಕಿದ್ದ ದಿನಗಳಲ್ಲಿಯೂ ಸನ್ಮಾನ ಸಿಕ್ಕಿರಲಿಲ್ಲ. ಸತ್ತ ಮೇಲೆ ಸಮಾಧಿಗೆ ಒಂದು ನೆಲೆ ಸಿಕ್ಕಲಿಲ್ಲ. ಆ ಸಮಾಧಿಗೆ ಕಾಯಕಲ್ಪ ನೀಡಿದ್ದವರು ಕಿಚ್ಚ ಸುದೀಪ್ ಮತ್ತು ಅವರ ತಂದೆ ಸರೋವರ್. ಈಗ.. ಆ ಸಮಾಧಿಯೂ ಇಲ್ಲ. ಅವರು ಕನಸು ಕಂಡಿದ್ದ ಸ್ಟುಡಿಯೋ ಕೂಡಾ ಇಲ್ಲ. ಇನ್ನೂ ಒಂದು ವಿಶೇಷ ಅಂದ್ರೆ.. ಬಾಲಕೃಷ್ಣ ಅಭಿನಯಿಸಿದ್ದ ಯಮ ಕಿಂಕರ ಚಿತ್ರದಲ್ಲಿ ಕೂಡಾ ವಿಷ್ಣುವರ್ಧನ್ ಅವರೇ ಹೀರೋ.



