ನಟ ದರ್ಶನ್ ಅವರಿಗೆ ಧೈರ್ಯ ಹೇಳುತ್ತಿರುವುದು ಪತ್ನಿ ವಿಜಯಲಕ್ಷ್ಮಿ. ಒಂದೆಡೆ ದೇಗುಲ, ದೇವಸ್ಥಾನ ಸುತ್ತುತ್ತಿದ್ದಾರೆ. ಗುವಾಹಟಿ ಸಮೀಪದ ಕಾಮಾಕ್ಷಿ ದೇಗುಲಕ್ಕೂ ಹೋಗಿ ಪೂಜೆ ನೆರವೇರಿಸಿ ಬಂದಿದ್ದಾರೆ. ಮತ್ತೊಂದೆಡೆ ದೊಡ್ಡ ದೊಡ್ಡ ವಕೀಲರನ್ನು ಭೇಟಿ ಮಾಡಿ, ಕಾಡಿಬೇಡಿ ಸಿವಿ ನಾಗೇಶ್ ಅಂತಹ ವಕೀಲರನ್ನು ಒಪ್ಪಿಸಿದ್ದಾರೆ. ಧೈರ್ಯ ಕಳೆದುಕೊಳ್ಳುತ್ತಿರುವ ಪತಿ ದರ್ಶನ್ ಅವರಿಗೆ ಧೈರ್ಯಲಕ್ಷ್ಮಿಯಾಗಿರುವುದು ಪತ್ನಿ ವಿಜಯಲಕ್ಷ್ಮಿ ಮಾತ್ರ. ಏಕೆಂದರೆ.. ನಟ ದರ್ಶನ್ ಈಗ ಕೇವಲ ನಟ ಅಲ್ಲ, ಕೊಲೆ ಆರೋಪಿ. ಜೈಲು ಸೇರಿ 100 ದಿನ ಕಳೆದಿದೆ. ಇನ್ನು ತಿಂಗಳ ಕೊನೆಯವರೆಗೂ ದರ್ಶನ್ ಅವರಿಗೆ ಜೈಲು ವಾಸ ಫಿಕ್ಸ್ ಆಗಿದೆ. ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದ್ದು, ಚಾರ್ಜ್ʻಶೀಟ್ ಪ್ರತಿ ಲಭ್ಯವಾಗಿದ್ದರೂ.. ತನಿಖೆ ಮುಗಿದಿಲ್ಲ.
ಇನ್ನು ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ದರ್ಶನ್, ಭಾವಮೈದ ಹೇಮಂತ್ ಹಾಗೂ ನಟ ಧನ್ವೀರ್ ಭೇಟಿ ಮಾಡಿದ್ದಾರೆ. ಕಳೆದ ಕೆಲವು ವಾರಗಳಿಂದ ಕೇವಲ ರಕ್ತ ಸಂಬಂಧಿಗಳು ಮಾತ್ರ ದರ್ಶನ್ ಅವರನ್ನು ಭೇಟಿಯಾಗಲು ಬರುತ್ತಿದ್ದರು. ಈ ಬಾರಿ ನಟ ಧನ್ವೀರ್ ಕೂಡ ಆಗಮಿಸಿದ್ದರು. ದರ್ಶನ್ ಆಪ್ತ ವಲಯದ ಸ್ನೇಹಿತರಿಗೂ ಭೇಟಿ ಮಾಡಲು ಅವಕಾಶ ನೀಡಬೇಕು ಎಂಬ ದರ್ಶನ್ ಪರ ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದ ಕಾರಣ ವಿಜಯಲಕ್ಷ್ಮಿ, ಭಾಮೈದ ಹೇಮಂತ್ ಜೊತೆಗೆ ಧನ್ವೀರ್ ಕೂಡ ಬಳ್ಳಾರಿ ಜೈಲಿಗೆ ಬಂದಿದ್ದರು. ದರ್ಶನ್ ನೋಡುತ್ತಿದ್ದಂತೆ ಹೇಮಂತ್ ಹಾಗೂ ಧನ್ವೀರ್ ಕೂಡ ಕಣ್ಣೀರಿಟ್ಟಿದ್ದಾರೆ. ಆದರೆ, ದರ್ಶನ್ ಮಾತ್ರ ಧೃತಿಗೆಡದೇ ಮೂವರನ್ನೂ ಸಂತೈಸಿದ್ದಾರೆ. ಸುಮಾರು ಅರ್ಧ ಗಂಟೆ ಚರ್ಚೆ ಬಳಿಕ ಆರೋಪಿ ದರ್ಶನ್ ಪುನಃ ಸೆಲ್‌ನತ್ತ ತೆರಳಿದ್ದಾರೆ. ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದರೂ.. ದೇವರಿದ್ದಾನೆ, ಧೈರ್ಯವಾಗಿರಿ ಎಂದು ದರ್ಶನ್‌ಗೆ ಧೈರ್ಯ ತುಂಬಿದ್ದಾರೆ. ಮೇಲ್ನೋಟಕ್ಕೆ ದರ್ಶನ್ ನಗು ನಗುತ್ತಲೇ ಇದ್ದರೂ.. ಅಂತರಂಗದಲ್ಲಿ ಕುಗ್ಗಿ ಹೋಗಿದ್ದಾರೆ ಎನ್ನುವುದು ಜೈಲಿನ ಮೂಲಗಳ ಮಾಹಿತಿ.
ಏಕೆಂದರೆ ಜೈಲಿನಲ್ಲಿ ದರ್ಶನ್ ಅವರಿಗೆ ಟಿವಿ, ಹಾಸಿಗೆ, ದಿಂಬುಗಳೂ ಸರಿ ಹೋಗುತ್ತಿಲ್ಲ. ಸೆಲ್ʻನಲ್ಲಿ ಒಂಟಿಯಾಗಿರಬೇಕು. ಪುಸ್ತಕ ಓದಬೇಕು ಎಂಬ ಪರಿಸ್ಥಿತಿ ಇತ್ತು. ಈಗ ಒಂದಿಷ್ಟು ಬದಲಾವಣೆಗಳಾಗಿವೆ. ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಜೈಲಾಧಿಕಾರಿಗಳು ಆಗಲ್ಲ ಎಂದು ಹೇಳಿದ್ದಾರೆ. ಇದನ್ನು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ, ಆದೇಶ ಪಡೆದುಕೊಂಡಿದ್ದಾರೆ.
ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆಯೋ.. ಅದನ್ನು ಕೊಡಬೇಕು ಎಂದು ಆದೇಶ ಮಾಡುತ್ತೇನೆ ಎಂದು ಜಡ್ಜ್ ಸೂಚಿಸಿದ್ದಾರೆ. ಚೇರು ಸಿಕ್ಕರೂ ಸಿಗಬಹುದು.
ಇತ್ತ ಜೈಲಿನಲ್ಲಿ ದರ್ಶನ್ʻಗೆ ಕೊನೆಗೂ ಟಿವಿ ಸಿಕ್ಕಿದೆ. ದರ್ಶನ್ ಇರುವ ಸೆಲ್ʻನಲ್ಲಿ ಟಿವಿ ಅಳವಡಿಸಲಾಗಿದೆ. ಆದರೆ, ಟಿವಿಯಲ್ಲಿ ಯಾವುದೇ ಖಾಸಗಿ ಟಿವಿ ಚಾನೆಲ್ ಬರುವುದಿಲ್ಲ. ಕನ್ನಡದ ಬೇರೆ ನ್ಯೂಸ್ ಚಾನೆಲ್ಲುಗಳೂ ಸಿಗುವುದಿಲ್ಲ. ಡಿಡಿ ನ್ಯಾಷನಲ್ ಮತ್ತು ಚಂದನ ವಾಹಿನಿಗಳು ಮಾತ್ರ ಲಭ್ಯವಾಗಲಿವೆ.
ಅಂದಹಾಗೆ ಟಿವಿ ವ್ಯವಸ್ಥೆಯೇ ಇಲ್ಲ, ಕೇಬಲ್ ಟಿವಿ ಚಾನೆಲ್ ಸೇರಿದಂತೆ ಯಾವ ಚಾನೆಲ್ಲುಗಳನ್ನೂ ನೋಡುವುದಕ್ಕೆ ಸಾಧ್ಯ ಇಲ್ಲದೇ ಇರೋವಾಗ.. ದರ್ಶನ್ ಅವರು ನ್ಯೂಸ್ ಚಾನೆಲ್ ನೋಡಿದ್ದಾರೆ ಎನ್ನುವುದೇ ಸುಳ್ಳು ಮಾಹಿತಿ. ಒಟ್ಟಿನಲ್ಲಿ ದರ್ಶನ್ ಅವರ ಬಗ್ಗೆ ಹೊರಬಂದಿರುವ ಸುದ್ದಿಗಳಲ್ಲಿ ಖಚಿತ ಸುದ್ದಿಗಳಿಗಿಂತ ಕಲ್ಪಿತ ಸುದ್ದಿಗಳೇ ಜಾಸ್ತಿ ಇವೆ.



