ಬಹುಶಃ ಇಂಥಾದ್ದೊಂದು ದಿನ ಬರುತ್ತದೆ ಎಂದು ಕನ್ನಡ ಪರ ಸಂಘಟನೆಗಳು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲವೇನೋ.. ಬೆಂಗಳೂರು ಬಂದ್ ಭಾಗಶಃ ಯಶಸ್ವಿಯಾಗಿದೆ. ಕಾವೇರಿ ಕೊಳ್ಳದ ಹಳ್ಳಿ ಹಳ್ಳಿಗಳಲ್ಲಿಯೂ ಬಂದ್ ಕಾವೇರಿದೆ. ಆದರೆ ಬೆಂಗಳೂರು ಬಂದ್ನಲ್ಲಿಯೇ ಗೊಂದಲ. ಏಕೆಂದರೆ ಒಂದೇ ವಾರ.. ಒಂದೇ ವಿಷಯ.. ಎರಡು ಬಂದ್ ನಡೆಯುತ್ತಿವೆ.
ಮಂಗಳವಾರದ ಬಂದ್ಗೆ ಕರೆ ಕೊಟ್ಟಿದ್ದು ಮೊದಲಿಗೆ ರೈತ ಸಂಘಟನೆಗಳು. ಆನಂತರ ಕನ್ನಡ ಸಂಘಟನೆಗಳು. ಆದರೆ ರೈತ ಸಂಘಟನೆಗಳ ಜೊತೆ ಇದೇ ಮೊದಲ ಬಾರಿಗೆ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಿನಿಂದ ನಿಂತುಕೊಳ್ಳಲಿಲ್ಲ.
ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬೆಂಬಲ ಇಲ್ಲ : ನಮ್ಮ ಸಂಘಟನೆ ಕಾರ್ಯಕರ್ತರು ಮಂಗಳವಾರ ಪ್ರತ್ಯೇಕವಾಗಿ ಗಾಂಧಿನಗರ ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. , ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ರಾಜ್ಯಾದ್ಯಂತ ಮುಂದುವರೆಯುತ್ತದೆ. ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಸೆ.29ಕ್ಕೆ ಹಲವು ಸಂಘಟನೆಗಳು ಕರೆ ನೀಡಿರುವ ಬೆಂಗಳೂರು, ಕರ್ನಾಟಕ ಬಂದ್ಗೆ ಕರವೇ ಬೆಂಬಲಿಸುವುದಿಲ್ಲ ಎಂದಿದ್ದಾರೆ ನಾರಾಯಣ ಗೌಡ. ಕರವೇ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಸಂಘಟನೆ ಹೊಂದಿದೆ. ಇನ್ನು ಪ್ರವೀಣ್ ಶೆಟ್ಟಿ ಬಣವೂ ಬಂದ್ಗೆ ಬೆಂಬಲ ನೀಡಿಲ್ಲ. ಆದರೆ ಮೊದಲಿಗೆ ಬೆಂಬಲ ಸೂಚಿಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.
ಇನ್ನು ಬಂದ್ಗೆ ಬೆಂಬಲ ಘೋಷಿಸಿದ್ದ ಹಲವು ಸಂಘಟನೆಗಳು ಬಂದ್ ನಾಳೆ ಇದೆ ಎನ್ನುವಾಗ ಬೆಂಬಲ ವಾಪಸ್ ಎಂದವು. ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಬಂದ್ ಕರೆಕ್ಟ್ ಆಗಿ ಹೇಳಬೇಕೆಂದರೆ ವಿಫಲಗಿವಾದ್ದು ನಿಜ.
ವಿಶೇಷವಾಗಿ ಇದಕ್ಕೂ ಮುನ್ನ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೋರಾಟ, ಬಂದ್ಗೆ ಕರೆ ಕೊಡಲಾಗುತ್ತಿತ್ತು. ನಂತರದ ಸ್ಥಾನಗಳಲ್ಲಿ ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ, ಚಿತ್ರರಂಗದ ಸಾರಾ ಗೋವಿಂದು, ರೈತ ನಾಯಕ ಕುರುಬೂರು ಶಾಂತಕುಮಾರ್, ಕೋಡಿ ಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ಇರುತ್ತಿದ್ದರು. ಆದರೆ ಈ ಬಾರಿ ಕೋಡಿಹಳ್ಳಿ ಮುಖಕ್ಕೆ ಮಸಿ ಬಿದ್ದಿದ್ದು, ನೇಪಥ್ಯಕ್ಕೆ ಸರಿದಿದ್ದಾರೆ. ಹಲವು ಕನ್ನಡ ಹೋರಾಟಗಾರರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಹಲವರು ಪ್ರತಿಷ್ಠೆಗೆ ಕಟ್ಟು ಬಿದ್ದಿದ್ದಾರೆ.
ಒಟ್ಟಿನಲ್ಲಿ ಒಗ್ಗಟ್ಟಿನ ಸಂದೇಶ ರವಾನಿಸಬೇಕಿದ್ದ ಬಂದ್ ವಿಷಯದಲ್ಲಿ ಬಿಕ್ಕಟ್ಟು ಪ್ರದರ್ಶನಗೊಂಡಿದೆ. ಅತ್ತ ರಾಜಕೀಯವಾಗಿ ಬಿಜೆಪಿ ಹಾಗೂ ಜೆಡಿಎಸ್ ಕೂಡಾ ಬಲಹೀನವಾಗಿರುವ ಸಂದರ್ಭದಲ್ಲಿ ನೆಲ-ಜಲದ ವಿಷಯದಲ್ಲೂ ರಾಜಕೀಯ ಮೇಲುಗೈ ಸಾಧಿಸಿರುವುದು ವಿಪರ್ಯಾಸ.



