ಹಲವು ವಿಶ್ವವಿದ್ಯಾಲಯಗಳು ಸೆಲಬ್ರಿಟಿಗಳಿಗೆ ಗೌರವ ಡಾಕ್ಟರೇಟ್ ಕೊಡುತ್ತವೆ. ಸಾಮಾನ್ಯವಾಗಿ ಚಿತ್ರತಾರೆಯರು ಗೌರವ ಡಾಕ್ಟರೇಟ್ ನಿರಾಕರಿಸುವುದಿಲ್ಲ. ಆದರೆ ಅಪರೂಪ ಎಂಬಂತೆ ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ಬೇಡ ಎಂದು ಸುದ್ದಿಯಾಗಿದ್ದಾರೆ. ಸುದೀಪ್ ಅವರ ನಟನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಲು ನಿರ್ಣಯ ಮಾಡಿತ್ತು. ಸುದೀಪ್ ಅವರು ಈ ಗೌರವವನ್ನು ನಿರಾಕರಣೆ ಮಾಡಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು ತಿಳಿಸಿದ್ದಾರೆ.
ತುಮಕೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ಮಾಡಿ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧಾರ ಮಾಡಲಾಗಿತ್ತು. ಈ ಬಗ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಗಿತ್ತು. ಸಂಪರ್ಕದ ಬಳಿಕ ಡಾಕ್ಟರೇಟ್ ಪದವಿ ಪಡೆಯುವ ಕುರಿತು ತಿಳಿಸಲು 2 ದಿನ ಕಾಲಾವಕಾಶ ಕೇಳಿದ್ದ ಸುದೀಪ್ ಬಳಿಕ ನಿರಾಕರಿಸಿದರು.
ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ಸುದೀಪ್ ಅವರು ಸಮಾಜದಲ್ಲಿ ನನಗಿಂತ ಹೆಚ್ಚು ಸೇವೆ ಮಾಡಿದ ಅನೇಕ ಹಿರಿಯರು ಇದ್ದಾರೆ. ಅಂತವರನ್ನು ಗುರುತಿಸಿ ಡಾಕ್ಟರೇಟ್ ಗೌರವ ನೀಡಬೇಕು ಎಂದು ಹೇಳಿದರು ಎನ್ನುವುದು ವೆಂಕಟೇಶ್ವರುಲು ಅವರ ಮಾತು.
ಚಿತ್ರರಂಗದ ಖ್ಯಾತ, ಹಿರಿಯ ನಿರ್ದೇಶಕರ ಮೂಲಕವೂ ಸುದೀಪ್ ಅವರನ್ನು ಸಂಪರ್ಕಿಸಿ ಡಾಕ್ಟರೇಟ್ ಪದವಿ ಪಡೆಯುವಂತೆ ತಿಳಿಸಲಾಗಿತ್ತು. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಭಿನಯ, ಸಮಾಜ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸುದೀಪ್ ಅವರಿಗೆ ಡಾಕ್ಟರ್ ಪದವಿ ನೀಡಲು ನಿರ್ಧಾರ ಮಾಡಲಾಗಿತ್ತು ಎಂದು ಕುಲಪತಿ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಮೊದಲಿಗ ಡಾ.ರಾಜ್ ಕುಮಾರ್, 1976ರಲ್ಲಿ ಮೈಸೂರು ವಿವಿ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಅದಾದ ನಂತರ ಹಲವರಿಗೆ ಗೌಡಾ ನೀಡಿ ಗೌರವಿಸಲಾಗಿದೆ.
ಪಾರ್ವತಮ್ಮ ರಾಜ್ ಕುಮಾರ್ : ಬೆಂಗಳೂರು ವಿವಿ (2015)
ವಿಷ್ಣುವರ್ಧನ್ : ಬೆಂಗಳೂರು ವಿವಿ (2005)
ಬಿ.ಸರೋಜಾದೇವಿ : ಬೆಂಗಳೂರು ವಿವಿ (2006)
ಗಿರೀಶ್ ಕಾಸರವಳ್ಳಿ : ಶಿವಮೊಗ್ಗ ಕುವೆಂಪು ವಿವಿ (2006)
ಲೀಲಾವತಿ : ತುಮಕೂರು ವಿವಿ (2008)
ಕೆ.ಎಸ್. ಅಶ್ವತ್ಥ್ : ತುಮಕೂರು ವಿವಿ (2008)
ಬರಗೂರು ರಾಮಚಂದ್ರಪ್ಪ : ಶಿವಮೊಗ್ಗ ಕುವೆಂಪು ವಿವಿ (2008)
ಭಾರತಿ ವಿಷ್ಣುವರ್ಧನ್ : ಕರ್ನಾಟಕ ರಾಜ್ಯ ಮುಕ್ತ ವಿವಿ(2010)
ಜಯಂತಿ : ಮೈಸೂರು ವಿವಿ (2012)
ರಾಜೇಶ್ : ಕನ್ನಡ ವಿವಿ, ಹಂಪಿ (2012)
ಅಂಬರೀಷ್ : ಕರ್ನಾಟಕ ವಿವಿ, ಧಾರವಾಡ (2013)
ಶಿವರಾಜ್ ಕುಮಾರ್ : ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ, ಬಳ್ಳಾರಿ (2014)
ಹಂಸಲೇಖ : ಬೆಂಗಳೂರು ವಿವಿ (2014)
ಅನಂತ್ ನಾಗ್ : ಬೆಂಗಳೂರು ಉತ್ತರ ವಿವಿ (2022)
ದ್ವಾರಕೀಶ್ : ಬೆಂಗಳೂರು ವಿವಿ (2022)
ರಮೇಶ್ ಅರವಿಂದ್ : ರಾಣಿ ಚೆನ್ನಮ್ಮ ವಿವಿ (2022)
ರವಿಚಂದ್ರನ್ : ರಾಣಿ ಚೆನ್ನಮ್ಮ ವಿವಿ (2022)
ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪಡೆದಿರುವುದು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಮಾತ್ರ. ಇವರೂ ಸೇರಿದಂತೆ ಹಲವರು ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಶ್ರೀನಾಥ್, ಸುಂದರ್ ರಾಜ್, ಉಪೇಂದ್ರ, ರವಿಚಂದ್ರನ್, ಥ್ರಿಲ್ಲರ್ ಮಂಜು, ಸುಮಲತಾ ಅಂಬರೀಷ್, ಸುಧಾರಾಣಿ, ಎಸ್. ನಾರಾಯಣ್ ಮೊದಲಾದವರು ಖಾಸಗಿ ಹಾಗೂ ವಿದೇಶಿ ವಿವಿಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಗಾಯಕ ಗಂಗಾಧರ ಶಾಸ್ತ್ರಿ ಸಂಸ್ಕೃತದಲ್ಲಿ ಉತ್ತರ ಪ್ರದೇಶ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ನಟಿ ಜಯಮಾಲ (ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆ,ಒಂದು ಅಧ್ಯಯನ) ಹಾಗೂ ನಟ ಶ್ರೀಧರ್ (ಭರತನಾಟ್ಯ ಕುರಿತ ಪ್ರಬಂಧ) ಅಧ್ಯಯನ ಮಾಡಿ ಪಿಎಚ್ʻಡಿ ಪ್ರಬಂಧ ಬರೆದು ಡಾಕ್ಟರೇಟ್ ಪಡೆದಿದ್ದಾರೆ. ನಟಿ ಪವಿತ್ರಾ ಲೋಕೇಶ್ ಡಾಕ್ಟರೇಟ್ ಪದವಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಆ ಲೆಕ್ಕದಲ್ಲಿ ನೋಡಿದರೆ, ಡಾಕ್ಟರೇಟ್ ಪದವಿ ಪಡೆದ ಚಿತ್ರರಂಗದವರಲ್ಲಿ ಗೌರವ ಡಾಕ್ಟರೇಟ್ ಪಡೆದವರೇ ಹೆಚ್ಚಿದ್ದಾರೆ. ಜಯಮಾಲ ಹಾಗೂ ಶ್ರೀಧರ್ ಮಾತ್ರ ಪ್ರಬಂಧ ಮಂಡಿಸಿ ಡಾಕ್ಟರೇಟ್ ಸಂಪಾದಿಸಿದ್ದಾರೆ.



