ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ2 ಆಗಿರುವ ದರ್ಶನ್ 6 ವಾರಗಳ ಕಾಲ ಜಾಮೀನು ಪಡೆದುಕೊಂಡಿದ್ದು, ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ವರ್ಷಗಳಿಂದ ಕಾಡುತ್ತಿದ್ದ ಬೆನ್ನುನೋವಿಗೆ ಚಿಕಿತ್ಸೆ ಪಡೆಯೋಕೆ ಮುಂದಾಗಿದ್ದಾರೆ. ಜೈಲಿನಲ್ಲಿದ್ದ ಸುಮಾರು 4 ತಿಂಗಳ ಅವಧಿಯಲ್ಲಿ ಬೆನ್ನು ನೋವು ತೀವ್ರವಾಗಿದ್ದು, ಇದೇ ಕಾರಣ ಕೊಟ್ಟು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಆಪರೇಷನ್ ಅಂತಿಮ ಆಯ್ಕೆ ಎಂಬಂತೆ ಇಟ್ಟುಕೊಂಡಿದ್ದಾರೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ಆಯ್ಕೆಗೂ ಕಾರಣ ಇದೆ. ಏಕೆಂದರೆ ಕಳೆದ ಬಾರಿ ದರ್ಶನ್ ಅವರಿಗೆ ಬಿಜಿಎಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಮೈಸೂರಿನಲ್ಲಿ. ಈ ಬಾರಿ ಕೋರ್ಟು ಬೆಂಗಳೂರು ಬಿಟ್ಟು ಕದಲದಂತೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅದೇ ಬಿಜಿಎಸ್ ಆಸ್ಪತ್ರೆಯ ಕೆಂಗೇರಿ ಶಾಖೆಯಲ್ಲಿ ದಾಖಲಾಗಿದ್ದಾರೆ.
ಅವರ ಬಳಿ ಹೆಚ್ಚು ಸಮಯಾವಕಾಶ ಇಲ್ಲ. ಹೈಕೋರ್ಟ್ ಕೊಟ್ಟಿರುವುದು 6 ವಾರಗಳ ಅವಧಿಯಷ್ಟೇ. ಹೀಗಾಗಿ ತುರ್ತಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೆ ದರ್ಶನ್ ಸೆಲಬ್ರಿಟಿ. ನಟರು, ರಾಜಕಾರಣಿಗಳು ಹಾಗೂ ಸಂಬಂಧಿಕರ ಬಂಧು-ಬಳಗ ಹೆಚ್ಚು. ಹೀಗಾಗಿ ದರ್ಶನ್ ಆಸ್ಪತ್ರೆಯಲ್ಲಿ ವಿವಿಐಪಿ ವಾರ್ಡ್ʻನಲ್ಲಿ ಅಡ್ಮಿಟ್ ಆಗಿದ್ದಾರಂತೆ.
ದರ್ಶನ್ ಇರುವ ವಾರ್ಡ್ ಒಂದು ಪುಟ್ಟ ಮನೆಯಂತಿದೆ. 750 ಚದರಡಿ ವಿಶಾಲವಾಗಿರುವ ವಾರ್ಡಿನಲ್ಲಿ ಪ್ರೈವೇಸಿ ಸಿಗುತ್ತದೆ. ಹೀಗಾಗಿಯೇ ದರ್ಶನ್ ಈ ವಾರ್ಡ್ ಆಯ್ಕೆ ಮಾಡಿಕೊಂಡಿದ್ದಾರೆ. ವಾರ್ಡಿನಲ್ಲಿ ಒಂದು ಹಾಲ್, ವಿಶಾಲವಾದ ರೂಮ್ ಹಾಗೂ ಸಣ್ಣ ಕಿಚನ್ ಕೂಡ ಇದೆ. ಆಪ್ತರು ಬಂದರೆ ಪ್ರತ್ಯೇಕವಾಗಿ ಕುಳಿತು ಮಾತನಾಡಲು ವ್ಯವಸ್ಥೆ ಇದೆ. ಸ್ಮಾರ್ಟ್ ಟಿವಿ, ಏರ್ ಕಂಡೀಷನ್ ವ್ಯವಸ್ಥೆಯೂ ಇದೆ. ದರ್ಶನ್ ಅವರು ರೋಗಿಯಾಗಿರುವುದರಿಂದ ಅವರ ಜೊತೆ ಇನ್ನೂ ಇಬ್ಬರು ಮೂವರು ತಂಗುವಷ್ಟು ವಿಶಾಲ ಜಾಗದ ವ್ಯವಸ್ಥೆಯೂ ಇದೆ.
ಬಿಜಿಎಸ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಹಲವು ಪರೀಕ್ಷೆಗಳನ್ನು ಮಾಡಿದೆ. ಮೊದಲಿಗೆ ದರ್ಶನ್ ಅವರ ಬಿಪಿ, ಶುಗುರ್, ಇಸಿಜಿ ಸ್ಕ್ಯಾನಿಂಗ್ ಮಾಡಿದ್ದು, ನಂತರ ಬೆನ್ನು ನೋವಿಗೆ ಸಂಬಂಧಿಸಿದ ಫಿಸಿಯೋಥೆರಪಿ ಮಾಡಲಾಗುತ್ತದೆ. ಎಲ್ಲಾ ಟೆಸ್ಟ್ಗಳ ರಿಪೋರ್ಟ್ ಬಂದ ಬಳಿಕ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೋ? ಬೇಡವೋ ಎಂಬುದರ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.
ಕಾಲು ನೋವಿನಿಂದಾಗಿ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್ನೆಸ್ ಇದ್ದು, ಆ ಕಾಲಿನ ಚಟುವಟಿಕೆ ಕಡಿಮೆಯಾಗಿದೆ. ಹೆಚ್ಚಿನ ತಪಾಸಣೆ ಮಾಡಬೇಕು. ಯಾವ ರೀತಿ ಚಿಕಿತ್ಸೆ ಕೊಡ ಬೇಕು ಎಂಬುದನ್ನು ಆನಂತರ ನಿರ್ಧರಿಸುತ್ತೇವೆ. ಎಂಆರ್ಐ, ಎಕ್ಸ್ರೇ ಮತ್ತು ರಕ್ತದ ಪರೀಕ್ಷೆ ಮಾಡಿಯೇ ತೀರ್ಮಾನ ಪಡೆಯುತ್ತೇವೆ. ವಾರದ ಹಿಂದೆ ಮಾಡಿದ ಎಂಆರ್ಐ ಫಿಲ್ಮ್ ನಮಗೆ ಲಭ್ಯವಾಗಿಲ್ಲ.
ಆದ್ದರಿಂದ ಇನ್ನೊಮ್ಮೆ ಎಂಆರ್ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್ಗಳು ಸಿಗುತ್ತವೆ. ತುಂಬ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದು ವೈದ್ಯ ನವೀನ್ ಅಪ್ಪಾಜಿಗೌಡ ಮಾಹಿತಿ ನೀಡಿದ್ದಾರೆ.
ಅಂದರೆ ಮೂಲಗಳ ಪ್ರಕಾರ ದರ್ಶನ್ ಅವರಿಗೆ ಆಪರೇಷನ್ʻನ್ನು ಮೊದಲ ಆಯ್ಕೆಯನ್ನಾಗಿ ಇಟ್ಟುಕೊಂಡಿಲ್ಲ. ಅಂತಿಮ ಆಯ್ಕೆಯನ್ನಾಗಿ ನೋಡಲಾಗುತ್ತಿದೆ.



